ಬೆಂಗಳೂರು, ಜನವರಿ 23: ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿ ಬೆಂಗಳೂರು (ಬೆಂಗಳೂರು ಸಂಚಾರ) ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (ಟ್ರಾಫಿಕ್ ಇಂಡೆಕ್ಸ್) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಕಾರಣವೇನು?
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಒತ್ತಡ ಮತ್ತು ನಿರಂತರ ಕಾಮಗಾರಿಗಳ ಸಂಚಾರ ಸಮಸ್ಯೆ ತೀವ್ರಗೊಳಿಸುತ್ತಿದೆ.
ವಾಹನ ಸಂಚಾರದ ಸರಾಸರಿ ವೇಗದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಆದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. 2025ರಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಸಂಚರಿಸಬಹುದಾಗಿದ್ದರೆ, 2024ರಲ್ಲಿ ಇದು 4.2 ಕಿಲೋಮೀಟರ್ ಆಗುತ್ತಿದೆ.
10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ!
ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿಯಾಗಿದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಚಾರ ದಟ್ಟಣೆಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದು, ಪೊಲ್ಯಾಂಡ್‌ನ ಲೋಡ್ಜ್ ನಗರ ನಾಲ್ಕನೇ ಸ್ಥಾನವನ್ನು ಪಡೆದಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಮ್ಯಾಪಲ್ಸ್ ಆಯಪ್ ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು
ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರಗಳ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ನಗರಾಭಿವೃದ್ಧಿ ಮತ್ತು ಸಂಚಾರ ನಿರ್ವಹಣೆ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ