ಪಟ್ನಾ, ಜನವರಿ 25: ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗ ಮತ್ತು ಮಾಜಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (ತೇಜಸ್ವಿ ಯಾದವ್) ಅವರು ರಾಷ್ಟ್ರೀಯ ಜನತಾ ದಳದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಲಾಲೂಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಉಪಸ್ಥಿತಿಯಲ್ಲಿ ತೇಜಸ್ವಿ ಯಾದವ್ ಅವರಿಗೆ ಪಕ್ಷದ ಪರಮೋಚ್ಚ ಅಧಿಕಾರವನ್ನು ನೀಡಲಾಗಿದೆ.
ತೇಜಸ್ವಿ ಯಾದವ್ ಅವರು ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡ ವಿಚಾರವನ್ನು ಎಕ್ಸ್ಪೋಸ್ಟ್ನಲ್ಲಿ ಹಂಚಿಕೊಂಡಿರುವ ರಾಷ್ಟ್ರೀಯ ಜನತಾ ದಳ, ‘ಹೊಸ ಯುಗದ ಉದಯವಾಗಿದೆ’ ಎಂದು ಬಣ್ಣಿಸಿದೆ.
ಇದನ್ನೂ ಓದಿ: ಮನ್ ಕಿ ಬಾತ್: ಭಾರತೀಯ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಬೇಕು: ಪ್ರಧಾನಿ ಮೋದಿ
ತೇಜಸ್ವಿ ಯಾದವ್ ಅವರು ಅಧ್ಯಕ್ಷರಾಗಿ ನೇಮಕವಾಗುವ ಮುನ್ನವೇ ಪಕ್ಷದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡುವ ಕಾರ್ಯ ನಿರ್ವಹಿಸಿದ್ದರು. ಬೂತ್ ಮಟ್ಟದಲ್ಲಿ ಪಕ್ಷದ ಸ್ವರೂಪದಲ್ಲಿ ಬದಲಾವಣೆ ಮಾಡಲು ಯೋಜನೆ ಆರ್ಜೆಡಿ ಕಚೇರಿಯಲ್ಲಿ ಕಾರ್ಯನಿರ್ವಹಣೆಯನ್ನುದ್ದೇಶಿಸಿ ಯಾದವ್ ಹೇಳಿದ್ದಾರೆ. ಅದಾಗಲೇ ಅವರಿಗೆ ಪಕ್ಷಾಧ್ಯಕ್ಷ ಪಟ್ಟ ದಕ್ಕುವುದು ನಿಶ್ಚಿತವಾಗಿತ್ತು.
ಪಕ್ಷದ ಸಂಕಷ್ಟ ಕಾಲಘಟ್ಟದಲ್ಲಿ ಜವಾಬ್ದಾರಿ…
ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಪಕ್ಷ ಹೀನಾಯವಾಗಿ ಸೋತಿತ್ತು. ಜೆಡಿಯು ನೇತಾರ ನಿತೀಶ್ ಕುಮಾರ್ ಹಲವು ವರ್ಷಗಳ ಕಾಲ ಸತತವಾಗಿ ಬಿಹಾರ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಸಂಸ್ಥಾಪಿತ ಆರ್ ಜೆಡಿ ಪಕ್ಷದ ಶಕ್ತಿ ವರ್ಷದಿಂದ ವರ್ಷಕ್ಕೆ ಕುಂದುತ್ತಾ ಬರುತ್ತಿದೆ. ಈ ಪರಿಸ್ಥಿತಿಯಲ್ಲಿ ಮಾಜಿ ಉಪಮುಖ್ಯಮಂತ್ರಿಯೂ ಆದ ತೇಜಸ್ವಿ ಯಾದವ್ ಅವರು ಪಕ್ಷದ ಹೊಸ ಜೀವ ಕೊಡಲು ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದು ಕುತೂಹಲದ ಸಂಗತಿ.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ
ರೋಹಿಣಿ ಆಚಾರ್ಯ ಟೀಕೆ
ಲಾಲೂ ಪ್ರಸಾದ್ ಯಾದವ್ ಅವರ ಮಗಳು ರೋಹಿಣಿ ಆಚಾರ್ಯ ಅವರು ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆರ್ಜೆಡಿ ಪಕ್ಷದ ನಿಯಂತ್ರಣವು ನುಸುಳುಕೋರರ ಕೈಗೆ ಸಿಕ್ಕಿದೆ. ಲಾಲೂವಾದವನ್ನು ನಾಶ ಮಾಡುವುದೇ ಈ ಸಂಚುಕೋರ ಏಕೈಕ ಗುರಿ ಎಂದು ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ಸಿಡಿಗುಟ್ಟಿದ್ದಾರೆ.
ರೋಹಿಣಿ ಅವರನ್ನು ಇತ್ತೀಚೆಗಷ್ಟೇ ಲಾಲೂ ಅವರ ಮನೆಯಿಂದ ಹಾಗೂ ಕುಟುಂಬದಿಂದ ಹೊರಹಾಕಲಾಯಿತು. ರೋಹಿಣಿ ಅವರು ತಮ್ಮ ತಂದೆ ಲಾಲೂ ಅವರ ಅನಾರಾಗ್ಯವನ್ನು ತೇಜಸ್ವಿ ಯಾದವ್ ದುರುಪಯೋಗಪಡಿಸಿಕೊಂಡು ಪಕ್ಷ ಮತ್ತು ಕುಟುಂಬವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಾರಿ ಬಾರಿ ಆರೋಪಿಸುತ್ತಲೇ ಬಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ