ರಜನೀಕಾಂತ್ (Rajinikanth) ಕೇವಲ ಸ್ಟಾರ್ ನಟ ಮಾತ್ರವೇ ಅಲ್ಲ, ಅವರೊಬ್ಬ ಅದ್ಭುತ ವ್ಯಕ್ತಿ. ತಾವು ಒಳಿತು ಮಾಡುವ ಜೊತೆಗೆ ಒಳಿತು ಮಾಡುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಸಹ ಮಾಡುತ್ತಲೇ ಇರುತ್ತಾರೆ. ತಮಗೆ ಹಿಡಿಸಿದ ವ್ಯಕ್ತಿ, ವಿಷಯದ ಬಗ್ಗೆ ಬಹಿರಂಗವಾಗಿ ಹೇಳಿ ಅವರ ಮೌಲ್ಯವನ್ನು ಹೆಚ್ಚು ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಬಿಡುಗಡೆಯಾದಾಗ ಸಿನಿಮಾ ನೋಡಿ ಮೆಚ್ಚಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ, ಚಿನ್ನದ ಉಡುಗೊರೆಯಾಗಿ ನೀಡಿ, ಸನ್ಮಾನಿಸಿದರು ರಜನೀಕಾಂತ್. ಇದೀಗ ಬೀದಿ ಬದಿ ವ್ಯಾಪಾರಿಗಳನ್ನು ಅವರ ಕುಟುಂಬ ಸಮೇತ ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ ರಜನೀಕಾಂತ್, ಕಾರಣವೇನು ಗೊತ್ತೇ?
ರಜನೀಕಾಂತ್ ಅವರು ಶೇಖರ್ ಹೆಸರಿನ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಮನೆಗೆ ಕರೆಸಿದ್ದರು. ಶೇಖರ್ ಮಾತ್ರವೇ ಅಲ್ಲದೆ ಅವರ ಕುಟುಂಬದವರನ್ನೆಲ್ಲ ಮನೆಗೆ ಕರೆಸಿದ್ದ ರಜನೀಕಾಂತ್, ತಮ್ಮ ಮನೆಯಲ್ಲೇ ಅವರಿಗೆಲ್ಲ ಆತಿಥ್ಯ ತೋರಿಸಿದ್ದಾರೆ ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿ ಬಳಿಕ ಅವರಿಗೆ ತಮ್ಮಿಷ್ಟ ಗುರುವಿನ ಚಿತ್ರವನ್ನು ನೀಡಿ ಸನ್ಮಾನಿಸಿದರು. ಶೇಖರ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಸಹ ರಜನೀಕಾಂತ್ ಮಾಡುತ್ತಿದ್ದಾರೆ. ಇದೆಲ್ಲ ರಜನೀಕಾಂತ್ ಮಾಡಿದ್ದೇಕೆ?
ಅಸಲಿಗೆ ಶೇಖರ್, ರಜನೀಕಾಂತ್ ಅವರ ದೊಡ್ಡ ಅಭಿಮಾನಿ. ಆದರೆ ಈ ಕಾರಣಕ್ಕಲ್ಲ, ಅವರನ್ನು ರಜನೀಕಾಂತ್ ಮನೆಗೆ ಕರೆಸಿ ಸನ್ಮಾನಿಸಿದ್ದು. ರಜನೀಕಾಂತ್ ಕರೆಸಲು ಕಾರಣ, ಶೇಖರ್ ಮಾಡುತ್ತಿರುವ ಅಪರೂಪದ ಕಾರ್ಯ. ಮಧುರೈನಲ್ಲಿ ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್, ಕಳೆದ 15 ವರ್ಷಗಳಿಂದ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿಯ ಹೋಟೆಲ್ಗಳಲ್ಲಿ ಒಂದು ಪರೋಟಕ್ಕೆ 30 ರಿಂದ 50 ರೂಪಾಯಿ ಬೆಲೆ ಇದೆ ಶೇಖರ್ ಕಳೆದ 15 ವರ್ಷಗಳಿಂದ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಇದು ಒಂದು ರೀತಿ ಸಾಧನೆಯೇ.
ಇದನ್ನೂ ಓದಿ:ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ
ರಜನೀಕಾಂತ್ ಅಭಿಮಾನಿ ಆಗಿರುವ 15 ವರ್ಷಗಳ ಹಿಂದೆ ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು, ಅಂದಿನಿಂದ ಇಂದಿನವರೆಗೂ ಅದೇ ಬೆಲೆಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಜನೀಕಾಂತ್ ಅಪ್ಪಟ ಅಭಿಮಾನಿ ಆಗಿರುವ ಅವರು, ತಮ್ಮ ಪುಟ್ಟ ಹೋಟೆಲ್ ಅಲ್ಲೆಲ್ಲ ರಜನೀಕಾಂತ್ ಚಿತ್ರಗಳನ್ನು ಹಾಕಿದ್ದಾರೆ. ಕೈಯ ಮೇಲೆ ರಜನೀಕಾಂತ್ ಚಿತ್ರದ ಹಚ್ಚೆಯನ್ನೂ ಹಾಕಿದ್ದಾರೆ.
ಇದೇ ಕಾರಣಕ್ಕೆ ರನೀಕಾಂತ್ ಅವರು ಶೇಖರ್ ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಅವರು ಮಾಡುತ್ತಿರುವ ಸೇವೆಗೆ ಧನ್ಯವಾದ ತಿಳಿಸದೆ, ಅವರಿಗೆ ಚಿನ್ನದ ಚೈನ್ ನೀಡಿ, ಹಣ ಸಹ ನೀಡಿ ಆಶೀರ್ವಾದ ಮಾಡಿದ್ದಾರೆ. ಶೇಖರ್ ಅವರಿಗೆ ರಜನೀಕಾಂತ್ ಸನ್ಮಾನಿಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ