ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ (ಬೆಂಗಳೂರು) ಜನಸಂಖ್ಯೆಯ ವಾಹನ ಸಂಖ್ಯೆ ಅತಿ, ಟ್ರಾಫಿಕ್ ಜಾಮ್ (ಟ್ರಾಫಿಕ್ ಜಾಮ್) ತಲ್ಲಣ ಹುಟ್ಟಿಸುತ್ತಿದೆ. ಇನ್ನು ಅನೇಕ ಜಾಗಗಳಲ್ಲಿ ಬೇಕಾಬಿಟ್ಟಿ ಅನಧಿಕೃತ ಪಾರ್ಕಿಂಗ್ ಕೂಡ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲು ಜಿಬಿಎ ಮತ್ತು ಸಂಚಾರ ಪೊಲೀಸ್ ನಿರ್ಧರಿಸಿದೆ.
ಬೆಂಗಳೂರಿನ ಅನಧಿಕೃತ ಪಾರ್ಕಿಂಗ್ ಜಾಲದ ಬಗ್ಗೆ ‘ಟಿವಿ9’ ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ. ನಗರದ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರದ ರಸ್ತೆಗಳು ಪಾರ್ಕಿಂಗ್ಗೆ ಮಾತ್ರ ಸೀಮಿತವಾಗಿದೆ. ಪಾರ್ಕ್ ಮಾಡಿ ವರ್ಷಾನುಗಟ್ಟಲೆ ಆದರೂ ವಾಹನಗಳು ಇತ್ತ ತಿರುಗಿ ನೋಡುತ್ತಿಲ್ಲ. ವಾಹನಗಳು ಧೂಳು ಹಿಡಿದು, ತುಕ್ಕು ಹಿಡಿದರೂ ಇಲ್ಲೇ ಬಿದ್ದಿವೆ.
ಇನ್ನು ಮಲ್ಲೇಶ್ವರಂ 8ನೇ ಮುಖ್ಯರಸ್ತೆ ಜನವಸತಿ ಪ್ರದೇಶಗಳೂ ಅನಾಮಿಕ ವಾಹನಗಳ ಪಾರ್ಕಿಂಗ್ ಸ್ಪಾಟ್ ಆಗಿವೆ. 2019ರಲ್ಲಿ ನಿಲ್ಲಿಸಿಹೋಗಿದ್ದ ವಾಹನವೊಂದು ಇನ್ನೂ ಕದಲಲೇ ಇಲ್ಲ. ಸ್ಕ್ರಾಪ್ ಆದ ವಾಹನಕ್ಕೂ ಕೂಡ ಇದೆ ಆಶ್ರಯತಾಣ. ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ವಿಚಾರ ಮುಟ್ಟಿಸಿದರೂ ಪ್ರಯೋಜನವಾಗಿಲ್ಲ.
ನಗರದ ಹಲವು ಕಡೆಗಳಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವ ಕೆಟ್ಟ ಪ್ರವೃತ್ತಿ. ಹೀಗಾಗಿಯೇ ಟೋಯಿಂಗ್ ವ್ಯವಸ್ಥೆ ಮತ್ತೆ ಜಾರಿ ಮಾಡುತ್ತಿರುವುದು ಒಳ್ಳೆಯದೇ ಎಂದು ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!
ಇತ್ತೀಚೆಗಷ್ಟೇ, ಸಂಚಾರ ದಟ್ಟಣೆಯ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಬೆಂಗಳೂರು ಸುದ್ದಿಯಾಗಿತ್ತು. ನೆದರ್ಲೆಂಡ್ಸ್ ಮೂಲದ ‘ಟಾಮ್ಟಾಮ್ ಸಂಸ್ಥೆ’ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ ವರದಿಯಲ್ಲಿ, ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ವಿಶ್ವದಲ್ಲೇ ಟಾಪ್ 2 ನಗರವಾಗಿ ಹೊರಹೊಮ್ಮಿದೆ. 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ