ಮೆಲ್ಬರ್ನ್: ಸರ್ಬಿಯಾದ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್ರ 25ನೇ ಗ್ರ್ಯಾನ್ಸ್ಲಾಂ ಪ್ರಶಸ್ತಿ ಗೆಲುವಿನ ಕನಸು ಮತ್ತೆ ಭಗ್ನಗೊಂಡಿದೆ. ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ನಲ್ಲಿ 38 ವರ್ಷದ ಜೋಕೋವಿಚ್ಗೆ 22 ವರ್ಷದ ಯುವ ಸೂಪರ್ಸ್ಟಾರ್ ಕಾರ್ಲೊಸ್ ಆಲ್ಕರಜ್ ಸೋಲುಣಿಸಿದರು. ಇದರೊಂದಿಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದ ಆಲ್ಕರಜ್, ಕೆರಿಯರ್ ಗ್ರ್ಯಾನ್ಸ್ಲಾಂ ಕೂಡಾ ಪೂರ್ಣಗೊಳಿಸಿದರು.

ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಜೋಕೋ 6-2 ಅಂತರದಲ್ಲಿ ಗೆದ್ದರು. 2ನೇ ಸೆಟ್ನ ಮೊದಲ ಗೇಮ್ನಲ್ಲೂ ಮೇಲುಗೈ ಸಾಧಿಸಿದರಾದರೂ ಬಳಿಕ ಆಲ್ಕರಜ್ ನೈಜ ಆಟ ಅನಾವರಣಗೊಂಡಿತು. 2ನೇ ಸೆಟ್ನಲ್ಲಿ ಆಲ್ಕರಜ್ 6-2 ಅಂತರದಲ್ಲಿ ಗೆದ್ದರು. 3ನೇ ಸೆಟ್ ಗೆಲ್ಲುವುದು ಕೂಡಾ ಆಲ್ಕರಜ್ಗೆ ಕಷ್ಟವೆನಿಸಲಿಲ್ಲ. ಆದರೆ ನಿರ್ಣಾಯಕ 4ನೇ ಸೆಟ್ನಲ್ಲಿ ಜೋಕೋ ಪ್ರತಿರೋಧ ತೋರಿದರು. ಒಂದು ಹಂತದಲ್ಲಿ ಇಬ್ಬರೂ 3-3 ಸಮಬಲಗೊಂಡಿದ್ದರೂ, ಕೊನೆಯಲ್ಲಿ ಆಲ್ಕರಜ್ 7-5 ಅಂತರದಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡರು.

ಮೊದಲ ಸೋಲು:

ಜೋಕೋಗೆ ಇದು ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಮೊದಲ ಸೋಲು. ಈ ಹಿಂದೆ 10 ಬಾರಿ ಫೈನಲ್ಗೇರಿದ್ದ ಅವರು ಎಲ್ಲಾ ಬಾರಿಯೂ ಟ್ರೋಫಿಗೆ ಮುತ್ತಿಟ್ಟಿದ್ದರು. 2024, 2025ರಲ್ಲಿ ಸೆಮೀಸ್ನಲ್ಲಿ ಸೋತಿದ್ದ ಅವರು, ಈ ಬಾರಿ ಫೈನಲ್ನಲ್ಲಿ ಎಡವಿದರು.

25ನೇ ಕಿರೀಟಕ್ಕಾಗಿ 9 ಗ್ರ್ಯಾನ್ಸ್ಲಾಂ ಆಡಿದ್ರೂ ಜೋಕೋಗಿಲ್ಲ ಯಶಸ್ಸು

ಜೋಕೋವಿಚ್ 2023ರ ಯುಎಸ್ ಓಪನ್ ಗೆಲ್ಲುವ ಮೂಲಕ ತಮ್ಮ ಗ್ರ್ಯಾನ್ಸ್ಲಾಂ ಗೆಲುವಿನ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸಿದ್ದರು. ಆ ಬಳಿಕ ಎರಡೂವರೆ ವರ್ಷದಲ್ಲಿ ಅವರು 9 ಗ್ರ್ಯಾನ್ಸ್ಲಾಂ ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ ಒಮ್ಮೆಯೂ ಟ್ರೋಫಿ ಗೆಲ್ಲಲಾಗಲಿಲ್ಲ. 2024ರ ವಿಂಬಲ್ಡನ್ ಹಾಗೂ ಈ ಬಾರಿ ಆಸ್ಟ್ರೇಲಿಯನ್ ಓಪನ್ ಸೇರಿ 2 ಬಾರಿ ಫೈನಲ್ ಸೋತಿದ್ದಾರೆ. 5 ಬಾರಿ ಸೆಮಿಫೈನಲ್, ಒಮ್ಮೆ ಕ್ವಾರ್ಟರ್, ಮತ್ತೊಮ್ಮೆ 3ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.

–ಕೆರಿಯರ್ ಗ್ರ್ಯಾನ್ಸ್ಲಾಂ ಗೆದ್ದ ಅತಿಕಿರಿಯ ಟೆನಿಸಿಗ ಆಲ್ಕರಜ್

ಗ್ರ್ಯಾನ್ಸ್ಲಾಂ ಟೂರ್ನಿಗಳು 4 ಇವೆ. ಆಸ್ಟ್ರೇಲಿಯನ್, ಫ್ರೆಂಚ್, ವಿಂಬಲ್ಡನ್ ಹಾಗೂ ಯುಎಸ್ ಓಪನ್. ಈ ಎಲ್ಲಾ ಟೂರ್ನಿಯಲ್ಲೂ ಕನಿಷ್ಠ ಒಮ್ಮೆ ಚಾಂಪಿಯನ್ ಆದರೆ ಅದಕ್ಕೆ ಕೆರಿಯರ್ ಗ್ರ್ಯಾನ್ಸ್ಲಾಂ ಎನ್ನುತ್ತಾರೆ. ಈಗಾಗಲೇ ತಲಾ 2 ಬಾರಿ ವಿಂಬಲ್ಡನ್, ಯುಎಸ್, ಪ್ರೆಂಚ್ ಓಪನ್ ಗೆದ್ದಿದ್ದ ಆಲ್ಕರಜ್, ಆಸ್ಟ್ರೇಲಿಯನ್ ಓಪನ್ ಕಿರೀಟ ಗೆಲ್ಲುವ ಮೂಲಕ ಕೆರಿಯರ್ ಗ್ರ್ಯಾನ್ಸ್ಲಾಂ ಪೂರ್ಣಗೊಳಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಅತಿಕಿರಿಯ ಟೆನಿಸಿಗ. ಅಲ್ಕರಜ್ಗೆ ಈಗ 22 ವರ್ಷ, 272 ದಿನ. 1938ರಲ್ಲಿ ಅಮೆರಿಕದ ಡಾನ್ ಬಡ್ಜ್ ಕೆರಿಯರ್ ಗ್ರ್ಯಾನ್ಸ್ಲಾಂ ಸಾಧನೆ ಮಾಡಿದ್ದಾಗ ಅವರಿಗೆ 22 ವರ್ಷ, 363 ದಿನ ವಯಸ್ಸಾಗಿತ್ತು.

₹26.64 ಕೋಟಿ: ಚಾಂಪಿಯನ್ ಆಲ್ಕರಜ್ಗೆ ₹26.64 ಕೋಟಿ ನಗದು ಬಹುಮಾನ ಲಭಿಸಿತು.

₹13.80 ಕೋಟಿ: ರನ್ನರ್-ಅಪ್ ಜೋಕೋವಿಚ್ ₹13.80 ಕೋಟಿ ನಗದು ಬಹುಮಾನ ಪಡೆದರು.

09 ಟೆನಿಸಿಗ: ಕೆರಿಯರ್ ಗ್ರ್ಯಾನ್ಸ್ಲಾಂ ಸಾಧನೆ ಮಾಡಿದ ವಿಶ್ವದ 9ನೇ ಟೆನಿಸಿಗ ಆಲ್ಕರಜ್.

Source link
ಆಸ್ಟ್ರೇಲಿಯನ್ ಓಪನ್ ಟೆನಿಸ್ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ