
ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಹಿತಿ ಬಿಚ್ಚಿಟ್ಟ ಚಂದ್ರಚೂಡ್,, ಚಕ್ರವರ್ತಿ ಚಂದ್ರಚೂಡ್ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಚಂದ್ರಚೂಡ ವಿರುದ್ದ ಪ್ರಕರಣ ದಾಖಲಿಸಲು ಸಿನಿಮಾ ನಿರ್ಮಾಪಕರ ಸಂಘ ಮುಂದಾಗಿದೆ.
ಬೆಂಗಳೂರು (ಫೆ.02) ಕನ್ನಡ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇಂಡಸ್ಟ್ರಿ ಪ್ರಮುಖರ ಹೇಳಿಕೆಗಳು ದೇಶದಲ್ಲೇ ಕೋಲಾಹಲ ಸೃಷ್ಟಿಸುತ್ತಿದೆ. ಇದೀಗ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆ ಇದೀಗ ಕೋಲಾಹಲಕ್ಕೆ ಕಾರಣಾಗಿದೆ. ಕಲಾವಿದರಿಗೆ ಕಾಂಡೋಮ್ ಸಪ್ಲೈ ಆಗುತ್ತಿರುವ ಮಾಹಿತಿಯನ್ನು ಚಂದ್ರಚೂಡ್ ಬಿಚ್ಚಿಟ್ಟಿದ್ದಾರೆ. ಕೆಲ ನಿರ್ಮಾಪಕರು ಕಲಾವಿದರಿಗೆ ಕಾಂಡೋಮ್ ಪೂರೈಕೆ ಮಾಡುತ್ತಿದ್ದಾರೆ ಎಂದು ಸ್ಫೋಟಕ ಮಾಹಿತಿ ತೆರೆದಿಟ್ಟಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಹೇಳಿಕೆಯಿಂದ ಇದೀಗ ಭಾರಿ ವಿವಾದ ಸೃಷ್ಟಿಯಾಗಿದ್ದು ಮಾತ್ರವಲ್ಲ, ನಿರ್ಮಾಪಕರ ಸಂಘ ಕೆರಳಿದೆ. ಚಕ್ರವರ್ತಿ ಚಂದ್ರಚೂಡ್ ವಿರುದ್ದ ದೂರು ದಾಖಲಿಸಲು ಕನ್ನಡ ನಿರ್ಮಾಪಕರ ಸಂಘ ಮುಂದಾಗಿದೆ.
ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧಾರ
ಯೂಟ್ಯೂಬ್ ಚಾನೆಲ್ ಒಂದಕ್ಕೆ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್, ಸ್ಯಾಂಡಲ್‌ವುಡ್ ಇಂಡಸ್ಟ್ರೀಯ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿ ಕುರಿತು ಮಾತನಾಡುವ ವೇಳೆ ಚಕ್ರವರ್ತಿ ಚಂದ್ರಚೂಡ್, ತೆರೆ ಹಿಂದೆ ನಡೆಯುತ್ತಿರುವ ಕೆಲ ಘಟನೆಗಳ ಕುರಿತು ಮಾತನಾಡಿದ್ದರು. ಈ ಪೈಕಿ ಕಾಂಡೋಮ್ ಸಪ್ಲೈ ಹೇಳಿಕೆಗೆ ನಿರ್ಮಾಪಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಚಕ್ರವರ್ತಿ ಚಂದ್ರಚೂಡ್ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ.
ತುರ್ತು ಸಭೆ ಕರೆದ ನಿರ್ಮಾಪಕರ ಸಂಘ
ಕೆಲ ನಿರ್ಮಾಪಕರು, ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಡುತ್ತಿದ್ದಾರೆ ಹೇಳಿಕೆ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಕನ್ನಡ ಸಿನಿಮಾ ನಿರ್ಮಾಪಕರ ಸಂಘ ತುರ್ತು ಸಭೆ ಕರೆದಿತ್ತು. ಈ ಸಭೆಯಲ್ಲಿ ಎಲ್ಲಾ ನಿರ್ಮಾಪಕರ ಸಂಘಡದ ಪದಾಧಿಕಾರಿಗಳು, ಸದಸ್ಯರು ಚಕ್ರವರ್ತಿ ಚಂದ್ರಚೂಡ್ ವಿರುದ್ದ ದೂರು ದಾಖಲಿಸಲು ಒಮ್ಮತದ ನಿರ್ಧಾರ ಮಾಡಿದ್ದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಎಮ್.ಜಿ ರಾಮಮೂರ್ತಿ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಕೇಸ್ ದಾಖಲಿಸುವುದಾಗಿ ನಿರ್ಮಾಪಕ ಸಂಘ ಹೇಳಿದೆ. ಚಕ್ರವರ್ತಿ ಚಂದ್ರಚೂಡ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಯಾವುದೇ ಆದಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕನ್ನಡ ಸಿನಿಮಾ ನಿರ್ಮಾಪಕರನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದಾರೆ. ಕಲಾವಿದರನ್ನು ನಿರ್ಮಾಪಕರ ಸಂಘ ಗೌರವದಿಂದ ನೋಡಿಕೊಂಡಿದೆ, ನಡೆಸಿಕೊಂಡಿದೆ. ಇದರ ನಡುವೆ ಚಕ್ರವರ್ತಿ ಚಂದ್ರಚೂಡ್ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಗೊಂದಲ, ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ನಿರ್ಮಾಪಕರ ಸಂಘ ಆಕ್ರೋಶ ಹೊರಹಾಕಿದೆ.
ಸಿಜೆ ರಾಯ್ ಕುರಿತು ಸ್ಫೋಟಕ ಹೇಳಿಕೆ
ಇತ್ತೀಚೆಗೆ ನಿಧನರಾದ ಉದ್ಯಮಿ ಸಿಜೆ ರಾಯ್ ಸಾವಿನ ಕುರಿತು ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್, ಇದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಸಿಜೆ ರಾಯ್ ಬದುಕು ಅಂತ್ಯಗೊಳಿಸುವ ನಿರ್ಧಾರ ಮಾಡುವ ವ್ಯಕ್ತಿಯಲ್ಲ.ಸಿಜೆ ರಾಯ್ ಸಾವಿನ ಹಿಂದೆ ಮೂವರು ತೆಲುಗು ನಟಿಯರ ಕೈವಾಡವಿದೆ ಎಂದಿದ್ದರು. ಮೂವರು ತೆಲುಗು ನಟಿಯರು ಸಿಜೆ ರಾಯ್ ಹನಿಟ್ರಾಪ್‌ಗೆ ಯತ್ನಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಸಿಜೆ ರಾಯ್ ರಾಜಕಾರಣಿಗಳಿಗೆ ಫಂಡಿಂಗ್ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಒತ್ತಡವೂ ಸಿಜೆ ರಾಯ್ ಸಾವಿಗೆ ಕಾರಣವಾಗಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದರು.