SP Venkatesh: ಪಂಚಮವೇದ, ಸುಂದರಕಾಂಡ, ಅಶ್ವಮೇಧ ಸಿನಿಮಾಗಳ ಸಂಗೀತ ಮಾಂತ್ರಿಕ ಇನ್ನಿಲ್ಲ! | Legendary Malayalam Music Director Sp Venkatesh Passes Away In Chennai

SP Venkatesh: ಪಂಚಮವೇದ, ಸುಂದರಕಾಂಡ, ಅಶ್ವಮೇಧ ಸಿನಿಮಾಗಳ ಸಂಗೀತ ಮಾಂತ್ರಿಕ ಇನ್ನಿಲ್ಲ! | Legendary Malayalam Music Director Sp Venkatesh Passes Away In Chennai


SP Venkatesh death: ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (70) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣ. ‘ರಾಜಾವಿಂಟೆ ಮಕನ್’ ಚಿತ್ರದ ಮೂಲಕ ಮಲಯಾಳಂನಲ್ಲಿ ಫೇಮಸ್ ಆದ ಇವರು, ‘ಕಿಲುಕ್ಕಂ’, ‘ಸ್ಫಟಿಕಂ’ ನಂತಹ ಸಿನಿಮಾಗಳ ಮೂಲಕ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ.

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ (70) ಇಹಲೋಕ ತ್ಯಜಿಸಿದ್ದಾರೆ. ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.

ತಮಿಳುನಾಡಿನಲ್ಲಿ 1955ರ ಮಾರ್ಚ್ 5ರಂದು ಜನಿಸಿದ ವೆಂಕಟೇಶ್, 1981ರಲ್ಲಿ ತೆರೆಕಂಡ ‘ಪ್ರೇಮಯುದ್ಧ’ ಎಂಬ ತೆಲುಗು ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಮೋಹನ್‌ಲಾಲ್ ನಟನೆಯ ‘ರಾಜಾವಿಂಟೆ ಮಕನ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಪಯಣ ಆರಂಭಿಸಿದರು.

ಮಲಯಾಳಂನ ಹಲವಾರು ಹಿಟ್ ಹಾಡುಗಳ ಹಿಂದಿನ ಶಕ್ತಿ ಇವರು. ಇಂದ್ರಜಾಲಂ, ಪೈತೃಕಂ, ತುಡರ್ಕಥ, ವಾತ್ಸಲ್ಯಂ, ಕಿಲುಕ್ಕಂ, ಹಿಟ್ಲರ್, ಸೋಪಾನಂ, ಕಾಬೂಳೀವಾಲ, ಮಿನ್ನಾರಂ, ಸ್ಫಟಿಕಂ ಸೇರಿದಂತೆ ಅನೇಕ ಸಿನಿಮಾಗಳಿಗೆ ಎಸ್.ಪಿ. ವೆಂಕಟೇಶ್ ನೀಡಿದ ಹಾಡುಗಳನ್ನು ಸಂಗೀತ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು, ಮಹಾಯಾನಂ, ದೇವಾಸುರಂ ಚಿತ್ರಗಳಿಗೆ ಇವರು ನೀಡಿದ ಹಿನ್ನೆಲೆ ಸಂಗೀತ ಕೂಡ ಬಹಳ ಪ್ರಸಿದ್ಧ. 1985ರಿಂದ 2000ರ ಅವಧಿಯಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಎಸ್.ಪಿ. ವೆಂಕಟೇಶ್ ಅಕ್ಷರಶಃ ಹಿಟ್ ಹಾಡುಗಳ ಸುರಿಮಳೆಗೈದಿದ್ದರು. ಮಲಯಾಳಂ ಮಾತ್ರವಲ್ಲದೆ, ತಮಿಳು ಮತ್ತು ತೆಲುಗು ಚಿತ್ರಗಳಿಗೂ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಎಸ್.ಪಿ. ವೆಂಕಟೇಶ್ ತಮ್ಮ ವೃತ್ತಿಜೀವನದಲ್ಲಿ ಸುಮಾರು 150 ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅಷ್ಟೇ ಅಲ್ಲ, ತಮಿಳು, ಕನ್ನಡ, ಬಂಗಾಳಿ ಮತ್ತು ಹಿಂದಿ ಭಾಷೆಗಳನ್ನೂ ಸೇರಿ ಒಟ್ಟು 500ಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ನಿರ್ದೇಶಕ ಕಣ್ಣಂತಾನಂ ಅವರ ಚಿತ್ರಗಳಿಗೆ ಇವರು ಅತಿ ಹೆಚ್ಚು ಬಾರಿ ಸಂಗೀತ ನೀಡಿದ್ದಾರೆ. ಗೀತರಚನೆಕಾರ ಗಿರೀಶ್ ಪುತ್ತಂಚೇರಿ ಅವರು ವೆಂಕಟೇಶ್ ಅವರ ಸಂಗೀತಕ್ಕೆ ಅತಿ ಹೆಚ್ಚು ಬಾರಿ ಸಾಹಿತ್ಯ ಬರೆದಿದ್ದಾರೆ. ಇನ್ನು, ಕೆ.ಎಸ್. ಚಿತ್ರಾ ಅವರು ವೆಂಕಟೇಶ್ ಸಂಯೋಜನೆಯಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿಯಾಗಿದ್ದಾರೆ.

ಮಲಯಾಳಂನ ಎವರ್‌ಗ್ರೀನ್ ಹಾಡುಗಳು

ಕಿಲುಕಿಲ್ ಪಂಬರಂ, ಮೀನವೇನಲಿಲ್, ಊಟಿಪ್ಪಟ್ಟಣಂ, ಶಾಂತಮೀ ರಾತ್ರಿಯಲ್, ಮುತ್ತುಮಣಿತ್ತೂವಲ್ ತರಾಂ, ಕನಕನಿಲಾವೇ ತುಯಿಲುಣರೂ, ಪಾತಿರಾಕ್ಕಿಳಿ ವರೂ, ಕರುಕವಯಲ್ ಕುರುವೀ, ಮಾಲಿನಿಯುಡೆ ತೀರಂಗಳ್, ನೀಲಾಂಜನ ಪೂವಿನ್, ಅಲಯುಂ ಕಾಟಿನ್ ಹೃದಯಂ, ತಾಮರಕ್ಕಣ್ಣನುರಂಗೇಣಂ, ಪುತ್ತನ್ ಪುದುಕಾಲಂ ಮುತ್ತಮಿಟ್ಟ ನೇರಂ, ಕಾಬೂಳೀವಾಲಾ ನಾಡೋಡಿ, ಪಾಲ್ನಿಲಾವಿನುಂ, ನಿಲಾವೇ ಮಾಯುಮೋ, ಒರು ವಲ್ಲಂ ಪೊನ್ನುಂ ಪೂವುಂ, ಏಳಿಮಲ ಪೂಂಚೋಲ, ಪರುಮಲಚ್ಚೆರುವಿಲೇ, . ಹೀಗೆ ಸಂಗೀತ ಪ್ರೇಮಿಗಳು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹ ಎವರ್‌ಗ್ರೀನ್ ಹಿಟ್‌ಗಳನ್ನು ನೀಡಿಯೇ ಎಸ್.ಪಿ. ವೆಂಕಟೇಶ್ ನಮ್ಮನ್ನಗಲಿದ್ದಾರೆ.

ವೆಂಕಟೇಶ್ ಅವರ ತಂದೆ ಪಳನಿ ಕೂಡ ಒಬ್ಬ ಮ್ಯಾಂಡೋಲಿನ್ ವಾದಕರಾಗಿದ್ದರು. ತಂದೆಯ ಬಳಿಯೇ ಸಂಗೀತ ಪಾಠ ಕಲಿತ ವೆಂಕಟೇಶ್, ತಮ್ಮ ಮೂರನೇ ವಯಸ್ಸಿನಲ್ಲೇ ಮ್ಯಾಂಡೋಲಿನ್ ನುಡಿಸಲು ಆರಂಭಿಸಿದ್ದರು. ನಂತರ ಗಿಟಾರ್ ಸೇರಿದಂತೆ ಇತರ ಸಂಗೀತ ವಾದ್ಯಗಳನ್ನೂ ಕಲಿತರು. ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅವರು ರವೀಂದ್ರನ್ ಮತ್ತು ಎ.ಟಿ. ಉಮ್ಮರ್ ಅವರ ಸಂಗೀತ ಸಹಾಯಕರಾಗಿ ಕೆಲಸ ಮಾಡಿದ್ದರು.

ಯೂಟ್ಯೂಬ್ ವಿಡಿಯೋ ಪ್ಲೇಯರ್



Source link

Leave a Reply

Your email address will not be published. Required fields are marked *