ಹೊಲದಲ್ಲಿನ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಹೈಟೆಕ್ ಭದ್ರತಾ ಕ್ರಮ ತೆಗೆದುಕೊಂಡ ಧಾರವಾಡದ ರೈತ | Farmer Installs 360 Degree Solar Powered Cctv Camera To Protect Chilli Crops Mrq

ಹೊಲದಲ್ಲಿನ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಹೈಟೆಕ್ ಭದ್ರತಾ ಕ್ರಮ ತೆಗೆದುಕೊಂಡ ಧಾರವಾಡದ ರೈತ | Farmer Installs 360 Degree Solar Powered Cctv Camera To Protect Chilli Crops Mrq


ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೈತರೊಬ್ಬರು, ಉತ್ತಮ ಇಳುವರಿ ಹಾಗೂ ಬೆಲೆ ಬಂದಿರುವ ತಮ್ಮ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ರಕ್ಷಿಸಲು ಹೊಲದಲ್ಲಿ ಸೋಲಾರ್ ಚಾಲಿತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. 

ಶಿವಾನಂದ ಗೊಂಬಿ

ಹುಬ್ಬಳ್ಳಿ: 

ಉತ್ತಮ ಇಳುವರಿ ಬೆಳೆ ಬಂದಿರುವ ಮೆಣಸಿನಕಾಯಿ ಬೆಳೆಯನ್ನು ಕಳ್ಳಕಾಕರಿಂದ ರಕ್ಷಿಸಲು ಇಲ್ಲಿನ ರೈತರೊಬ್ಬರು ಹೊಲಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಮೂಲಕ ಹೊಲದ ಬೆಳೆಯೀಗ ಕ್ಯಾಮೆರಾ ಕಣ್ಗಾವಲಿನಲ್ಲಿ ಸುರಕ್ಷಿತವಾಗಿವೆ.

ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ಅಣ್ಣಪ್ಪ ಚೆನ್ನಪ್ಪ ಮಾಯಣ್ಣವರ ಎಂಬ ರೈತ ಮಾಡಿರುವ ಪ್ರಯೋಗ.

ಮೆಣಸಿನಕಾಯಿ ಬೆಳೆ ಬೆಳೆದಿರುವ ರೈತರು

ಕಳೆದ ಎರಡ್ಮೂರು ವರ್ಷದಿಂದ ಈ ಊರಲ್ಲಿ ಮೆಣಸಿನಕಾಯಿ ಬೆಳೆಗಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಮಳೆಯಿಂದ ಇಳುವರಿ ಬಾರದೇ, ಬೆಲೆ ಕುಸಿತಗೊಂಡು ಸಣ್ಣದಾಗಿ ಮೆಣಸಿನಕಾಯಿ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತ ಹೋಗಿದೆ. ಚಿಕ್ಕನರ್ತಿಯಲ್ಲಿ 1200ಕ್ಕೂ ಹೆಚ್ಚು ಮತದಾರರಿದ್ದಾರೆ. ಅಂದರೆ ಜನಸಂಖ್ಯೆ 3 ಸಾವಿರಕ್ಕೂ ಅಧಿಕವಿದೆ. ಇಡೀ ಊರಲ್ಲಿ ಇಬ್ಬರೇ ಇಬ್ಬರು ರೈತರು ಮೆಣಸಿನಕಾಯಿ ಬೆಳೆ ಬೆಳೆದಿರುವುದು. ಇವರು 4 ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರೆ, ಇನ್ನೊಬ್ಬರು 2 ಎಕರೆಯಲ್ಲಿ ಬೆಳೆದಿದ್ದಾರೆ. ಮೆಣಸಿನಕಾಯಿ ಎರಡು ಅಥವಾ ಮೂರು ಸಲ ಕಟಾವಿಗೆ ಬರುತ್ತದೆ.

ಇದೀಗ ಮೊದಲ ಸಲದ ಕಟಾವು ಕೆಲಸ ನಡೆದಿದೆ. ಈ ಸಲ ಮಾರುಕಟ್ಟೆಯಲ್ಲೂ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ಕಳ್ಳರ ಕಾಟ ಜಾಸ್ತಿಯಾಗಿದೆ. ರಾತ್ರಿ ಹೊತ್ತು ಹೊಲಕ್ಕೆ ನುಗ್ಗಿ ಮೆಣಸಿನಕಾಯಿ ಬೆಳೆ ಕಳವು ಮಾಡುತ್ತಿದ್ದಾರಂತೆ. ಒಂದು ಸಲ ಹೊಲಕ್ಕೆ ನುಗ್ಗಿದರೆ ಮುಗಿತು, ಏಳೆಂಟು ಚೀಲದಷ್ಟು ಮೆಣಸಿನಕಾಯಿ ಕಳುವಾಗುತ್ತಿದೆಯಂತೆ.

360 ಡಿಗ್ರಿ ಸುತ್ತುವ ಎರಡು ಕ್ಯಾಮೆರಾಗಳು

ಕೆಲ ಸಲ ರಾತ್ರಿ ಹೊತ್ತು ಹೊಲದಲ್ಲೇ ಮಲಗಿ ನೋಡಿಕೊಂಡಿದ್ದು ಆಯ್ತು. ಎಷ್ಟು ದಿನ ಅಂತ ಹೊಲದಲ್ಲೇ ಮಲಗೋದು. ಕಳ್ಳರಿಂದ ಬೆಳೆ ರಕ್ಷಿಸುವುದು ಕಷ್ಟವಾಗುತ್ತಿದೆ. ಆದಕಾರಣ ಹೊಲಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಹೇಗೆ ಎಂದು ಯೋಚಿಸಿದ್ದಾರೆ. ಅದರಂತೆ ಸೋಲಾರ ಮೂಲಕ ಕಾರ್ಯನಿರ್ವಹಿಸುವ ಎರಡು ಸಿಸಿ ಕ್ಯಾಮೆರಾ ಅಳವಡಿಸಿದ್ದಾರಂತೆ. 4 ಎಕರೆ ಪ್ರದೇಶದ ನಡು ಮಧ್ಯೆ ದೊಡ್ಡ ಕಂಬ ನೆಟ್ಟು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಎರಡು ಕ್ಯಾಮೆರಾಗಳು 360 ಡಿಗ್ರಿ ಸುತ್ತುತ್ತಲೇ ಇರುತ್ತವೆ. ಹೀಗಾಗಿ ಕಳ್ಳರ ಕಾಟ ತಪ್ಪಿದಂತಾಗಿದೆ. ಇದಕ್ಕೆ ₹50 ಸಾವಿರ ಖರ್ಚು ಮಾಡಲಾಗಿದೆ ಎಂದು ರೈತರು ತಿಳಿಸುತ್ತಾರೆ.

ರಕ್ಷಣೆಗೂ ಹಣ ಖರ್ಚು ಮಾಡುವ ಅನಿವಾರ್ಯತೆ

ಇದೇ ತಾಲೂಕಿನ ಗುಡಗೇರಿಯಲ್ಲೂ ಶಂಕ್ರಯ್ಯ ಎಂಬ ರೈತ ಸಹ ತನ್ನ ಹೊಲಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಈ ಸಲ ಬೆಳೆ ಉತ್ತಮವಾಗಿದ್ದು, ಅದರ ರಕ್ಷಣೆಗೆ ಇದೀಗ ಸಿಸಿ ಕ್ಯಾಮೆರಾ ಅಳವಡಿಸಿದಂತಾಗಿದೆ. ಇದೀಗ ಕಟಾವಿನ ಹಂತಕ್ಕೆ ಬಂದಿದೆ. ಈಗಿನ ಪರಿಸ್ಥಿತಿ ನೋಡಿದರೆ ಬೆಲೆಯೂ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗುತ್ತಿದೆ. ಬೆಳೆಗಾರರ ನಿರೀಕ್ಷೆಯಂತೆಯೇ ಒಣಮೆಣಸಿನಕಾಯಿ ಬೆಲೆಯೂ ಉತ್ತಮವಾದರೆ ರೈತರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಬೆಳೆ ಬೆಳೆಯಲು ಖರ್ಚು ಮಾಡಿದಂಗೆ ಇದೀಗ ಅದರ ರಕ್ಷಣೆಗೆ ಸಿಸಿ ಕ್ಯಾಮೆರಾಕ್ಕೂ ಖರ್ಚು ಮಾಡುವ ಅನಿವಾರ್ಯತೆ ಸೃಷ್ಟಿಯಾಗಿರುವುದಂತೂ ಸತ್ಯ.

ಇದನ್ನೂ ಓದಿ: 40 ಎಕರೆ, ಕಣದಲ್ಲಿ 30 ಮಾರು ಉದ್ದದ ಎರಡು ಮೆದೆ: ಎತ್ತುಗಳನ್ನು ಬಳಸಿ ರಾಗಿ ಬೆಳೆದ ರೈತ

ನಾವು 4 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದೇವೆ. ಇದೀಗ ಕಟಾವಿಗೆ ಬರುತ್ತಿದೆ. ನಮ್ಮೂರಲ್ಲಿ ಇಬ್ಬರೇ ರೈತರು ಮೆಣಸಿನಕಾಯಿ ಬೆಳೆದಿರುವುದು. ಕೆಲವು ದಿನಗಳಿಂದ ಕಳ್ಳರ ಕಾಟ ವಿಪರೀತವಾಗಿತ್ತು. ಹೀಗಾಗಿ ಸೋಲಾರ್‌ ಶಕ್ತಿ ಬಳಸಿಕೊಂಡು ನಡೆಯುವ 2 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದೇನೆ. ಈಗ ಕಳ್ಳರ ಕಾಟ ಕಡಿಮೆಯಾಗಿದೆ ಎಂದು ಚಿಕ್ಕನರ್ತಿಯ ಮೆಣಸಿನಕಾಯಿ ಬೆಳೆಗಾರ ಅಣ್ಣಪ್ಪ ಮಾಯಣ್ಣವರ ಹೇಳುತ್ತಾರೆ.

ಇದನ್ನೂ ಓದಿ: ಮುಧೋಳ: ಕೇವಲ 1 ಗಂಟೆಯಲ್ಲಿ ಕಟಾವು ಮಾಡಿ 50.20 ಟನ್ ಕಬ್ಬು ಲೋಡ್ ಮಾಡಿ ಯುವಕನ ಸಾಧನೆ



Source link

Leave a Reply

Your email address will not be published. Required fields are marked *