ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಕನ್’ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ರಿಮೇಕ್ ಸಿನಿಮಾ ಆಗಿದ್ದರೂ ಸಹ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನು ಸಿಬಿಎಫ್ ಸಿ ನಿರಾಕರಿಸಿದೆ, ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ನ್ಯಾಯಾಲಯದಲ್ಲಿ ಸಹ ಚಿತ್ರತಂಡಕ್ಕೆ ನ್ಯಾಯ ವಿಳಂಬವಾಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಹ ಸನಿಹದಲ್ಲೇ ಇದ್ದು, ಒಂದೊಮ್ಮೆ ಚುನಾವಣೆ ಘೋಷಣೆ ಆಗಿಬಿಟ್ಟರೆ ಸಿನಿಮಾ ಬಿಡುಗಡೆ ಎರಡು ತಿಂಗಳು ಮುಂದೂಡಲ್ಪಟ್ಟಿತು. ಇದೇ ಕಾರಣಕ್ಕೆ ಇದೀಗ ಚಿತ್ರತಂಡವು, ಆಗಿದ್ದು ಆಗಲೆಂದು 20 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿದೆ.
‘ಜನ ನಾಯಕನ್’ ಸಿನಿಮಾವು ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರಿಮೇಕ್ ಆಗಿದೆ. ಆದರೆ ವಿಜಯ್ ಅವರಿಗೆ ರಾಜಕೀಯವಾಗಿ ಅನುಕೂಲವಾಗುವಂತೆ ಕೆಲವು ದೃಶ್ಯಗಳನ್ನು, ಸಂಭಾಷಣೆಗಳನ್ನು ಸೇರಿಸುವಂತೆ. ವಿಜಯ್ ಅವರ ರಾಜಕೀಯ ಪಕ್ಷದ ಸಿದ್ಧಾಂತ, ಆದರ್ಶಗಳ ಪ್ರಚಾರ ಮಾಡುವಂಥ ಕೆಲವು ಸಂಭಾಷಣೆಗಳಿವೆ, ಜೊತೆಗೆ ವಿಪಕ್ಷಗಳನ್ನು ಟೀಕೆ ಮಾಡುವ ಕೆಲವು ಸಂಭಾಷಣೆ ದೃಶ್ಯಗಳು, ಸಿನಿಮಾದಲ್ಲಿರುವುದು ಇದೇ ಕಾರಣಕ್ಕೆ ಸಿಬಿಎಫ್ ಸಿ ‘ಜನ ನಾಯಕನ್’ ಸೆನ್ಸಾರ್ ಪ್ರಮಾಣ ಪತ್ರಕ್ಕೆ ಹಿಂದೇಟು ಹಾಕಿದೆ.
ನ್ಯಾಯಾಲಯದಲ್ಲಿ ಪ್ರಕರಣ ತಡವಾಗುವ ಸಂಭವ ಇರುವ ಕಾರಣ, ಚಿತ್ರತಂಡವು ಇದೀಗ ಎಲ್ಲ ರಾಜಕೀಯಕ್ಕೆ ಸಂಬಂಧಿಸಿದ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಲಾಗಿದೆ. ಸಿನಿಮಾದಲ್ಲಿನ ರಾಜಕೀಯ ಅಂಶಗಳಿಂದಾಗಿಯೇ ಸಿನಿಮಾ ವಿವಾದಕ್ಕೆ ಸಿಲುಕಿದ್ದು, ವಿವಾದಕ್ಕೆ ಕಾರಣವಾದ ಎಲ್ಲ ದೃಶ್ಯಗಳು, ಸಂಭಾಷಣೆಗಳನ್ನು ತೆಗೆದು ಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಇದರಿಂದ, ನ್ಯಾಯಾಲಯದ ವಿಚಾರಣೆ ಇಲ್ಲದೆ, ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲಿದೆ, ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ
ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಘೋಷಣೆ ಆಗಲಿದೆ, ತಮಿಳುನಾಡಿನ ಎಲ್ಲ ಅಭ್ಯರ್ಥಿಗಳಿಂದಲೂ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ‘ಜನ ನಾಯಕನ್’ ಸಿನಿಮಾವನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸುವ ಯೋಜನೆ ಹಾಕಿಕೊಂಡಿದ್ದರು ವಿಜಯ್, ಆದರೆ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕಿದೆ.
‘ಜನ ನಾಯಕನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟಿ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ನಿರ್ಮಾಣ ಸಂಸ್ಥೆಯ ಮಾಲೀಕ ವೆಂಕಟ್. ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ