ಕಲ್ಯಾಣಿ ಚಾಲುಕ್ಯರ ಟಂಕಸಾಲೆಯಾಗಿದ್ದ ಲಕ್ಕುಂಡಿಯಲ್ಲಿ ಅಪಾರ ನಿಧಿ ಅಡಗಿದೆ ಎಂದು ನಂಬಲಾಗಿದೆ. ಈ ನಿಧಿಯನ್ನು 7 ಹೆಡೆ ಸರ್ಪಗಳು ಕಾಯುತ್ತಿದ್ದು, ಮಹಾದೇವಿ ಎಂಬ ಮಹಿಳೆ ಈ ಹಾವುಗಳೊಂದಿಗೇ ವಾಸಿಸುತ್ತಿದ್ದಳು ಎಂಬ ಮಾಹಿತಿಯನ್ನ ಹಿರಿಯ ವ್ಯಕ್ತಿ ಬಿಚ್ಚಿಟ್ಟಿದ್ದಾರೆ.

ಗದಗ (ಫೆ.04): ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಲಕ್ಕುಂಡಿಯ 70 ವರ್ಷದ ಹಿರಿಯರಾದ ವಿರೂಪಾಕ್ಷಪ್ಪ ಯಾವಗಲ್ ಅವರು ಹಂಚಿಕೊಂಡಿರುವ ಸ್ಫೋಟಕ ಮಾಹಿತಿ ಈಗ ಇಡೀ ರಾಜ್ಯದ ಕುತೂಹಲ ಕೆರಳಿಸಿದೆ.

ಐತಿಹಾಸಿಕವಾಗಿ ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇಲ್ಲಿನ ‘ಲಕ್ಕುಂಡಿ ಟಂಕಸಾಲೆ’ಯಲ್ಲಿ ಚಿನ್ನದ ನಾಣ್ಯಗಳನ್ನು (ಗದ್ಯಾಣ) ಮುದ್ರಿಸಲಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕಾರಣಕ್ಕಾಗಿಯೇ ಲಕ್ಕುಂಡಿಯ ಬೀದಿ ಬೀದಿಗಳಲ್ಲಿ ಚಿನ್ನ ಮತ್ತು ನಿಧಿ ಅಡಗಿದೆ ಎಂಬ ನಂಬಿಕೆ ಬಲವಾಗಿದೆ.

ವಿರೂಪಾಕ್ಷಪ್ಪ ಯಾವಗಲ್ ಅವರ ಪ್ರಕಾರ, ಲಕ್ಕುಂಡಿಯ ಜೈನ ಬಸದಿ ಮತ್ತು ನಾಗನಾಥ ದೇವಾಲಯದ ಆವರಣದಲ್ಲಿ ಇಂದಿಗೂ ದೈತ್ಯ ಸರ್ಪಗಳ ವಾಸವಿದೆ. ಇಲ್ಲಿನ ದೇವಸ್ಥಾನಗಳ ಅಡಿಯಲ್ಲಿ ಅಪಾರವಾದ ದೈವ ನಿಧಿ ಇದೆ. ಈ ನಿಧಿಯನ್ನು ಕಾಯುವುದಕ್ಕಾಗಿಯೇ ನೂರಾರು ನಾಗರಹಾವುಗಳು ಇಲ್ಲಿ ಬೀಡುಬಿಟ್ಟಿವೆ.

ನಾವು ಕಣ್ಣಾರೆ ಏಳು ಹೆಡೆಯ ಸರ್ಪಗಳನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಜೈನ ಬಸದಿಯ ಸಮೀಪವಿದ್ದ ಮಹದೇವಿ ಎಂಬ ಮಹಿಳೆಯ ಮನೆಗೆ ಈ ಹಾವುಗಳು ಬರುತ್ತಿದ್ದರೂ, ಅವರಿಗಾಗಲೀ ಅಥವಾ ಸ್ಥಳೀಯರಿಗಾಗಲೀ ಎಂದೂ ತೊಂದರೆ ಕೊಟ್ಟಿಲ್ಲವಂತೆ. ಈ ಸರ್ಪಗಳು ಕೇವಲ ದೈವದತ್ತವಾದ ನಿಧಿಯನ್ನು ರಕ್ಷಿಸುತ್ತಿವೆ ಎಂಬುದು ಸ್ಥಳೀಯರ ಅಚಲ ನಂಬಿಕೆ.

ಒಂದು ಕಾಲದಲ್ಲಿ ಲಕ್ಕುಂಡಿಯಲ್ಲಿ 7 ಭವ್ಯ ಜೈನ ಬಸದಿಗಳ ಸಂಕೀರ್ಣವಿತ್ತು. ಕಾಲಾನಂತರದಲ್ಲಿ ಮತ್ತು ದಾಳಿಗಳ ಪರಿಣಾಮವಾಗಿ ಇಂದು ಕೇವಲ 3 ಬಸದಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ 4 ಬಸದಿಗಳು ಸಂಪೂರ್ಣ ಹಾಳಾಗಿದ್ದು, ಜೈನ ತೀರ್ಥಂಕರರನ್ನು ಕೂರಿಸುತ್ತಿದ್ದ ಪೀಠಗಳು ಇಂದಿಗೂ ಅಲ್ಲಿನ ಐತಿಹಾಸಿಕ ಕುರುಹುಗಳಾಗಿ ಸಾಕ್ಷಿ ಹೇಳುತ್ತಿವೆ. ನಾಗನಾಥ ದೇವಾಲಯದ ಪಕ್ಕದಲ್ಲಿರುವ ಈ ಶಿಥಿಲಗೊಂಡ ಪ್ರದೇಶದಲ್ಲಿಯೇ ಹಾವುಗಳ ಓಡಾಟ ಹೆಚ್ಚಿದೆ ಎನ್ನಲಾಗಿದೆ.

ಇಲ್ಲಿನ ಬೀದಿಗಳನ್ನು ಅಗೆದು ನೋಡಿದರೆ ಖಂಡಿತವಾಗಿಯೂ ನಿಧಿ ಸಿಗುತ್ತದೆ. ಆದರೆ ಆ ನಿಧಿಯ ಮೇಲಿರುವ ಸರ್ಪಗಳ ಕಾವಲು ಮತ್ತು ದೈವ ಭಯದಿಂದಾಗಿ ಯಾರೂ ಕೂಡ ಅಗೆಯುವ ಧೈರ್ಯ ಮಾಡಿಲ್ಲ’ ಎನ್ನುತ್ತಾರೆ ವಿರೂಪಾಕ್ಷಪ್ಪ ಅಜ್ಜ. ಇತಿಹಾಸದ ಶ್ರೀಮಂತಿಕೆ ಮತ್ತು ಅತೀಂದ್ರಿಯ ನಂಬಿಕೆಗಳ ನಡುವೆ ಲಕ್ಕುಂಡಿ ಇಂದು ಪ್ರವಾಸಿಗರನ್ನು ಮಾತ್ರವಲ್ಲದೆ, ಇತಿಹಾಸ ಸಂಶೋಧಕರನ್ನೂ ತನ್ನತ್ತ ಸೆಳೆಯುತ್ತಿದೆ.

Source link
ಲಕ್ಕುಂಡಿ ಸರ್ಪಗಳೊಂದಿಗೆ ವಾಸವಿದ್ದ ಮಹಾದೇವಿ ಮನೆ ತೋರಿಸಿದ ಅಜ್ಜ; ಇಲ್ಲಿರೋ ನಿಧಿ 7 ಹೆಡೆ ಸರ್ಪ ಕಾಯೋದು ನೋಡಿದ್ದೇನೆ!