ಸಂಪಾಯಿತಲೇ ಪರಾಕ್ – ಮೈಲಾರ ಮೈಲಾರಲಿಂಗೇಶ್ವರ ಸ್ವಾಮಿ ಡೆಂಕಣ ಮರಡಿಯಲ್ಲಿ ಕಾರ್ಣಿಕ ನುಡಿದ್ದೇನು ? | What Did Mylara Karnik Say

ಸಂಪಾಯಿತಲೇ ಪರಾಕ್ – ಮೈಲಾರ ಮೈಲಾರಲಿಂಗೇಶ್ವರ ಸ್ವಾಮಿ ಡೆಂಕಣ ಮರಡಿಯಲ್ಲಿ ಕಾರ್ಣಿಕ ನುಡಿದ್ದೇನು ? | What Did Mylara Karnik Say



ಸಂಪಾಯಿತಲೇ ಪರಾಕ್ – ಮೈಲಾರ ಮೈಲಾರಲಿಂಗೇಶ್ವರ ಸ್ವಾಮಿ ಡೆಂಕಣ ಮರಡಿಯಲ್ಲಿ ಕಾರ್ಣಿಕ ನುಡಿದ್ದೇನು ? | What Did Mylara Karnik Say

ಸಂಪಾಯಿತಲೇ ಪರಾಕ್…ಮೈಲಾರಲಿಂಗೇಶ್ವರ ಸ್ವಾಮಿ ಮೈಲಾರ ಪುಣ್ಯ ಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತರ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಎತ್ತರದ ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕ

ಹೂವಿನಹಡಗಲಿ: ಸಂಪಾಯಿತಲೇ ಪರಾಕ್…

ಇದು ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಯ 125ನೇ ಕಾರ್ಣಿಕೋತ್ಸವ ನುಡಿ.

ಮೈಲಾರಲಿಂಗೇಶ್ವರ ಸ್ವಾಮಿ ಮೈಲಾರ ಪುಣ್ಯ ಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತರ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಎತ್ತರದ ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶ ದಿಕ್ಕುಗಳತ್ತ ನೋಡುತ್ತ ಸದ್ದಲೇ.. ಎಂದು ಕೂಗಿದ ಕೂಡಲೇ ಕಾರ್ಣಿಕದ ಸ್ಥಳದ ಡೆಂಕಣ ಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು, ಸೇರಿದಂತೆ ಪಶು, ಪಕ್ಷಿಗಳೆಲ್ಲ ಕ್ಷಣ ಕಾಲ ಮೌನವಾಗಿದ್ದವು. ಆಗ ಕಾರ್ಣಿಕದ ಗೊರವಯ್ಯ ಸಂಪಾಯಿತಲೇ ಪರಾಕ್‌ ಎಂದು ನಾಡಿನ ಭವಿಷ್ಯ ನುಡಿದ.

ನಾಡಿನ ನಾನಾ ಕಡೆಗಳಿಂದ ಆಗಮಿಸಿದ್ದ 10 ಲಕ್ಷಕ್ಕೂ ಹೆಚ್ಚು ಭಕ್ತರು, ಕಾರ್ಣಿಕ ನುಡಿ ಆಲಿಸಿ ಪುನೀತರಾದರು. ಕಾರ್ಣಿಕೋತ್ಸವ ಮುಗಿದ ಕೂಡಲೇ ಕಾರ್ಣಿಕೋತ್ಸವದ ನಾನಾ ಗೂಡಾರ್ಥಗಳನ್ನು ತಮ್ಮೊಳಗೆ ತಾವು ಚರ್ಚಿಸುತ್ತಿರುವುದು ಕಂಡು ಬಂತು. ಈ ಭವಿಷ್ಯ ನುಡಿಯು ಕೃಷಿ, ವಾಣಿಜ್ಯ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಅನ್ವಯವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಕಾರ್ಣಿಕದ ವಿಶ್ಲೇಷಣೆ ಸಂಪಾಯಿತಲೇ ಪರಾಕ್ ಎಂಬ ಕಾರ್ಣಿಕ ಒಳ್ಳೆಯದೇ ಆಗಿದೆ. ಮಳೆ, ಬೆಳೆ, ವಾಣಿಜ್ಯ ವ್ಯಾಪಾರ ಉತ್ತಮವಾಗುವ ಜತೆಗೆ ಲಾಭದಾಯಕವಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಯಾವುದೇ ವಿಘ್ನ ಇಲ್ಲದೇ ಸುಭದ್ರ ಸರ್ಕಾರ ಇರುತ್ತದೆ. ಕಳೆದ ವರ್ಷ ತುಂಬಿದ ಕೊಡ ತುಳುಕಿತಲೇ ಪರಾಕ್‌ ಎಂದು ಕಾರ್ಣಿಕ ನುಡಿದಿದ್ದನು. ಆಗ ಎಲ್ಲ ಕಡೆಗೂ ಮಳೆ ಹೆಚ್ಚಾಗಿ ಬೆಳೆಗಳು ಹಾನಿಯಾಗುವ ಜತೆಗೆ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿತ್ತು.

ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ, ದೇವಸ್ಥಾನದಿಂದ ಅಶ್ವಾರೂಢರಾಗಿ ಕಾರ್ಣಿಕ ಗೊರವಯ್ಯನನ್ನು ಕರೆತಂದು ಕಾರ್ಣಿಕ ನುಡಿಯಲು ಆದೇಶಿಸಿದರು. ಪುಣ್ಯ ಭೂಮಿ ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿದ್ದ ಗೊರವಯ್ಯ ಕಾರ್ಣಿಕದ ರಾಮಣ್ಣ ಅವರನ್ನು ಸಂಪ್ರದಾಯ ಉಡುಗೆಯಲ್ಲಿ ಕರೆ ತರುತ್ತಾರೆ. ಆಗ ಡೆಂಕಣ ಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತ ಸಮೂಹ ಏಳು ಕೋಟಿ, ಏಳು ಕೋಟಿ,, ಏಳು ಕೋಟಿಗೋ,,, ಛಾಂಗ್‌ ಮಲೋ ಎಂಬ ದೇವರ ನಾಮ ಸ್ಮರಣೆ ಮುಗಿಲು ಮುಟ್ಟಿತ್ತು.

ಕಾಗಿನೆಲೆ ಪೀಠದ ನಿರಂಜನಾನಂದ ಸ್ವಾಮೀಜಿ, ಶಾಸಕ ಕೃಷ್ಣನಾಯ್ಕ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಜಾಹ್ನವಿ, ಮುಜರಾಯಿ ಎಸಿ ಸವಿತಾ ಸೇರಿದಂತೆ ಇತರರಿದ್ದರು.

ಕಾರ್ಣಿಕ ವಿಶ್ಲೇಷಣೆಗೆ ತಡೆ

ಹೂವಿನಹಡಗಲಿ: ಮೈಲಾರದ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ಜರುಗಿದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ದೇವಸ್ಥಾನ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ ವಿಶ್ಲೇಷಣೆ ಮಾಡದೇ ಹೊರಟ ಘಟನೆ ಜರುಗಿದೆ.

ಗೊರವಯ್ಯ ಕಾರ್ಣಿಕದ ರಾಮಣ್ಣ ಕಾರ್ಣಿಕ ನುಡಿದು ಕೆಳಗೆ ಬಿದ್ದ ಕೂಡಲೇ ಗುರು ವೆಂಕಪ್ಪಯ್ಯ ಒಡೆಯರ ಬಳಿ ಎಲ್ಲ ಮಾಧ್ಯಮಗಳು ತೆರಳಿ, ವಿಶ್ಲೇಷಣೆ ಮಾಡಿ ಎಂದು ಕೇಳಿದಾಗ, ನಮಗೆ ಜಿಲ್ಲಾಡಳಿತದಿಂದ ಕಾರ್ಣಿಕ ನುಡಿ ವಿಶ್ಲೇಷಣೆ ಮಾಡದಂತೆ ಆದೇಶಿಸಿದ್ದಾರೆ, ಆದರಿಂದ ಮಾಧ್ಯಮಕ್ಕೆ ವಿಶ್ಲೇಷಣೆ ನೀಡುವುದಿಲ್ಲ ಎಂದು ಹೊರಟರು.ಈ ಬೆಳವಣಿಗೆ ಗಮನಿಸಿದ ಭಕ್ತರು ದೇವಸ್ಥಾನ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ ಮತ್ತು ಕಾರ್ಣಿಕ ನುಡಿಯುವ ಗೊರವಯ್ಯ ನಡುವೆ ಮತ್ತಷ್ಟು ಮುನಿಸು ಉಂಟಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಈ ಹಿಂದೆ ಗೊರವಯ್ಯ ಮತ್ತು ಧರ್ಮದರ್ಶಿ ನಡುವೆ ಅನೇಕ ಬಾರಿ ದೂರುಗಳು ಕೇಳಿ ಬಂದಿದ್ದವು. ಆ ಕಾರಣಕ್ಕಾಗಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನಾವು ವಿಶ್ಲೇಷಣೆ ಮಾಡಲು ಅನುಮತಿ ನೀಡಿಲ್ಲ. ಈ ಸಂಬಂಧ ತಾವು ಸುದ್ದಿಗೋಷ್ಠಿ ಮಾಡಿ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಕಾರ್ಣಿಕ ನುಡಿಯ ವಿಶ್ಲೇಷಣೆ ಭಕ್ತರಿಗೆ ಬಿಟ್ಟಿದ್ದೇವೆ

ಕಾರ್ಣಿಕ ನುಡಿಯ ವಿಶ್ಲೇಷಣೆ ಭಕ್ತರಿಗೆ ಬಿಟ್ಟಿದ್ದೇವೆ. ಇದಕ್ಕೆ ನಾವು ಕಡಿವಾಣ ಹಾಕಿಲ್ಲ. ಕಾರ್ಣಿಕ ನುಡಿ ಒಂದೇ ಆಗಿರಬೇಕೆ ವಿನಃ, ಇದರಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ಈ ಕುರಿತು ಚರ್ಚಿಸುತ್ತೇವೆ. ಗೊರವಯ್ಯ ಹಾಗೂ ಧರ್ಮದರ್ಶಿ ನಡುವೆ ಯಾವುದೇ ಮುನಿಸು ಇಲ್ಲ. ಅವರಿಬ್ಬರ ನಡುವೆ ಮುನಿಸು ಇದ್ದರೆ ಜಾತ್ರೆ ಹೀಗೆ ಆಗುತ್ತಿರಲಿಲ್ಲ. ಎಲ್ಲವೂ ಯಶಸ್ವಿಯಾಗಿದೆ. ಈ ಬಾರಿ ಕಾರ್ಣಿಕ ನುಡಿ ಒಳ್ಳೆಯದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.



Source link

Leave a Reply

Your email address will not be published. Required fields are marked *