ಬೆಂಗಳೂರು, ಫೆ.5: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿರುವ ರಾಜಾತಿಥ್ಯ ಮತ್ತು ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (ಡಿಜಿಪಿ ಅಲೋಕ್ ಕುಮಾರ್ )ಅವರು ಈಗ ‘ವರ್ಗಾವಣೆ ಅಸ್ತ್ರ’ ಪ್ರಯೋಗಿಸಲು ಮುಂದಾಗಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಯೋಜಿಸಲಾಗಿದೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಂತೆ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಇದೇ ತಿಂಗಳ 9 ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಯಾಗಿದೆ. ಇತ್ತೀಚೆಗೆ ಖೈದಿಗಳಿಗೆ ರಾಜಾತಿತ್ಯ ನೀಡಿ ಅತಿ ಹೆಚ್ಚು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳ ಮೇಲೆ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (OOD) ಮೇಲೆ ಬಂದಿರುವ ಅಧಿಕಾರಿಗಳಿಗೆ ಈಗ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಿಬ್ಬಂದಿಗಳನ್ನು ಆಗಾಗ ಬದಲಾವಣೆ ಮಾಡುವುದರಿಂದ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯಬಹುದು ಹಾಗೂ ಶಿಸ್ತನ್ನು ಕಾಪಾಡಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್
ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿವೆ, ಈ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದೀಗ ಅಲೋಕ್ ಕುಮಾರ್ ಅವರ ಈ ಕ್ರಮದಿಂದ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಅವರು ಮಂಗಳೂರು, ಬೆಂಗಳೂರು ಜೈಲಿಗೆ ಭೇಟಿ ನೀಡಿ. ಅಲ್ಲಿನ ಅಧಿಕಾರಿಗಳಿಗೆ ಸೂಚನೆ. ಈ ಎಚ್ಚರಿಕೆ ಬೆನ್ನಲ್ಲೇ ವರ್ಗಾವಣೆ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:28 pm, ಗುರುವಾರ, 5 ಫೆಬ್ರವರಿ 26