ಉಡುಪಿ ಮೂಲದ ಶಂತನು ಶೆಟ್ಟಿಗಾರ್ ಎಂಬ ಯುವಕನಿಗೆ ಅಬುದಾಬಿಯಲ್ಲಿ 49 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಒಂದು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾಗಿದ್ದ ಇವರಿಗೆ, ಮಗಳು ಹುಟ್ಟಿದ ಸೌಭಾಗ್ಯದಿಂದಲೇ ಈ ಅದೃಷ್ಟ ಬಂದಿದೆ ಎಂದು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ.

ಉಡುಪಿ/ಶಿವಮೊಗ್ಗ (ಫೆ.05): ‘ಮನೆಗೆ ಹೆಣ್ಣು ಮಗು ಬಂದರೆ ಮಹಾಲಕ್ಷ್ಮಿಯೇ ಬಂದಂತೆ’ ಎಂಬ ಹಿರಿಯರ ಮಾತು ಕರಾವಳಿಯ ಯುವಕನ ಬಾಳಿನಲ್ಲಿ ಅಕ್ಷರಶಃ ನಿಜವಾಗಿದೆ. ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾಗಿದ್ದ ಉಡುಪಿ ಮೂಲದ ಯುವಕನೊಬ್ಬನಿಗೆ ಅಬುದಾಬಿಯಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಓಮನ್ನಲ್ಲಿ ಉದ್ಯೋಗದಲ್ಲಿರುವ ಕಾಪು ತಾಲೂಕಿನ ಕಟಪಾಡಿ ಮಟ್ಟು ಗ್ರಾಮದ ಶಾಂತನು ಶೆಟ್ಟಿಗಾರ್ ಅವರೇ ಈ ಅದೃಷ್ಟಶಾಲಿ.

ಶಾಂತನು ಶೆಟ್ಟಿಗಾರ್ ಅವರಿಗೆ ವಿವಾಹವಾಗಿದ್ದು, ಕೇವಲ ಒಂದು ತಿಂಗಳ ಹಿಂದಷ್ಟೇ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗಾಗಿ ಪತ್ನಿ ಸದ್ಯ ತೀರ್ಥಹಳ್ಳಿಯ ತವರು ಮನೆಯಲ್ಲಿದ್ದಾರೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ತಂದೆಗೆ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಬಂದಿರುವುದನ್ನು ಕಂಡು ಮನೆಯವರು ಇದನ್ನು ‘ಮಗಳು ತಂದ ಸೌಭಾಗ್ಯ’ ಎಂದೇ ಸಂಭ್ರಮಿಸುತ್ತಿದ್ದಾರೆ. ಈ ಸುದ್ದಿಯನ್ನು ಫೋನ್ ಮೂಲಕ ಶಾಂತನು ತಮ್ಮ ಮನೆಯವರಿಗೆ ತಿಳಿಸಿದ್ದು, ಮಟ್ಟು ಗ್ರಾಮದಲ್ಲಿರುವ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ತಂದೆ, ತಾಯಿ, ಸಹೋದರ ಹಾಗೂ ದೊಡ್ಡಪ್ಪ ಸಿಹಿ ಹಂಚಿ ಸಂತೋಷಪಟ್ಟಿದ್ದಾರೆ.

ಓಮನ್ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಾಂತನು, ಆಗಾಗ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದರು. ಈ ಬಾರಿ ಅಬುದಾಬಿಯ ‘ಬಿಗ್ ಟಿಕೆಟ್ ಲಕ್ಕಿ ಡ್ರಾ’ದಲ್ಲಿ (Big Ticket Lucky Draw) ಪಾಲ್ಗೊಳ್ಳಲು ನಿರ್ಧರಿಸಿದ್ದರು. 500 ದಿರ್ಹಂ (ಭಾರತೀಯ ಮೌಲ್ಯದ ಪ್ರಕಾರ ಸುಮಾರು 12,000 ರೂ.) ನೀಡಿ ಲಾಟರಿ ಖರೀದಿಸಬೇಕಿತ್ತು. ಇದಕ್ಕಾಗಿ ಅವರು ತಮ್ಮ ಸ್ನೇಹಿತನ ಜೊತೆಗೂಡಿ ಹಣ ಹೂಡಿಕೆ ಮಾಡಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್ಗೆ ಈಗ ಬರೋಬ್ಬರಿ 20 ಮಿಲಿಯನ್ ದಿರ್ಹಂ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 49 ಕೋಟಿ ರೂ. ಜಾಕ್ಪಾಟ್ ಹೊಡೆದಿದೆ.

ಶಾಂತನು ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ಗುಣವತಿ ಗೃಹಿಣಿ. ಈ ಹಿಂದೆ ಕೃಷಿಯನ್ನೇ ಅವಲಂಬಿಸಿದ್ದ ಈ ಕುಟುಂಬಕ್ಕೆ ಈಗ ಅದೃಷ್ಟದ ಬಾಗಿಲು ತೆರೆದಿದೆ. ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಶಾಂತನು, ನಂತರ ಡಿಪ್ಲೋಮಾ ಮಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಮಗನ ಸಾಧನೆ ಮತ್ತು ಅದೃಷ್ಟದ ಬಗ್ಗೆ ಮಾತನಾಡಿರುವ ಶಾಂತನು ಅವರ ದೊಡ್ಡಪ್ಪ ಶ್ರೀನಿವಾಸ ಅವರು, ‘ಇದು ದೈವದ ಕೃಪೆ ಮತ್ತು ಮಗುವಿನ ಅದೃಷ್ಟ. ಬಂದಿರುವ ಬಹುಮಾನದ ಹಣವನ್ನು ಒಳ್ಳೆಯ ಕಾರ್ಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ವಿನಿಯೋಗಿಸುವ ಶಕ್ತಿಯನ್ನು ಭಗವಂತ ಅವನಿಗೆ ನೀಡಲಿ’ ಎಂದು ಹಾರೈಸಿದ್ದಾರೆ.

ನೇರ ಪ್ರಸಾರದಲ್ಲಿ ಲಕ್ಕಿ ಡ್ರಾ ಬಹುಮಾನ ಘೋಷಣೆಯಾಗುತ್ತಿದ್ದಂತೆ ಶಾಂತನು ಸಂತೋಷಕ್ಕೆ ಪಾರವೇ ಇರಲಿಲ್ಲ. ಸದ್ಯ ಬಹುಮಾನದ ಮೊತ್ತವನ್ನು ತಮ್ಮ ಸ್ನೇಹಿತನೊಂದಿಗೆ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ. ಆದರೆ, ತಮ್ಮ ಪಾಲಿನ ಹಣವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ತಿಂಗಳ ಬಳಿಕ ಊರಿಗೆ ಬರುವುದಾಗಿ ಶಾಂತನು ತಿಳಿಸಿದ್ದು, ಆಗ ಕುಟುಂಬಸ್ಥರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ, ಕಡಲತಡಿಯ ಮಟ್ಟು ಗ್ರಾಮದ ಯುವಕನೊಬ್ಬ ಈಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವುದು ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.

Source link
ಮಗಳು ತಂದ ಕೋಟ್ಯಾಧಿಪತಿ ಸೌಭಾಗ್ಯ; ಹೆಣ್ಣುಮಗು ಹುಟ್ಟಿದ ತಿಂಗಳಿಗೆ ಅಪ್ಪನಿಗೆ ₹49 ಕೋಟಿ ಲಾಟರಿ!