ತುಮಕೂರು, (ಫೆಬ್ರವರಿ 05): ಕರ್ನಾಟಕದಲ್ಲಿ ಯಾವುದೇ ಕಚೇರಿಗಳಿಗೆ ಹೋದರೂ ಸಹ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗುತ್ತಿಲ್ಲ. ಯಾವುದಾದರೂ ಒಂದು ಮಾಡಿಕೊಡಬೇಕೆಂದರೆ ಅಧಿಕಾರಿಗಳು ಮೊದಲು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಅದರಂತೆ ತುಮಕೂರಿನ ರೈತನೋರ್ವ ಜಮೀನಿಗೆ ರಸ್ತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ತಾಲೂಕು ಕಚೇರಿಗೆ ಬೇಡಿಕೆ ಇಟ್ಟಿದ್ದಾರೆ. ಹೌದು.. ತುಮಕೂರು ಜಿಲ್ಲೆ ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಅವರಿಗೆ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರಿದ್ದರೂ ಕೂಡ ಕ್ಯಾರೇ ಎನ್ನದ ಅಧಿಕಾರಿಗಳು (ಕಂದಾಯ ಅಧಿಕಾರಿ) ಲಂಚಕ್ಕಾಗಿ (ಲಂಚ) ಬೇಡಿಕೆ ಇಟ್ಟು ಅಲೆದಾಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ತಾನು ಬೆಳೆದ ಮೂಲಂಗಿಯನ್ನೇ (ಮೂಲಂಗಿ) ಲಂಚವಾಗಿ ನೀಡಲು ತಾಲೂಕು ಕಚೇರಿಗೆ ತಂದಿದ್ದಾರೆ. ಮೂಲಂಗಿ ಸಮೇತ ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು ‘ನನಗೆ ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ’ ಎಂದು ಕೂಗಿದ್ದಾರೆ.
ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾರ್ ಬಳಿ ಮನವಿ ಮಾಡಿದ್ದಾರೆ. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಬೆಸತ್ತ ರೈತ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ತಾಲೂಕು ಕಚೇರಿಗೆ ತಂದು ಗಮನಸೆಳೆದಿದ್ದಾರೆ.