ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ತುಮಕೂರು, ಫೆಬ್ರವರಿ 06: ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ (ಸಿದ್ದಗಂಗಾ ಜಾತ್ರೆ) ಇಂದು ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ, ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ವಿಶೇಷವಾಗಿ ಜಾತ್ರೆಯ ಅಂಗವಾಗಿ ನಡೆಯುವ ದನದ ವ್ಯಾಪಾರ ಜನರ ಗಮನ ಸೆಳೆಯುತ್ತಿದೆ.
ಜಾತ್ರೆ ಪ್ರಯುಕ್ತ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾತ್ರೆ ಪ್ರಯುಕ್ತ ಇಂದಿನಿಂದ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯಿತು. ಕಳೆದ 60 ವರ್ಷಗಳಿಂದ ಅಧಿಕ ಕಾಲದಿಂದ ಈ ಪ್ರದರ್ಶನ ನಡೆದು ಬರುತ್ತಿದ್ದು, ಜನರ ಗಮನ ಸೆಳೆಯುವ ಅಪಾರ ನಿರೀಕ್ಷೆ ಇದೆ.
ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ
ಇನ್ನು ಸಿದ್ದಗಂಗಾ ಜಾತ್ರೆ ಅಂದರೆ ಒಂದು ಸಂಭ್ರಮ. ಅದರಲ್ಲೂ ಭಕ್ತರು ಮತ್ತು ಜನರು ಕಾಯುವುದು ಒಂದೇ ಒಂದು ವಿಶೇಷಕ್ಕೆ, ಅದುವೇ ದನಗಳ ಜಾತ್ರೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ತಳಿಯ ಸಾವಿರಾರು ದನಗಳು ಜಾತ್ರೆಗೆ ಆಗಮಿಸುತ್ತವೆ. 60 ಸಾವಿರದಿಂದ 16 ಲಕ್ಷ ರೂ ಬೆಲೆ ಬಾಳುವ ವಿವಿಧ ತಳಿಯ ದನಗಳು ಇಲ್ಲಿ ವ್ಯಾಪಾರಕ್ಕೆ ಕರೆತರುತ್ತವೆ, ಈ 15 ದಿನಗಳ ಜಾತ್ರೆಯಲ್ಲಿ ದನಗಳ ಜಾತ್ರೆಗೆ ಹೆಚ್ಚಿನ ವ್ಯಾಪಾರ ನಡೆಯುವ ನಿರೀಕ್ಷೆಯಿದೆ.

13 ನಾಟಕ ಪ್ರದರ್ಶನಗಳು
ಸಿದ್ದಗಂಗಾ ಮಠದಲ್ಲಿ ದನದ ಜಾತ್ರೆಗೆ ಒಳಪಡಿಸಿ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಮಠದಿಂದ 1964ರಿಂದ ನಡೆದುಕೊಂಡು ಬಂದಿರುವ ವಸ್ತು ಪ್ರದರ್ಶನಕ್ಕೆ ತನ್ನದೇ ಆದ ಇತಿಹಾಸವಿದೆ. ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಫೆಬ್ರವರಿ 16 ರಂದು ರಥೋತ್ಸವ ನಡೆಯಲಿದೆ, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು ಇಂದಿನಿಂದ 15 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ 13 ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ
ಒಟ್ಟಾರೆ ಕೃಷಿ ಕೈಗಾರಿಕಾ ಪ್ರದರ್ಶನ ವಸ್ತುವಿನ ಜೊತೆಗೆ ಕಣ್ಮನ ಸೆಳೆಯುವ ದನಗಳ ಜಾತ್ರೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಇಂದಿನಿಂದ 15 ದಿನಗಳ ಕಾಲ ನಡೆಯಲಿದ್ದು, ಲಕ್ಷಾಂತರ ಜನ ಸಿದ್ದಂಗಾಗ ಮಠಕ್ಕೆ ಹರಿದು ಬರುವ ನಿರೀಕ್ಷೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.