ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ | Cm Siddaramaiah Clarifies Bengaluru Metro Fare Hike Blames Union Govt Bjp Sat

ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ | Cm Siddaramaiah Clarifies Bengaluru Metro Fare Hike Blames Union Govt Bjp Sat



ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ | Cm Siddaramaiah Clarifies Bengaluru Metro Fare Hike Blames Union Govt Bjp Sat

ಬೆಂಗಳೂರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವಲ್ಲ, ಇದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಆದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಫೆ.06): ‘ನಮ್ಮ ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಅದು ಬೆಂಗಳೂರಿನ ನಾಡಿಮಿಡಿತ. ಇತ್ತೀಚೆಗೆ ಪರಿಷ್ಕರಣೆಯಾದ ಮೆಟ್ರೋ ಪ್ರಯಾಣ ದರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಮತ್ತು ಆತಂಕವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಆದರೆ, ಈ ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಆದೇಶ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ರಾಜ್ಯದ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದರ ನಿರ್ಧಾರ ರಾಜ್ಯದ ಕೈಯಲ್ಲಿಲ್ಲ

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಮೆಟ್ರೋ ದರ ನಿಗದಿಯ ಹಿಂದಿರುವ ಕಾನೂನು ಮತ್ತು ತಾಂತ್ರಿಕ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ-2002ರ ಅನ್ವಯ, ಮೆಟ್ರೋ ದರಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ದರಗಳನ್ನು ನಿಗದಿಪಡಿಸುವುದು ‘ದರ ನಿಗದಿ ಸಮಿತಿ’ (Fare Fixation Committee – FFC). ಈ ಸಮಿತಿಯನ್ನು ರಚಿಸುವುದು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವೇ ಹೊರತು ರಾಜ್ಯ ಸರ್ಕಾರವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಆದೇಶ ಪಾಲನೆ ಕಡ್ಡಾಯ

ಕಾಯ್ದೆಯ ಸೆಕ್ಷನ್ 36 ಮತ್ತು 37ರ ಪ್ರಕಾರ, ಈ ಸಮಿತಿಯು ನೀಡುವ ಶಿಫಾರಸುಗಳು ಮೆಟ್ರೋ ಆಡಳಿತ ಮಂಡಳಿಗೆ (BMRCL) ಕಡ್ಡಾಯವಾಗಿರುತ್ತವೆ. ಈ ಆದೇಶವನ್ನು ತಿರಸ್ಕರಿಸುವ ಅಥವಾ ಬದಲಾಯಿಸುವ ಯಾವುದೇ ಕಾನೂನುಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಾಗಲಿ ಅಥವಾ ಬಿಎಂಆರ್‌ಸಿಎಲ್‌ಗಾಗಲಿ ಇರುವುದಿಲ್ಲ. ಈ ಸಮಿತಿಯು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ, ಕೇಂದ್ರದ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಶಿಫಾರಸುಗಳು ಸಂಸತ್ತಿನ ಆದೇಶದಷ್ಟೇ ಪ್ರಬಲವಾಗಿರುತ್ತವೆ. ಹೀಗಿರುವಾಗ, ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುವುದು ರಾಜಕೀಯ ಪ್ರೇರಿತ ಮತ್ತು ಜನರನ್ನು ದಾರಿ ತಪ್ಪಿಸುವ ಕುತಂತ್ರ ಎಂದು ಸಿಎಂ ಕಿಡಿಕಾರಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆಯಲಿರುವ ಸಿಎಂ

ಕಾನೂನು ಚೌಕಟ್ಟು ಏನೇ ಇದ್ದರೂ, ರಾಜ್ಯ ಸರ್ಕಾರ ಜನರ ಪರವಾಗಿ ನಿಲ್ಲಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ. ‘ಜನಸಾಮಾನ್ಯರಿಗೆ ಹೊರೆಯಾಗಿರುವ ಈ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ದರ ನಿಗದಿ ಸಮಿತಿಯ ಶಿಫಾರಸುಗಳನ್ನು ಮರುಪರಿಶೀಲಿಸಬೇಕು ಮತ್ತು ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಕಡಿಮೆ ಆದಾಯದ ವರ್ಗಗಳಿಗೆ ರಿಯಾಯಿತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ. ಆರ್ಥಿಕ ಸುಸ್ಥಿರತೆಯ ಜೊತೆಗೆ ಸಾಮಾಜಿಕ ನ್ಯಾಯವನ್ನೂ ಕಾಪಾಡುವ ನೀತಿಗಳನ್ನು ರೂಪಿಸಲು ಕೇಂದ್ರವನ್ನು ಕೋರುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ

ದರ ಏರಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಿಎಂ ಕೆಂಡಾಮಂಡಲವಾಗಿದ್ದಾರೆ. ‘ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ವಿಫಲರಾದ ಬಿಜೆಪಿ ನಾಯಕರು, ಬೆಂಗಳೂರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿ ಸಂಸದರು ಈ ಬಗ್ಗೆ ದನಿ ಎತ್ತಲಿಲ್ಲವೇಕೆ? ಕೇಂದ್ರದಲ್ಲಿರುವ ಕರ್ನಾಟಕದ ಸಚಿವರು ದರ ಏರಿಕೆಯನ್ನು ವಿರೋಧಿಸಲಿಲ್ಲವೇಕೆ? ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿಗರ ಪರವಾಗಿ ನಿಲ್ಲುವ ಬದಲು ದೆಹಲಿ ನಾಯಕರ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಕರ್ನಾಟಕದ ಜನರಿಗಿಂತ ಹೈಕಮಾಂಡ್ ಮೆಚ್ಚಿಸುವುದೇ ಮುಖ್ಯವಾಗಿದೆ’ ಎಂದು ಲೇವಡಿ ಮಾಡಿದ್ದಾರೆ.

ತೆರಿಗೆ ಅನ್ಯಾಯದ ಮುಂದುವರಿದ ಭಾಗ

ಇದು ಕೇವಲ ಒಂದು ದರ ಏರಿಕೆಯ ವಿಚಾರವಲ್ಲ, ಕೇಂದ್ರ ಸರ್ಕಾರವು ಕರ್ನಾಟಕದ ಮೇಲೆ ನಡೆಸುತ್ತಿರುವ ನಿರಂತರ ಪ್ರಹಾರದ ಮುಂದುವರಿದ ಭಾಗವಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ, ಅನುದಾನ ನಿರಾಕರಣೆ, ಮೂಲಸೌಕರ್ಯ ಯೋಜನೆಗಳಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ಈಗ ಮೆಟ್ರೋ ದರ ಏರಿಕೆಯ ಮೂಲಕ ಸಾಮಾನ್ಯ ಜನರ ಮೇಲೆ ಬರೆ ಎಳೆದಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ರಾಜ್ಯಗಳನ್ನು ಬೆಂಬಲಿಸುವ ಬದಲು, ಕೇಂದ್ರ ಸರ್ಕಾರ ಜನಜೀವನವನ್ನು ದುಬಾರಿ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ, ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ, ಜನರ ಹಿತದೃಷ್ಟಿಯಿಂದ ರಾಜ್ಯದ ಜೊತೆ ನಿಲ್ಲಬೇಕು. ಆರ್ಥಿಕವಾಗಲಿ, ಆಡಳಿತಾತ್ಮಕವಾಗಲಿ ಅಥವಾ ರಾಜಕೀಯವಾಗಲಿ, ರಾಜ್ಯಕ್ಕೆ ಆಗುವ ಯಾವುದೇ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *