Headlines

ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಪೋಸ್ಟ್​​​: ರಾಹುಲ್​​ ಹೆಸರು ಉಲ್ಲೇಖಿಸಿ ಬಿಜೆಪಿ ಗುದ್ದು

ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಪೋಸ್ಟ್​​​: ರಾಹುಲ್​​ ಹೆಸರು ಉಲ್ಲೇಖಿಸಿ ಬಿಜೆಪಿ ಗುದ್ದು


ಮೋದಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ವಿಜಯೇಂದ್ರ ಕೌಂಟರ್ಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಬೆಂಗಳೂರು, ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಮಾಡಿರುವ ಎಕ್ಸ್‌ಪೋಸ್ಟ್ ವಿಚಾರವೀಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳ ಪೋಸ್ಟ್ ಕಂಡು ಕೇರಳಿರುವ ರಾಜ್ಯದ ಕೇಸರಿ ಪಡೆ ರಾಹುಲ್ ಗಾಂಧಿ ಹೆಸರು ಉಲ್ಲೇಖಿಸಿ ಕೌಂಟರ್ ಕೊಟ್ಟಿದೆ. ಸಿಎಂ ಪದವಿ ವಿಚಾರವಾಗಿ ಕಿತ್ತಾಡುತ್ತಿರುವ ನೀವು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲು ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ ಎಂದು ತಿವಿದಿದ್ದಾರೆ.

ಸಿದ್ದರಾಮಯ್ಯ ಪೋಸ್ಟ್‌ನಲ್ಲಿ ಏನಿದೆ?

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್ತಿಗೆ ತೋರಿಸಿರುವ ಅಗೌರವ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರವಿಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಡೆ ಎಂದರ್ಥ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಕಿತ್ತಾಟ; ಡಿಕೆ ಶಿವಕುಮಾರ್ ಕದ್ದು ಮುಚ್ಚಿ ಮಾತಿಗೆ ಸಿದ್ದರಾಮಯ್ಯ ಗರಂ

ಸಿಎಂಗೆ ವಿಜಯೇಂದ್ರ ಕೌಂಟರ್

ಪ್ರಧಾನಿ ಮೋದಿ ಕುರಿತು ಸಿದ್ದರಾಮಯ್ಯ ಸಿಎಂ ಆರೋಪಕ್ಕೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರೇ ಪ್ರಧಾನಿ ಎಲ್ಲೂ ತಪ್ಪಿಸಿಕೊಂಡು ಹೋಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ಭವನದಲ್ಲೇ ಇದ್ದರು. ರಾಜ್ಯಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದ ದಿಟ್ಟತನದಿಂದ. ವಾಸ್ತವವಾಗಿ ತಪ್ಪಿಸಿಕೊಳ್ಳುವ ಸಂಸ್ಕೃತಿ ಇದ್ದರೆ ಅದು ನಿಮ್ಮ ಕಾಂಗ್ರೆಸ್‌ನ ನೆಲೆಯಿಂದ ಉದ್ಭವಿಸಿದೆ.ಇದಕ್ಕೆ ಸಾಕ್ಷಿಯಾಗಿ ರಾಹುಲ್ ಗಾಂಧಿಯೇ ನಮ್ಮ ಕಣ್ಣಮುಂದೆ ಇದ್ದಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ನಿಮ್ಮ ಆಡಳಿತದ ಪ್ರತಿಫಲವೆಂಬಂತೆ ಅರಾಜಕತೆ ಸೃಷ್ಟಿಯಾಗುತ್ತಿತ್ತು, ಸಿಎಂ ಪದವಿಯ ಸುತ್ತ ಕಳೆದ 1 ವರ್ಷದಿಂದ ಕಿತ್ತಾಟ ನಡೆಯುತ್ತಿದೆ. ಸಮಸ್ಯೆಯನ್ನು ಬಗೆಹರಿಸಬೇಕಾದ ನಿಮ್ಮ ಹೈಕಮಾಂಡ್ ರೂವಾರಿ ರಾಹುಲ್ ಗಾಂಧಿಯವರು ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಅವರನ್ನು ಹಿಡಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿನ ಬಿಟ್ಟು ದಿನ ದೆಹಲಿಗೆ ಅಲೆಯುತ್ತಿದ್ದಾರೆ. ಮೊದಲು ನೀವು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿ ಮುಖ್ಯಮಂತ್ರಿ ಸ್ಥಾನದ ಕಗ್ಗಂಟನ್ನು ಬಿಡಿಸಿಕೊಳ್ಳಿ. ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ ಎಂದು ತಿವಿದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *