ಭಾರತದ ಸ್ಟಾರ್ ನಟರುಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅರಬ್ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ (ಭಾರತೀಯ ಚಲನಚಿತ್ರಗಳು) ಭಾರಿ ದೊಡ್ಡ ಮಾರುಕಟ್ಟೆ ಇದೆ. ಯಾವ ಮಟ್ಟಿಗೆಂದರೆ ಅರಬ್ ದೇಶದ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಸಿನಿಮಾಗಳಲ್ಲಿ ಭಾರತದ ಸ್ಟಾರ್ ನಟರು ನಟಿಸಿದ್ದಾರೆ. ಅದುವೇ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್. ಬಾಲಿವುಡ್ ನ ಈ ಇಬ್ಬರು ಸ್ಟಾರ್ ನಟರು ಇದೀಗ ಸೌದಿಯ ಸಿನಿಮಾದಲ್ಲಿ ನಟಿಸಿದ್ದಾರೆ.
ಸೌದಿ ಚಿತ್ರರಂಗದಲ್ಲಿ ನಿರ್ಮಾಣಗೊಂಡಿರುವ ‘ದಿ ಸೆವೆನ್ ಡಾಗ್ಸ್’ ಹೆಸರಿನ ಭರ್ಜರಿ ಆಕ್ಷನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದಷ್ಟೇ ಬಿಡುಗಡೆ ಆಗಿದ್ದು, ಸಲ್ಮಾನ್ ಮತ್ತು ಸಂಜಯ್ ದತ್ ಅವರ ಟ್ರೈಲರ್ ನಲ್ಲಿ ಸಹ ನಟಿಸಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದೆ, ಸಲ್ಮಾನ್ ಹಾಗೂ ಸಂಜಯ್ ಅವರು ಸಹ ಸಖತ್ ಪವರ್ ಫುಲ್ ಪಾತ್ರಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಟ್ರೈಲರ್ ನಿಂದ ತಿಳಿದು ಬರುತ್ತಿದೆ.
ಈ ಹಿಂದೆ ಸೂಪರ್ ಹಿಟ್ ಆಗಿದ್ದ ಸೌದಿ ಸಿನಿಮಾ ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಸಿನಿಮಾ ನಿರ್ದೇಶಿಸಿದ್ದ ಆದಿಲ್ ಇಲ್ ಅರಬ್ಬಿ ಮತ್ತು ಬಿಲಾಲ್ ಫಲಾಹ್ ಅವರ ನಿರ್ದೇಶನದ ‘ದಿ ಸೆವೆನ್ ಡಾಗ್ಸ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ಸಂಜಯ್ ಅವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಾಯಕನ ಪಾತ್ರದಲ್ಲಿ ಈಜಿಪ್ಟ್ ನಟ ಕರೀಮ್ ಅಬ್ದಿಲ್ ಅಜೀಜ್ ಮತ್ತು ಅಹ್ಮದ್ ಇಜ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಹಾಲಿವುಡ್ ಸ್ಟಾರ್ ನಟಿ ಮೋನಿಕಾ ಬೆಲೂಚಿ.
ಇದನ್ನೂ ಓದಿ:ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’
ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ಸೂಟು ಧರಿಸಿ, ಏಜೆಂಟ್ ರೀತಿ ಕಾಣಿಸಿಕೊಂಡಿದ್ದಾರೆ. ‘ನೀನ್ಯಾಕೊ ಕ್ರಿಮಿನಲ್ ರೀತಿ ಕಾಣುತ್ತಿದ್ದೀಯ’ ಎಂಬ ಡೈಲಾಗ್ ಸಹ ಪಾತ್ರವೊಂದಕ್ಕೆ ಹೇಳುತ್ತಿರುವ ದೃಶ್ಯ ಟ್ರೈಲರ್‌ನಲ್ಲಿದೆ. ಇನ್ನು ಸಂಜಯ್ ದತ್, ಪಾರ್ಟಿ ಮಾಡುತ್ತಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಟ್ರೈಲರ್ ನಲ್ಲಿದೆ. ಸಿನಿಮಾದ ಕತೆ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಏಜೆಂಟ್ ಗಳದ್ದು ಸಹ ಟ್ರೈಲರ್ ನಿಂದ ತಿಳಿದು ಬರುತ್ತಿದೆ.
ಇದೊಂದು ಅದ್ಧೂರಿ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸಖತ್ ಚೇಸಿಂಗ್ ಮತ್ತು ಆಕ್ಷನ್ ಸಿನಿಮಾಗಳಿದ್ದು ಅವುಗಳ ತುಣುಕುಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ. ಅದ್ಧೂರಿ ಕಾರುಗಳು, ಹೆಲಿಕಾಪ್ಟರ್, ವಿಮಾನಗಳು ಹೇರಳವಾಗಿವೆ ಸಿನಿಮಾದಲ್ಲಿ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ತಿಂಗಳು ಬಾಕಿ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ