ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ! | Rare 12th Century Hero Stone From King Nagavarmarasa Era Discovered In Ankola At Uttara Kannada

ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ! | Rare 12th Century Hero Stone From King Nagavarmarasa Era Discovered In Ankola At Uttara Kannada



ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ! | Rare 12th Century Hero Stone From King Nagavarmarasa Era Discovered In Ankola At Uttara Kannada

ಅಂಕೋಲಾ ತಾಲೂಕಿನ ಸಂದ್ಕಣಿ ಗ್ರಾಮದಲ್ಲಿ 12ನೇ ಶತಮಾನದ ನಾಗವರ್ಮರಸನ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ. ಏಳು ಪಟ್ಟಿಕೆಗಳ ಈ ಶಿಲ್ಪದಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ವಿಶಿಷ್ಟ ದೃಶ್ಯವಿದ್ದು, ಶಾಸನರಹಿತವಾಗಿದ್ದರೂ ಇದು ಜಿಲ್ಲೆಯ ಇತಿಹಾಸಕ್ಕೆ ಮಹತ್ವದ ದಾಖಲೆಯಾಗಿದೆ.

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದ್ಕಣಿ ಗ್ರಾಮದಲ್ಲಿ ಕಳೆದ ವಾರ 12ನೇ ಶತಮಾನದ ಆರಂಭಿಕ ಅವಧಿಗೆ ಸೇರಿದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ. ಈ ವೀರಗಲ್ಲು ಗೋಕರ್ಣಪುರಾಧೀಶ್ವರ ಎಂಬ ಬಿರುದನ್ನು ಧರಿಸಿದ್ದ ನಾಗವರ್ಮರಸನ ಆಳ್ವಿಕೆಯ ಕಾಲಕ್ಕೆ ಸೇರಿದ್ದು, ಜಿಲ್ಲೆಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ದಾಖಲೆಯಾಗಿ ಹೊರಹೊಮ್ಮಿದೆ.

ಜಿಲ್ಲೆಯ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ಯಾಮಸುಂದರ ಗೌಡ ಅವರ ನೇತೃತ್ವದಲ್ಲಿ, ಮಾರುಗದ್ದೆ ಸರ್ಕಾರಿ ಶಾಲೆಯ ಶಿಕ್ಷಕರಾದ ದಿವಾಕರ ದೇವನ್ಮನೆ, ನೀಲಕಂಠ ಗೌಡ ಹಾಗೂ ಸ್ಥಳೀಯರಾದ ಕೇಶವ ಭಂಡಾರಿ ಅವರು ನಡೆಸಿದ ಕ್ಷೇತ್ರ ಪರಿಶೀಲನೆ ವೇಳೆ ಈ ವೀರಗಲ್ಲು ಪತ್ತೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಡಗಿಹೋಗಿದ್ದ ಈ ಶಿಲ್ಪ ಇತಿಹಾಸಾಸಕ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಏಳು ಪಟ್ಟಿಕೆಗಳಲ್ಲಿ ಅಪೂರ್ವ ಶಿಲ್ಪಕಲಾ ವೈಶಿಷ್ಟ್ಯ

ಈ ವೀರಗಲ್ಲು ಒಟ್ಟು ಏಳು ಪಟ್ಟಿಕೆಗಳಲ್ಲಿ ಶಿಲ್ಪಿತವಾಗಿದ್ದು, ಪ್ರತಿಯೊಂದು ಪಟ್ಟಿಕೆಯೂ ವಿಭಿನ್ನ ಕಥನವನ್ನು ಒಳಗೊಂಡಿದೆ. ಮೊದಲ ಪಟ್ಟಿಕೆಯಲ್ಲಿ ಖಡ್ಗ ಯುದ್ಧದ ದೃಶ್ಯವನ್ನು ಸುಂದರವಾಗಿ ಕೆತ್ತಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ತಾಳ, ಜಾಗಟೆ, ಮೃದಂಗ ಮುಂತಾದ ವಾದ್ಯಗಳನ್ನು ಬಾರಿಸುತ್ತಿರುವ ವಾದ್ಯವೃಂದದ ದೃಶ್ಯವಿದ್ದು, ಆ ಕಾಲದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತದೆ.

ಮೂರನೇ ಪಟ್ಟಿಕೆಯಲ್ಲಿ ಬಿಲ್ಲು ಹಿಡಿದ ವೀರನ ಚಿತ್ರಣವಿದ್ದು, ನಾಲ್ಕನೇ ಪಟ್ಟಿಕೆಯಲ್ಲಿ ವಾನರರು ಮತ್ತು ದಾನವರ ನಡುವೆ ಭೀಕರ ಯುದ್ಧ ನಡೆಯುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಐದನೇ ಪಟ್ಟಿಕೆಯ ಅರ್ಧಭಾಗದಲ್ಲಿ ರತಿಕ್ರೀಡೆಯಲ್ಲಿ ನಿರತರಾದ ದಂಪತಿಗಳ ಶಿಲ್ಪವಿದ್ದು, ಉಳಿದ ಅರ್ಧಭಾಗದಲ್ಲಿ ಮಂಟಪದೊಳಗೆ ವಾನರ ದಂಪತಿಗಳು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಅಪರೂಪದ ದೃಶ್ಯ ಚಿತ್ರಿಸಲಾಗಿದೆ.

ವೀರಗಲ್ಲೊಂದರಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಶಿಲ್ಪ ಈವರೆಗೆ ಬೇರೆ ಎಲ್ಲಿಯೂ ಪತ್ತೆಯಾಗಿಲ್ಲ. ಇದು ಈ ವೀರಗಲ್ಲಿನ ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಅಂಶವಾಗಿದ್ದು, ಶಿಲ್ಪಕಲಾ ದೃಷ್ಟಿಯಿಂದಲೂ ವಿಶಿಷ್ಟ ಸ್ಥಾನವನ್ನು ಪಡೆದಿದೆ.

ಆರನೇ ಪಟ್ಟಿಕೆಯಲ್ಲಿ ವೀರನೊಬ್ಬ ಕುದುರೆ ಸವಾರರು ಹಾಗೂ ಕಾಲಾಳು ಸೈನಿಕರೊಂದಿಗೆ ಏಕಕಾಲದಲ್ಲಿ ಹೋರಾಡುತ್ತಿರುವ ದೃಶ್ಯವಿದ್ದು, ವೀರನ ಕಾಲಿನ ಕೆಳಗೆ ಶತ್ರು ಸೈನಿಕರು ಸತ್ತು ಬಿದ್ದಂತೆ ಚಿತ್ರಿಸಲಾಗಿದೆ. ಎಲ್ಲಕ್ಕಿಂತ ಮೇಲಿನ ಏಳನೇ ಪಟ್ಟಿಕೆಯಲ್ಲಿ ಆನೆಗಳಿಂದ ಅಭಿಷೇಕಗೊಳ್ಳುತ್ತಿರುವ ಲಕ್ಷ್ಮಿದೇವಿಯ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಇದು ವಿಜಯ, ಐಶ್ವರ್ಯ ಹಾಗೂ ಧರ್ಮದ ಸಂಕೇತವಾಗಿ ಪರಿಗಣಿಸಲಾಗಿದೆ.

ಶಾಸನರಹಿತವಾದರೂ ಐತಿಹಾಸಿಕ ಮಹತ್ವ ಅಪಾರ

ಈ ಕುರಿತು ವಿವರ ನೀಡಿದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು, ಸಂದ್ಕಣಿಯಲ್ಲಿ ಪತ್ತೆಯಾದ ವೀರಗಲ್ಲು ಸುಮಾರು ಐದು ಅಡಿ ಎತ್ತರ ಹಾಗೂ 22 ಅಂಗುಲ ಅಗಲ ಹೊಂದಿದ್ದು, ಒಟ್ಟು ಏಳು ಪಟ್ಟಿಕೆಗಳಲ್ಲಿ ಶಿಲ್ಪಿತವಾಗಿದೆ ಎಂದು ತಿಳಿಸಿದರು. ಈ ವೀರಗಲ್ಲಿನಲ್ಲಿ ಯಾವುದೇ ಬರವಣಿಗೆ ಅಥವಾ ಶಾಸನಗಳಿಲ್ಲದ ಕಾರಣ ಇದನ್ನು ಶಾಸನರಹಿತ ವೀರಗಲ್ಲು ಎಂದು ಗುರುತಿಸಲಾಗಿದೆ. ಆದರೂ ಶಿಲ್ಪ ಶೈಲಿ, ಕಥನ ವಿನ್ಯಾಸ ಮತ್ತು ಕಲಾ ವೈಶಿಷ್ಟ್ಯಗಳ ಆಧಾರದಲ್ಲಿ ಇದು ನಾಗವರ್ಮರಸನ ಕಾಲಕ್ಕೆ ಸೇರಿದುದೆಂದು ಸ್ಪಷ್ಟವಾಗಿ ಹೇಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನಾಗವರ್ಮರಸನ ಆಳ್ವಿಕೆ ಮತ್ತು ಇತಿಹಾಸಿಕ ಹಿನ್ನೆಲೆ

ಈವರೆಗೆ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ಈ ಮಾದರಿಯ ಸುಮಾರು 30ಕ್ಕೂ ಹೆಚ್ಚು ವೀರಗಲ್ಲುಗಳು ಪತ್ತೆಯಾಗಿವೆ. ಅವೆಲ್ಲವೂ ಶಿಲ್ಪಶೈಲಿಯಲ್ಲಿ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿವೆ. ಅವುಗಳಲ್ಲಿ ಒಂಬತ್ತು ವೀರಗಲ್ಲುಗಳಲ್ಲಿ ಶಾಸನಗಳಿದ್ದು, ಎಲ್ಲ ಶಾಸನಗಳಲ್ಲಿಯೂ ನಾಗವರ್ಮರಸನ ಹೆಸರು ಉಲ್ಲೇಖವಾಗಿದೆ.

ನಾಗವರ್ಮರಸನು ಕ್ರಿ.ಶ. 1070ರಿಂದ 1113ರವರೆಗೆ ಸುಮಾರು 43 ವರ್ಷಗಳ ಕಾಲ ‘ಗೋಕರ್ಣಪುರಾಧೀಶ್ವರ’ ಎಂಬ ಬಿರುದನ್ನು ಧರಿಸಿ ಆಳ್ವಿಕೆ ನಡೆಸಿದ ಪ್ರಬಲ ಅರಸನಾಗಿದ್ದ. ಇಂದಿನ ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಸಿದ್ದಾಪುರ ತಾಲೂಕುಗಳ ಭಾಗಗಳನ್ನು ಒಳಗೊಂಡ ಪ್ರಾಚೀನ ಹೈವ ಐನೂರು ಹಾಗೂ ಕೊಂಕಣ ಒಂಬೈನೂರರ ದಕ್ಷಿಣ ಭಾಗಗಳನ್ನು ಆಳಿದವನು ಎಂದು ಇತಿಹಾಸ ದಾಖಲೆಗಳು ತಿಳಿಸುತ್ತವೆ. ಈ ಅರಸನಿಗೆ ಸಂಬಂಧಿಸಿದಂತೆ ಇದುವರೆಗೆ 12 ಶಾಸನಗಳು ಲಭ್ಯವಾಗಿವೆ.

ಅಂಕೋಲಾ ತಾಲೂಕಿನ ಬಡಗೇರಿ–ಅಲಗೇರಿ ಉತ್ತರ ಭಾಗದಲ್ಲಿ ನಾಗವರ್ಮರಸನ ಕಾಲಕ್ಕೆ ಸೇರಿದ ವೀರಗಲ್ಲೊಂದು ಪತ್ತೆಯಾಗಿರುವುದು ಇದೇ ಮೊದಲ ಬಾರಿಗೆ ಆಗಿದ್ದು, ಈ ಆವಿಷ್ಕಾರವು ಉತ್ತರ ಕನ್ನಡ ಜಿಲ್ಲೆಯ ಮಧ್ಯಯುಗೀನ ಇತಿಹಾಸ ಅಧ್ಯಯನಕ್ಕೆ ಹೊಸ ಆಯಾಮ ನೀಡಲಿದೆ ಎಂಬ ವಿಶ್ವಾಸವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *