ಮದುವೆಯ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರಣಗಳ ಬಗ್ಗೆ ಹಲವು ಬಾರಿ ವರದಿಯಾಗುತ್ತಿರುತ್ತವೆ. ಆದರೆ, ಹಾವೇರಿಯಲ್ಲೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆ, ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಆತನ ಕೈಹಿಡಿದು 2.5 ಲಕ್ಷ ರೂ. ಪಡೆದು ಮೋಸ ಮಾಡಿದ್ದಾಳೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಘಟನೆ ತುಮ್ಮಿನಕಟ್ಟಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಯುವಕ ಮೋಸಹೋದ ಅಮಾಯಕನಾಗಿದ್ದಾನೆ. ತುಮಕೂರಿನ ಪಾವಗಡ ಮೂಲದ ರೇಖಾ ಎಂಬ ಮಹಿಳೆ ಆತನನ್ನು ಮದುವೆಯಾದ್ದಲ್ಲದೆ ಸುಮಾರು 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾಳೆ.
ಕಳೆದ ವಾರವೇ ಹಿರೇಕೆರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ಇವರ ಮದುವೆ ನೆರವೇರಿತ್ತು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ರೇಖಾಳ ಮೊಬೈಲ್ಗೆ ಮಂಗಳವಾರ ಕರೆ ಮಾಡಿದ ಮಕ್ಕಳು ‘ನಾವು ರೇಖಾ ಮಕ್ಕಳು’ ಎಂದು ಹೇಳಿದಾಗ ರವಿಚಂದ್ರ ಕುಟುಂಬಕ್ಕೆ ಬಂದಿದೆ.
ತನ್ನ ಕಳ್ಳಾಟ ಯುವಕನ ಮನೆಯವರಿಗೆ ಗೊತ್ತಾಯಿತು ಎಂದು ತಿಳಿಯುತ್ತಿದ್ದಂತೆಯೇ ರೇಖಾ ತುಮ್ಮಿನಕಟ್ಟಿ ಗ್ರಾಮದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆಕೆ ಓಡಿ ಹೋಗಲು ಯತ್ನಿಸುತ್ತಿರುವ ವಿಷಯ ತಿಳಿದ ರವಿಚಂದ್ರ ಹಾಗೂ ಗ್ರಾಮಸ್ಥರು ರೇಖಾಳನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಸದ್ಯ ಮಹಿಳೆ ಪೊಲೀಸ್ ವಶದಲ್ಲಿದ್ದಾಳೆ. ಆಕೆಯ ಕೃತ್ಯದ ಕುರಿತು ಹಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಮುಂದಿನ ತನಿಖೆ ಕೈಗೊಂಡಿದೆ. ಸದ್ಯ ಈ ಮದುವೆ ಹಾವೇರಿಯಲ್ಲಿ ಸಂಚಲನ ಸೃಷ್ಟಿಸಿದ್ದು, ಯುವಕನ ಬಗ್ಗೆ ಕನಿಕರ ವ್ಯಕ್ತವಾಗುತ್ತಿದೆ. -: ಅಣ್ಣಪ್ಪ ಬಾರ್ಕಿ, ಟಿವಿ9 ವರದಿ ಹಾವೇರಿ




