Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water

Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು! | Alien Life Search Focuses On Nitrogen And Phosphorus Over Water


ಅನ್ಯಗ್ರಹ ಜೀವಿಗಳನ್ನು ಹುಡುಕಲು ನೀರಿದ್ದರೆ ಸಾಕಾ? ಖಂಡಿತ ಇಲ್ಲ. ಹೊಸ ಸಂಶೋಧನೆಯ ಪ್ರಕಾರ, ರಂಜಕ ಮತ್ತು ಸಾರಜನಕ ಕೂಡ ಅತ್ಯಗತ್ಯ. ಒಂದು ಗ್ರಹ ನಿಜವಾಗಿಯೂ ವಾಸಯೋಗ್ಯವಾಗಲು ಬೇಕಾದ ‘ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್’ ಬಗ್ಗೆ ತಿಳಿಯಿರಿ.

ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ನೀರು. ಎಲ್ಲಿ ನೀರಿದೆಯೋ ಅಲ್ಲಿ ಜೀವ ಇರುತ್ತೆ ಅಂತ ವಿಜ್ಞಾನಿಗಳು ಇಷ್ಟು ದಿನ ನಂಬಿದ್ದರು. ಆದರೆ, ಈ ಯೋಚನೆ ಈಗ ಬದಲಾಗುತ್ತಿದೆ. ಸಾಗರಗಳೇ ತುಂಬಿರುವ ಗ್ರಹದಲ್ಲೂ ಕೆಲವು ಪ್ರಮುಖ ರಾಸಾಯನಿಕಗಳು ಇಲ್ಲದಿದ್ದರೆ, ಅದು ನಿರ್ಜೀವವಾಗಿರಬಹುದು ಅಂತ ಸಂಶೋಧಕರು ಹೇಳುತ್ತಿದ್ದಾರೆ.

ಅನ್ಯಗ್ರಹಗಳಲ್ಲಿ ಜೀವಿಗಳಿರಲಿ ಏನಿರಬೇಕು?

ಹೊಸ ಸಂಶೋಧನೆಯ ಪ್ರಕಾರ, ನೀರಿಗಿಂತಲೂ ರಂಜಕ (phosphorus) ಮತ್ತು ಸಾರಜನಕ (nitrogen) ಹೆಚ್ಚು ಮುಖ್ಯವಾಗಿರಬಹುದು. ಭೂಮಿಯ ಮೇಲಿನ ಜೀವಕ್ಕೆ ಇವು ಅನಿವಾರ್ಯ. ಡಿಎನ್‌ಎ ಮತ್ತು ಆರ್‌ಎನ್‌ಎ ರಚನೆಗೆ ರಂಜಕ ಬೇಕೇಬೇಕು. ಇವು ನಮ್ಮ ಆನುವಂಶಿಕ ಮಾಹಿತಿಯನ್ನು ಸಂಗ್ರಹಿಸಿ, ರವಾನಿಸುತ್ತವೆ. ಇನ್ನು, ಸಾರಜನಕವು ಪ್ರೋಟೀನ್‌ಗಳ ಪ್ರಮುಖ ಭಾಗ. ಎಲ್ಲಾ ಜೀವಿಗಳ ಜೀವಕೋಶಗಳ ರಚನೆ ಮತ್ತು ಕಾರ್ಯನಿರ್ವಹಣೆಗೆ ಪ್ರೋಟೀನ್‌ಗಳು ಸಹಾಯ ಮಾಡುತ್ತವೆ. ಈ ಅಂಶಗಳಿಲ್ಲದೆ ನಾವು ತಿಳಿದಿರುವಂತಹ ಜೀವ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇಲ್ಲ.

ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್

ವಿಜ್ಞಾನಿಗಳು ‘ಕೆಮಿಕಲ್ ಗೋಲ್ಡಿಲಾಕ್ಸ್ ಜೋನ್’ (chemical Goldilocks zone) ಎಂಬ ಒಂದು ಸೂಕ್ಷ್ಮ ವಲಯವನ್ನು ಗುರುತಿಸಿದ್ದಾರೆ. ಅಂದರೆ, ಒಂದು ಗ್ರಹ ತನ್ನ ನಕ್ಷತ್ರದಿಂದ ಸರಿಯಾದ ದೂರದಲ್ಲಿದ್ದು, ಅಲ್ಲಿ ನೀರು ದ್ರವರೂಪದಲ್ಲಿ ಇರುವುದು ಮಾತ್ರವಲ್ಲ, ಆ ಗ್ರಹದ ಒಳಗೆ ಸರಿಯಾದ ರಾಸಾಯನಿಕ ಸಮತೋಲನವೂ ಇರಬೇಕು. ಅದರಲ್ಲೂ, ಒಂದು ಗ್ರಹ ಮೊದಲು ರೂಪುಗೊಳ್ಳುವಾಗ ಇರುವ ಆಮ್ಲಜನಕದ (oxygen) ಪ್ರಮಾಣ ಬಹಳ ಮುಖ್ಯವಾಗುತ್ತದೆ.

ಗ್ರಹ ರಚನೆಯ ಸಮತೋಲನ

ಒಂದು ಎಳೆಯ ಗ್ರಹ ಕರಗಿದ ಸ್ಥಿತಿಯಿಂದ ತಣ್ಣಗಾಗುವಾಗ, ಕಬ್ಬಿಣದಂತಹ ಭಾರವಾದ ಅಂಶಗಳು ಗ್ರಹದ ಕೇಂದ್ರದ ಕಡೆಗೆ ಹೋಗುತ್ತವೆ. ಹಗುರವಾದ ವಸ್ತುಗಳು ಹೊರ ಪದರಗಳನ್ನು ರೂಪಿಸುತ್ತವೆ. ಈ ಸಮಯದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಿದ್ದರೆ, ರಂಜಕವು ಗ್ರಹದ ಆಳದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಸಾರಜನಕವು ವಾತಾವರಣಕ್ಕೆ ಸೇರಿ ಬಾಹ್ಯಾಕಾಶಕ್ಕೆ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಆಮ್ಲಜನಕದ ಪ್ರಮಾಣ ಕಡಿಮೆಯಿದ್ದರೆ, ರಂಜಕವು ಭಾರವಾದ ಲೋಹಗಳ ಜೊತೆ ಗ್ರಹದ ಕೇಂದ್ರಕ್ಕೆ ಸೇರಿಹೋಗುತ್ತದೆ. ಎರಡೂ ಸಂದರ್ಭಗಳಲ್ಲಿ, ಜೀವಕ್ಕೆ ಬೇಕಾದ ಈ ಅಂಶಗಳು ಗ್ರಹದ ಮೇಲ್ಮೈಯಲ್ಲಿ ಲಭ್ಯವಿರುವುದಿಲ್ಲ.

ವಾಸಯೋಗ್ಯ ಗ್ರಹಗಳು ವಿರಳ

ಕಂಪ್ಯೂಟರ್ ಮಾದರಿಗಳನ್ನು ಬಳಸಿ ಸಂಶೋಧಕರು ಒಂದು ವಿಷಯವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ, ರಂಜಕ ಮತ್ತು ಸಾರಜನಕ ಎರಡೂ ಗ್ರಹದ ಹೊರ ಪದರಗಳಲ್ಲಿ ಲಭ್ಯವಾಗಲು ಬೇಕಾದ ಪರಿಸ್ಥಿತಿಗಳು ಬಹಳ ವಿರಳ. ನಮ್ಮ ಭೂಮಿ ಈ ಅಪರೂಪದ ರಾಸಾಯನಿಕ ಸಮತೋಲನವನ್ನು ಹೊಂದಿದೆ. ಇದರರ್ಥ, ನಿಜವಾಗಿಯೂ ವಾಸಯೋಗ್ಯ ಗ್ರಹಗಳು ನಾವು ಅಂದುಕೊಂಡಿದ್ದಕ್ಕಿಂತ ಬಹಳ ಕಡಿಮೆ ಇರಬಹುದು.

ಅನ್ವೇಷಣೆಗೆ ಹೊಸ ದಾರಿ

ಈ ಸಂಶೋಧನೆಗಳು ನಮ್ಮ ಬಾಹ್ಯಾಕಾಶ ಅನ್ವೇಷಣೆಯ ಮೇಲೂ ಪರಿಣಾಮ ಬೀರಬಹುದು. ಆಮ್ಲಜನಕ ಮತ್ತು ನೀರು ಸಮೃದ್ಧವಾಗಿರುವ ಗ್ರಹದಲ್ಲಿ ರಂಜಕ ಇಲ್ಲದಿದ್ದರೆ, ಅಲ್ಲಿ ಕೃಷಿ ಮಾಡಲು ಅಥವಾ ವಸಾಹತು ಸ್ಥಾಪಿಸಲು ಸಾಧ್ಯವಾಗದೇ ಇರಬಹುದು. ನಮ್ಮ ಸೌರವ್ಯೂಹದಲ್ಲೇ ಇರುವ ಮಂಗಳ ಗ್ರಹದಲ್ಲಿ ಸಾಕಷ್ಟು ರಂಜಕವಿದೆ, ಆದರೆ ಮೇಲ್ಮೈಯಲ್ಲಿ ಸಾಕಷ್ಟು ಸಾರಜನಕ ಇಲ್ಲ. ಜೊತೆಗೆ, ಅದರ ಮಣ್ಣಿನಲ್ಲಿ ಹಾನಿಕಾರಕ ಲವಣಗಳಿವೆ. ಹೀಗಾಗಿ, ಇಂದಿನ ಸ್ಥಿತಿಯಲ್ಲಿ ಅಲ್ಲಿ ಜೀವ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.

ಭವಿಷ್ಯದಲ್ಲಿ, ವಿಜ್ಞಾನಿಗಳು ದೂರದ ಗ್ರಹಗಳ ರಾಸಾಯನಿಕ ಸಂಯೋಜನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಬಹುದು. ಗ್ರಹಗಳು ಮತ್ತು ನಕ್ಷತ್ರಗಳು ಒಂದೇ ರೀತಿಯ ವಸ್ತುಗಳಿಂದ ರೂಪುಗೊಳ್ಳುವುದರಿಂದ, ಅವು ಸುತ್ತುವ ನಕ್ಷತ್ರಗಳನ್ನು ಅಧ್ಯಯನ ಮಾಡುವುದರಿಂದ ಸುಳಿವು ಸಿಗಬಹುದು. ನಮ್ಮ ಸೂರ್ಯನಂತಹ ನಕ್ಷತ್ರಗಳಿರುವ ವ್ಯವಸ್ಥೆಗಳಲ್ಲಿ ಬೇರೆಲ್ಲೂ ಜೀವವನ್ನು ಹುಡುಕಲು ಉತ್ತಮ ಅವಕಾಶವಿರಬಹುದು.

ಮೂಲ: ಡೈಲಿ ಮೇಲ್ – ಸೈನ್ಸ್ & ಟೆಕ್ 

YouTube video player



Source link

Leave a Reply

Your email address will not be published. Required fields are marked *