ಧರ್ಮ-ಜಾತಿ ಭೇದಗಳನ್ನು ಮೀರಿ ಮಾನವೀಯತೆ ಗೆಲುವು ಸಾಧಿಸಿದ ಈ ಅಪರೂಪದ ಘಟನೆಗೆ ಬೆಳಗಾವಿ ಜಿಲ್ಲೆಯ ಬಸ್ತವಾಡ ಗ್ರಾಮ ಸಾಕ್ಷಿಯಾಗಿದೆ. ಮುಸ್ಲಿಂ ದಂಪತಿಯಾದ ಮೆಹಬೂಬ್ ನಾಯಿಕವಾಡಿ ಹಾಗೂ ನೂರ್ಜಾನ್ ತಾವು ಸಾಕಿ ಸಲಹಿದ (ದತ್ತು ಪುತ್ರ) ಹಿಂದು ಯುವಕನಿಗೆ ಹಿಂದು ಸಂಪ್ರದಾಯದಂತೆ ಮದುವೆ ಮಾಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ದತ್ತುಪುತ್ರನಿಗೆ ಹಿಂದು ಸಂಪ್ರದಾಯದಂತೆ ಮುಸ್ಲಿಂ ದಂಪತಿ ಮದುವೆ ಮಾಡಿರುವುದು ಸದ್ಯಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
20 ವರ್ಷಗಳ ಹಿಂದೆ ತಂದೆ-ತಾಯಿ ಕಳಕೊಂಡು ಅನಾಥ ಮಕ್ಕಳು: ಅದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ಸೋಮಶೇಖರ್ ಪೂಜಾರ್ ಮತ್ತು ವಸಂತ ಪೂಜಾರ್ ಎಂಬ ಇಬ್ಬರು ಸಹೋದರರು ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡರು. ಆಗ ಸೋಮಶೇಖರ್ಗೆ ನಾಲ್ಕು ವರ್ಷ, ವಸಂತಕ್ಕೆ ಎರಡು ವರ್ಷ ವಯಸ್ಸಾಗಿತ್ತು. ತಂದೆ-ತಾಯಿ ಸಾವಿನ ಬಳಿಕ ಕುಟುಂಬಸ್ಥರು ನೋಡಿಕೊಳ್ಳದೆ ಬಿಟ್ಟರೆ ಸಂಕಷ್ಟ ಎದುರಾಗಿತ್ತು.
ಹಿಂದು ಸಂಪ್ರದಾಯದಂತೆಯೇ ಮಕ್ಕಳ ಬೆಳೆಸಿದ್ದ ಮುಸ್ಲಿಂ ದಂಪತಿ: ಆ ಸಂದರ್ಭದಲ್ಲಿ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ಮೆಹಬೂಬ್ ಮತ್ತು ನೂರ್ಜಾನ್ ದಂಪತಿ ಮುಂದೆ ಬಂದು ತಮ್ಮ ಐವರು ಮಕ್ಕಳ ಜೊತೆಗೆ ಈ ಇಬ್ಬರು ಮಕ್ಕಳನ್ನೂ ದತ್ತು ಪಡೆದಿದ್ದರು. ಧರ್ಮ ಅವರು ಬೇರೆ ಮಕ್ಕಳನ್ನು ಹಿಂದು ಸಂಪ್ರದಾಯದಂತೆ ಬೆಳೆಸಿದ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಈಗ ದೊಡ್ಡವನಾದ ಸೋಮಶೇಖರ್ ಪೂಜಾರ್ಗೆ ಹಿಂದು ಸಂಪ್ರದಾಯದಂತೆ ಮದುವೆ ನೆರವೇರಿಸಲಾಯಿತು. ಮದುವೆ ಸಂದರ್ಭದಲ್ಲಿ ಮೆಹಬೂಬ್ ದಂಪತಿ ತಾವೇ ತಂದೆ ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಜಾತಿ-ಧರ್ಮದ ಹೆಸರಿನಲ್ಲಿ ಗಲಾಟೆಗಳು ನಡೆಯುತ್ತಿರುವ ಪ್ರಸ್ತುತ ಸನ್ನಿವೇಶ ಹಾಗೂ ಸಮಾಜದಲ್ಲಿ, ಮುಸ್ಲಿಂ ದಂಪತಿ ತೋರಿದ ಮಾನವೀಯತೆ ಮತ್ತು ಭಾವೈಕ್ಯತೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ತವಾಡ ಗ್ರಾಮದಲ್ಲಿ ನಡೆದ ಈ ವಿದ್ಯಮಾನ ಸಾಮಾಜಿಕ ಸೌಹಾರ್ದತೆಗೆ ಮಾದರಿಯಾಗಿದೆ.




