
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ಮರುಚಾಲನೆ ನೀಡಲು ಮತ್ತು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು: ಅನಿವಾರ್ಯ ಕಾರಣಗಳಿಂದಾಗಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ತಕ್ಷಣ ಮರುಚಾಲನೆ ನೀಡಬೇಕು, ವಿಶೇಷವಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಯೋಜನೆಯ ಸಂಬಂಧ ಕೆಲ ಪ್ರಾಥಮಿಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದರೂ, ವಿವಿಧ ಕಾರಣಗಳಿಂದ ಯೋಜನೆಯ ಅನುಷ್ಠಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ ಅಥವಾ ಸಂಪೂರ್ಣವಾಗಿ ಸ್ಥಗಿತಗೊಂಡ ಸ್ಥಿತಿಯಲ್ಲಿದೆ. ಮೈಸೂರು (ಬೆಳಗೊಳ)–ಕುಶಾಲನಗರ ನಡುವಿನ 89 ಕಿಲೋಮೀಟರ್ ಉದ್ದದ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ, ಮುಂದಿನ ಹಂತದ ಕಾರ್ಯಗಳು ಪ್ರಾರಂಭವಾಗದೇ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಈ ಮಹತ್ವದ ಯೋಜನೆಗೆ ಪುನರುಜ್ಜೀವನ ನೀಡುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಗೆ ರೈಲು ಸಂಪರ್ಕದ ಕೊರತೆಯಿಂದ ಆರ್ಥಿಕ ಹೊಡೆತ
ಕೊಡಗು ಜಿಲ್ಲೆಗೆ ಸಮರ್ಪಕ ರೈಲು ಸಂಪರ್ಕವಿಲ್ಲದೆ ಇರುವುದು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಆಧಾರಿತ ಆರ್ಥಿಕತೆಗೆ ಭಾರೀ ಹೊಡೆತ ನೀಡುತ್ತಿದೆ ಎಂದು ಸಂಸದ ಯದುವೀರ್ ಅವರು ಸಚಿವರ ಗಮನಕ್ಕೆ ತಂದಿದ್ದಾರೆ. ಸದ್ಯ ಕೊಡಗಿನ ಬೆಳೆಗಾರರು ಮತ್ತು ವ್ಯಾಪಾರಿಗಳು ಸಂಪೂರ್ಣವಾಗಿ ಈಗಾಗಲೇ ಸ್ಯಾಚುರೇಟೆಡ್ ಆಗಿರುವ ರಸ್ತೆ ಸಂಪರ್ಕದ ಮೇಲೆಯೇ ಅವಲಂಬಿತರಾಗಿದ್ದಾರೆ, ಇದರಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಜೊತೆಗೆ ಸರಕು ಸಾಗಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೂ ಅಡೆತಡೆಯಾಗುತ್ತಿದೆ.
ಮೈಸೂರು–ಕುಶಾಲನಗರ ರೈಲು ಯೋಜನೆ ಅನುಷ್ಠಾನಗೊಂಡಲ್ಲಿ, ಕೊಡಗು ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಹೇರಳ ಅವಕಾಶಗಳು ಸೃಷ್ಟಿಯಾಗಲಿದ್ದು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪೂರೈಕೆ ಸರಪಳಿಗಳು ಬಲವಾಗುತ್ತವೆ. ಜೊತೆಗೆ ಕೊಡಗು ಜಿಲ್ಲೆಯನ್ನು ಮೈಸೂರು ಹಾಗೂ ಬೆಂಗಳೂರು ಬೆಳವಣಿಗೆಯ ಕಾರಿಡಾರ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂಯೋಜಿಸಲು ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.
ಹೈಸ್ಪೀಡ್ ರೈಲು ಯೋಜನೆಗೆ ಮೈಸೂರು ಸೇರಿಸಲು ಒತ್ತಾಯ
ಇದೇ ವೇಳೆ, ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಚೆನ್ನೈ–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಯಲ್ಲಿ ಮೈಸೂರನ್ನು ಕೈಬಿಡಲಾಗಿದೆ ಎಂಬುದರ ಬಗ್ಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ರಾಜ್ಯದ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪ್ರವಾಸಿ ನಗರವಾಗಿದ್ದು, ಇಂತಹ ಮಹತ್ವದ ಯೋಜನೆಯಿಂದ ಹೊರಗಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ರೈಲ್ವೆ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ಚೆನ್ನೈ–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗೆ ಮೈಸೂರನ್ನು ಸೇರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮನವಿ ಮಾಡಿದ್ದಾರೆ. ಇದರಿಂದ ಮೈಸೂರು ಭಾಗದ ಸಮಗ್ರ ಅಭಿವೃದ್ಧಿ, ಆರ್ಥಿಕ ಚಟುವಟಿಕೆಗಳ ವಿಸ್ತರಣೆ ಮತ್ತು ಜನರ ಸಂಚಾರ ಸುಗಮತೆಗೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.