ಮಂಡ್ಯ, ಫೆ.12: ರಾಜ್ಯಾದ್ಯಂತ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಮೂರು ಕಿಲೋಮೀಟರ್ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಯಿತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಗೆ ತೇಪೆ ಹಾಕುವ ಕೆಲಸವನ್ನು ಮಾಡಲಾಗಿದೆ. ಆದರೆ, ದುರಸ್ತಿ ಕಾರ್ಯ ಮುಗಿದ ಮೂರೇ ತಿಂಗಳಲ್ಲಿ ಮತ್ತೆ ಬೃಹತ್ ಗುಂಡಿಗಳು ಕಾಣಿಸಿಕೊಂಡಿರುವುದು ಸ್ಥಳೀಯರು ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಒಮ್ಮೆ ಡಾಂಬರ್ ಕಿತ್ತು ಹೋದ ನಂತರ, ಅದನ್ನು ಸರಿಪಡಿಸಲು ಮುಂದಾದರೂ, ಕೇವಲ ಹತ್ತು ದಿನಗಳಲ್ಲೇ ಮತ್ತೆ ಕಿತ್ತು ಬರುತ್ತದೆ. ಇದು “ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತೆ ಕಾಂಟ್ರಾಕ್ಟರ್ಗಳ ಜೇಬು ತುಂಬಿಸುವ ಕೆಲಸವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆಗಳನ್ನು ಸುರಕ್ಷಿತವಾಗಿ ಮಾಡುವುದಕ್ಕೆ ಕೋಟ್ಯಂತರ ರೂಪಾಯಿಗಳನ್ನು ನೀಡುತ್ತಿರಬೇಕಾದರೆ ಇಂತಹ ಕಳಪೆ ಕೆಲಸ ಮಾಡಲಾಗುತ್ತಿದೆ. ಈ ರಸ್ತೆ ಕೇವಲ ಒಂದು ಸ್ಥಳದಲ್ಲಿ ಹಾಳಾಗಿಲ್ಲ. ಮೂರು ಕಿಲೋಮೀಟರ್ ಸಾಕಷ್ಟು ಕಡೆ ಈ ರೀತಿಯ ಗುಂಡಿಗಳು ಬಿದ್ದಿವೆ. ಈ ರಸ್ತೆ ಮಂಡ್ಯ ಮತ್ತು ಪಾಂಡವಪುರ ನಡುವಿನ ಪ್ರಮುಖ ಸಂಪರ್ಕ ರಸ್ತೆ, ನಿತ್ಯ ಸಾವಿರಾರು ವಾಹನಗಳು ನಡೆಯುತ್ತವೆ. ಗುಂಡಿಗಳಿಂದ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಸಡನ್ ಆಗಿ ಗುಂಡಿಗಳು ಕಾಣಿಸುವುದರಿಂದ ನಿಯಂತ್ರಣ ಕಳೆದುಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಮೂರ್ನಾಲ್ಕು ಜನಕ್ಕೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ