IPL matches in Bengaluru ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆ ಬಗ್ಗೆ ಹೈವೋಲ್ಟೇಜ್ ಸಭೆ! | Ipl 2026 In Bengaluru Hm Parameshwara Chairs High Voltage Meeting On Chinnaswamy Stadium Matches

IPL matches in Bengaluru ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆ ಬಗ್ಗೆ ಹೈವೋಲ್ಟೇಜ್ ಸಭೆ! | Ipl 2026 In Bengaluru Hm Parameshwara Chairs High Voltage Meeting On Chinnaswamy Stadium Matches


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸುರಕ್ಷತಾ ಕ್ರಮಗಳು ಮತ್ತು ಸಂಭಾವ್ಯ ಕಾನೂನು ಸವಾಲುಗಳ ಬಗ್ಗೆ ಚರ್ಚೆ. ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ?

ಬೆಂಗಳೂರು ಫೆ.12: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ವಿಧಾನಸೌಧದತ್ತ ನೆಟ್ಟಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಆಯೋಜಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ವಿಧಾನಸೌಧದ ಕೊಠಡಿ 313 ರಲ್ಲಿ ಹೈವೋಲ್ಟೇಜ್ ಸಭೆ

ವಿಧಾನಸೌಧದ ಸಮಿತಿ ಕೊಠಡಿ 313 ರಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಗೃಹ ಸಚಿವರ ಜೊತೆಗೆ ರಾಜ್ಯದ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್ ಹಾಜರಿದ್ದಾರೆ. ಇನ್ನು ಕ್ರಿಕೆಟ್ ಮಂಡಳಿ ಪರವಾಗಿ ಆರ್‌ಸಿಬಿ ಸಿಇಓ ರಾಜೇಶ್ ಮೇನನ್ ಮತ್ತು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಭಾಗವಹಿಸಿ ಪಂದ್ಯ ಆಯೋಜನೆಗೆ ಇರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಸುರಕ್ಷತಾ ಕ್ರಮಗಳ ವರದಿ ಮಂಡನೆ

ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕೆಎಸ್‌ಸಿಎ ವತಿಯಿಂದ ಮಾಹಿತಿ ಸಲ್ಲಿಕೆಯಾಗಿದೆ. ಅಧಿಕಾರಿಗಳ ಸಮಿತಿ ಸಿದ್ಧಪಡಿಸಿದ ವರದಿಯನ್ನೂ ಸಹ ಗೃಹ ಸಚಿವರ ಮುಂದೆ ಮಂಡಿಸಲಾಗಿದ್ದು, ಈ ವರದಿಯ ಅಂಶಗಳ ಬಗ್ಗೆ ಕೆಎಸ್‌ಸಿಎ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೈಕಲ್ ಡಿ ಕುನ್ಹಾ ನೇತೃತ್ವದ ವಿಚಾರಣಾ ಆಯೋಗದ ಶಿಫಾರಸುಗಳನ್ನು ಎಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂಬ ಬಗ್ಗೆಯೂ ಸಚಿವ ಪರಮೇಶ್ವರ್ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾದರೆ ಏನು ಮಾಡಬೇಕು?

ಪಂದ್ಯ ಆಯೋಜನೆಗೆ ಸರ್ಕಾರದ ಮಟ್ಟದಲ್ಲಿ ಸಹಮತವಿದ್ದರೂ, ಗೃಹ ಸಚಿವ ಪರಮೇಶ್ವರ್ ಅವರು ಒಂದು ಪ್ರಮುಖ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರ್ಕಾರ ಪಂದ್ಯಕ್ಕೆ ಅನುಮತಿ ನೀಡಿದರೆ, ಆ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗುವ ಸಾಧ್ಯತೆಯಿದೆ. ಪಿಐಎಲ್ ಸಲ್ಲಿಕೆಯಾದರೆ ಸರ್ಕಾರಕ್ಕೆ ಕಾನೂನು ಸಂಕಷ್ಟ ಎದುರಾಗಬಹುದು ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಹೀಗಾಗಿ ಯಾವುದೇ ಕಾನೂನು ಸಮಸ್ಯೆ ಆಗದ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲು ಸಮಾಲೋಚನೆ ನಡೆಸಲಾಗುತ್ತಿದೆ.

ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

ಇಂದಿನ ಸಭೆಯಲ್ಲಿ ಸಂಗ್ರಹಿಸಲಾದ ಎಲ್ಲಾ ಮಾಹಿತಿಗಳನ್ನು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಲ್ಲಿಸಲಾಗುತ್ತದೆ. ಪಂದ್ಯ ಆಯೋಜನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ಬಳಿಕವೇ ಅಂತಿಮ ನಿರ್ಧಾರ ಹೊರಬೀಳಲಿದೆ. ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಇಂದು ಸಂಜೆ ಸಂಪುಟ ಸಭೆಯ ಫಲಿತಾಂಶದ ಮೇಲೆ ನಿಂತಿದೆ.

YouTube video player



Source link

Leave a Reply

Your email address will not be published. Required fields are marked *