
ಹಾವೇರಿ ಜಿಲ್ಲೆಯ ಬಸನಕಟ್ಟಿ ಗ್ರಾಮದಲ್ಲಿ, ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದ ಹನುಮವ್ವ ಪಾಟೀಲ್ ಎಂಬ ವಯೋವೃದ್ಧ ರೈತ ಮಹಿಳೆಯ ಲಕ್ಷಾಂತರ ಮೌಲ್ಯದ ರೇಷ್ಮೆ ಹುಳುಗಳಿಗೆ ದುಷ್ಕರ್ಮಿಗಳು ವಿಷವಿಕ್ಕಿದ್ದಾರೆ. ಗೂಡು ಕಟ್ಟುವ ಹಂತದಲ್ಲಿದ್ದ ಹುಳುಗಳು ವಿಷಪೂರಿತ ಸೊಪ್ಪು ತಿಂದು ಸಾವನ್ನಪ್ಪಿದೆ.
ಹಾವೇರಿ ಜಿಲ್ಲೆಯ ಬಸನಕಟ್ಟಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ರೇಷ್ಮೆ ಸಾಕಾಣಿಕೆಯಲ್ಲಿ ತೊಡಗಿದ್ದ ವಯೋವೃದ್ಧೆ ರೈತ ಮಹಿಳೆಯ ಬದುಕಿಗೆ ದುಷ್ಕರ್ಮಿಗಳು ಕೊಳ್ಳಿ ಇಟ್ಟಿದ್ದಾರೆ. ಹಗಲು-ರಾತ್ರಿ ಎನ್ನದೆ ನಿದ್ದೆಕೆಟ್ಟು ಬೆವರು ಸುರಿಸಿ ಬೆಳೆಸಿದ್ದ ಲಕ್ಷಾಂತರ ರೇಷ್ಮೆ ಹುಳುಗಳಿಗೆ, ರಾತ್ರೋರಾತ್ರಿ ವಿಷ ಸಿಂಪಡಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗೂಡು ಕಟ್ಟುವ ಹಂತದಲ್ಲೇ ವಿಷದ ದಾಳಿ
ಬಸನಕಟ್ಟಿ ಗ್ರಾಮದ ಹನುಮವ್ವ ಪಾಟೀಲ್ ಮತ್ತು ಅವರ ಪುತ್ರರು ಹಲವು ವರ್ಷಗಳಿಂದ ರೇಷ್ಮೆ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ರೇಷ್ಮೆ ಹುಳುಗಳು ಗೂಡು ಕಟ್ಟಲು ಆರಂಭಿಸುವ ಹಂತಕ್ಕೆ ಬಂದಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಕೋಶಗಳು ಸಿದ್ಧವಾಗಿ, ₹3 ರಿಂದ ₹5 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ.
ಆದರೆ ಎರಡು ದಿನಗಳ ಹಿಂದೆ, ದುಷ್ಕರ್ಮಿಗಳು ರಾತ್ರೋರಾತ್ರಿ ರೇಷ್ಮೆ ಹುಳುಗಳು ತಿನ್ನುವ ಮಲ್ಬೆರಿ (ಸೊಪ್ಪು) ಬೆಳೆ ಮೇಲೆ ವಿಷ ಸಿಂಪಡಿಸಿ ಪರಾರಿಯಾಗಿದ್ದಾರೆ. ಈ ವಿಷಯವನ್ನು ಅರಿಯದ ಹುಳುಗಳು ವಿಷ ಅಂಟಿದ ಸೊಪ್ಪನ್ನು ಸೇವಿಸಿದ ಪರಿಣಾಮ, ಲಕ್ಷಾಂತರ ರೇಷ್ಮೆ ಹುಳುಗಳು ಒಂದೊಂದಾಗಿ ಸಾವನ್ನಪ್ಪಿವೆ.
ಒದ್ದಾಡಿ ಒದ್ದಾಡಿ ಸತ್ತ ರೇಷ್ಮೆ ಹುಳುಗಳು
ವಿಷದ ಪರಿಣಾಮವಾಗಿ ರೇಷ್ಮೆ ಹುಳುಗಳು ಒದ್ದಾಡುತ್ತಾ, ತೀವ್ರವಾಗಿ ನರಳಿ, ಕೆಲವೇ ಗಂಟೆಗಳಲ್ಲಿ ಸತ್ತು ಬಿದ್ದ ದೃಶ್ಯಗಳು ಹೃದಯವಿದ್ರಾವಕವಾಗಿವೆ. ವರ್ಷಗಟ್ಟಲೇ ಬೆವರು ಸುರಿಸಿ ಸಾಕಿದ್ದ ಹುಳುಗಳು ಕಣ್ಣಮುಂದೆಯೇ ಸಾಯುತ್ತಿರುವುದನ್ನು ಕಂಡು, ವಯೋವೃದ್ಧೆ ಹನುಮವ್ವ ಪಾಟೀಲ್ ಕಣ್ಣೀರಿಡುತ್ತಾ ಪರದಾಡಿದ್ದಾರೆ.
ಬಡ ರೈತ ಕುಟುಂಬ ಕಂಗಾಲು
ಈ ದುಷ್ಕರ್ಮಿಗಳ ಕೃತ್ಯದಿಂದಾಗಿ, ಬಡ ರೈತ ಕುಟುಂಬ ಸಂಪೂರ್ಣವಾಗಿ ಕಂಗಾಲಾಗಿದೆ. ಸಾಲ ಮಾಡಿ, ನಿದ್ದೆಗೆಟ್ಟು ಪರಿಶ್ರಮಪಟ್ಟು ಸಾಕಿದ್ದ ರೇಷ್ಮೆ ಹುಳುಗಳು ನಾಶವಾದ ಕಾರಣ, ಕುಟುಂಬದ ಆದಾಯದ ಮೂಲವೇ ಮುಚ್ಚಿದಂತಾಗಿದೆ. ಮುಂದಿನ ದಿನಗಳಲ್ಲಿ ಬದುಕು ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲೇ ಕುಟುಂಬ ಕಣ್ಣೀರಿಡುತ್ತಿದೆ.
ಸರ್ಕಾರದ ನೆರವಿಗೆ ಅಂಗಲಾಚುತ್ತಿರುವ ಕುಟುಂಬ
ಈ ದುರ್ಘಟನೆಯ ಬಳಿಕ, ಹನುಮವ್ವ ಪಾಟೀಲ್ ಅವರ ಕುಟುಂಬ ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದು ಮನವಿ ಮಾಡುತ್ತಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೇಷ್ಮೆ ಸಾಕಾಣಿಕೆ ಮಾಡುವ ರೈತರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.