
ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯು ಅಲ್ಲಲ್ಲಿ ಹಿಂಸಾಚಾರದ ನಡುವೆ ಮುಕ್ತಾಯಗೊಂಡಿದೆ. ಜಮಾತ್ ಎ ಇಸ್ಲಾಮಿ ಮತ್ತು ಬಿಎನ್ಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಮತದಾರರಿಗೆ 15,000 ಟಾಕಾ ಮತ್ತು ಮೋಕ್ಷದ ಆಮಿಷವೊಡ್ಡಿದ ಘಟನೆಯೂ ವರದಿಯಾಗಿದೆ.
ಢಾಕಾ: ಬಾಂಗ್ಲಾದೇಶದಲ್ಲಿ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಗುರುವಾರ ಅಲ್ಲಲ್ಲಿ ಹಿಂಸಾಚಾರದ ಮಧ್ಯೆಯೇ ಸಂಪನ್ನಗೊಂಡಿದೆ. ಗುರುವಾರ ಸಂಜೆಯೇ ಮತ ಎಣಿಕೆ ಆರಂಭವಾಗಿದ್ದು, ಶುಕ್ರವಾರ ಬೆಳಗ್ಗೆ ಫಲಿತಾಂಶ ಪ್ರಕಟಣೆ ಸಾಧ್ಯತೆ ಇದೆ.
ಜಮಾತ್ ಎ ಇಸ್ಲಾಮಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್ಪಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಯಾವ ಪಕ್ಷ ಗೆಲ್ಲಲಿದೆ ಎಂಬುದು ಕುತೂಹಲ ಕೆರಳಿಸಿದೆ. 300 ಸೀಟುಗಳ ಪೈಕಿ 299ಕ್ಕೆ ಮತದಾನ ನಡೆದಿದ್ದು, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ಪ್ರಧಾನಿ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಬಿಎನ್ಪಿಯ ಮುಖ್ಯಸ್ಥ ತಾರೀಖ್ ರೆಹಮಾನ್, ಜಮಾತ್-ಎ-ಇಸ್ಲಾಮಿ ನಾಯಕ ಶಫೀಕುರ್ ರೆಹಮಾನ್ ಮತ ಚಲಾಯಿಸಿದರು.
ಬೆಳಗ್ಗೆ 7.30ರಿಂದ ಆರಂಭವಾದ ಮತದಾನ ಸಂಜೆ 4:30ರ ವರೆಗೆ ನಡೆದಿದ್ದು, 12.7 ಕೋಟಿ ಮತದಾರರಲ್ಲಿ ಶೇ.32ರಷ್ಟು ಮಂದಿ ಮತಪತ್ರದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ ಶೇ.3.58ರಷ್ಟು ಜನ ಮೊದಲ ಬಾರಿ ಮತ ಚಲಾಯಿಸಿದ್ದಾರೆ. ಜತೆಗೆ, ವಿದೇಶದಲ್ಲಿ ವಾಸವಿರುವ 8 ಲಕ್ಷ ಬಾಂಗ್ಲನ್ನರು ಆನ್ಲೈನ್ನಲ್ಲಿ ವೋಟ್ ಹಾಕಿದ್ದಾರೆ. ಉಳಿದಂತೆ ದೇಶದಲ್ಲಿ ಮತಪತ್ರದ ಮೂಲಕ ಮತ ಚಲಾಯಿಸಲಾಗುತ್ತದೆ.
ಅಲ್ಲಲ್ಲಿ ಹಿಂಸೆ:
ಚುನಾವಣೆಯ ದಿನವೂ ಬಾಂಗ್ಲಾದ ಕೆಲ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ. ಗೋಪಾಲ್ಗಂಜ್ನಲ್ಲಿ ಕೈಬಾಂಬ್ ಬಳಸಿ ನಡೆಸಲಾದ ದಾಳಿಯಲ್ಲಿ 3 ಮಂದಿ ಗಾಯಗೊಂಡಿದ್ದಾರೆ. ಇಂತಹದ್ದೇ ಘಟನೆ ಮುನ್ಶಿಗಂಜ್ನಲ್ಲೂ ನಡೆಯಿತು. ಖುಲ್ನಾ ಎಂಬಲ್ಲಿ ಜಮಾತ್ನ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಆದರೆ ಯಾವುದೇ ಘಟನೆಗಳು ಅತಿರೇಕಕ್ಕೆ ಹೋಗದ ಹಿನ್ನೆಲೆಯಲ್ಲಿ ಎಲ್ಲಾ 32,789 ಮತಗಟ್ಟೆಗಳಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು.
ಭದ್ರತೆಗಾಗಿ ಇದೇ ಮೊದಲ ಬಾರಿ 10 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಹಾಗೂ ಭದ್ರತೆಗಾಗಿ ಡ್ರೋನ್, ಬಾಡಿ-ಕ್ಯಾಮೆರಾಗಳನ್ನು ಬಳಸಲಾಗಿದೆ.
‘ದೋಣಿ’ಯಿಲ್ಲದ ಮತಪತ್ರ 30 ವರ್ಷದಲ್ಲಿ ಮೊದಲು
ಬಾಂಗ್ಲಾದಲ್ಲಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿ ಮತಪತ್ರಗಳಿಂದ, ದೇಶದ ಹಳೆಯ ಪಕ್ಷಗಳಲ್ಲಿ ಒಂದಾದ ಶೇಖ್ ಹಸೀನಾ ಅವರ ಅವಾಮಿ ಲೀಗ್ನ ದೋಣಿ ಚಿಹ್ನೆ ಕಾಣೆಯಾಗಿದೆ. ವಿದ್ಯಾರ್ಥಿ ದಂಗೆಯ ಪರಿಣಾಮ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರ ಪಕ್ಷವನ್ನು ನಿರ್ಬಂಧಿಸಿ ನಡೆಯುತ್ತಿರುವ ಪ್ರಥಮ ಚುನಾವಣೆಯಿದು. 1988ರಲ್ಲಿ ಮತ್ತು 1996ರಲ್ಲಷ್ಟೇ ಅವಾಮಿ ಲೀಗ್ ಚುನಾವಣೆಯಿಂದ ದೂರ ಉಳಿದಿತ್ತು. ಅದು ಸ್ವ-ಇಚ್ಛೆಯಿಂದಾಗಿತ್ತಾದರೂ ಈಗ ನಿರ್ಬಂಧದಿಂದಾಗಿ ಭಾಗವಹಿಸಿಲ್ಲ.
ನಮಗೆ ಮತ ಹಾಕಿ, 15,000 ಟಾಕಾ, ಮೋಕ್ಷ ಪಡೆಯಿರಿ: ಜಮಾತ್ ಕರಪತ್ರ
ಢಾಕಾ: ಬಾಂಗ್ಲಾದೇಶ ಚುನಾವಣೆ ಭರಾಟೆ ನಡುವೆಯೇ ಮೂಲಭೂತವಾದಿ ಜಮಾತ್-ಎ-ಇಸ್ಲಾಮಿ ನಾಯಕ ಶಫೀಕುರ್ ರೆಹಮಾನ್, ಹಣಬಲ ಹಾಗೂ ಮತೀಯವಾದ ಪ್ರದರ್ಶಿಸಿದ್ದಾರೆ.
ಜಮಾತ್ ಒಕ್ಕೂಟವು ದೇಶಾದ್ಯಂತ ಕರಪತ್ರ ಹಂಚಿದ್ದು, ಪಕ್ಷಕ್ಕೆ ಮತ ಹಾಕುವ ಮತದಾರರಿಗೆ 15,000 ಟಾಕಾ (ಬಾಂಗ್ಲಾದೇಶಿ ಕರೆನ್ಸಿ) ನೀಡುವ ಭರವಸೆ ನೀಡಿದೆ. ಅಲ್ಲದೆ, ಕುಟುಂಬದ ಎಲ್ಲಾ ಸದಸ್ಯರು ಪಕ್ಷಕ್ಕೆ ಮತ ಹಾಕಿದರೆ, ಅವರ ಮರಣಾನಂತರದ ಜೀವನವು ‘ಪಾಪ ಮುಕ್ತವಾಗಿರುತ್ತದೆ’ ಮತ್ತು ‘ಗಂಭೀರ ಶಿಕ್ಷೆಯಿಂದ ಮೋಕ್ಷ ಪ್ರಾಪ್ತಿ ಆಗುತ್ತದೆ’ ಎಂದು ದಾಖಲೆಯಲ್ಲಿ ಹೇಳಲಾಗಿದೆ.