Headlines

Hampi Utsav 2026: ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ | Hampi Utsav 2026 Cm Siddaramaiah To Inaugurate 3 Day Cultural Extravaganza Today

Hampi Utsav 2026: ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ | Hampi Utsav 2026 Cm Siddaramaiah To Inaugurate 3 Day Cultural Extravaganza Today


ವಿಶ್ವಪರಂಪರೆ ತಾಣ ಹಂಪಿಯು ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದ್ದು, ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಸ್ಮರಿಸಲಿದೆ. ಕಲೆ, ಸಾಹಿತ್ಯ, ಸಂಗೀತದ ಈ ಮಹಾಸಂಗಮದಲ್ಲಿ ಖ್ಯಾತ ತಾರೆಯರ ಮನರಂಜನೆ, ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಮಂಜುನಾಥ ಕೆ.ಎಂ.

ಹೊಸಪೇಟೆ (ಫೆ.13): ಭಾರತದ ಭವ್ಯ ಪರಂಪರೆಯ ಹೆಮ್ಮೆಯ ದ್ಯೋತಕ, ವಿಶ್ವಪರಂಪರೆ ತಾಣ ಹಂಪಿಯ ಪರಿಸರ ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದೆ.

ಕಲೆ, ಸಾಹಿತ್ಯ, ಸಂಗೀತ ಸಂಗಮವಾಗಿದ್ದ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸ್ಮರಿಸಿಕೊಳ್ಳುವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜತನದಿಂದ ಮುಂದುವರಿಸುವ ಉದ್ದೇಶದಿಂದ ಜರುಗುತ್ತಿರುವ ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಫೆ.13ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಸರ್ಕಾರದ ಸಚಿವರುಗಳು, ಶಾಸಕರುಗಳು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಉತ್ಸವದ ಯಶಸ್ವಿಗಾಗಿ ವಿಜಯನಗರ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು, ಹಂಪಿಯ‌ ಪರಿಸರದಲ್ಲೀಗ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ ಮೇಳೈಸಿದೆ.

6 ವೇದಿಕೆಗಳ ನಿರ್ಮಾಣ: ಉತ್ಸವದ ಕಾರ್ಯಕ್ರಮಗಳಿಗಾಗಿ ಆರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯವೇದಿಕೆಗೆ ಹಂಪಿ‌ ಉತ್ಸವದ ರೂವಾರಿ ದಿ.ಎಂ.ಪಿ. ಪ್ರಕಾಶ್ ವೇದಿಕೆ ಎಂದು ಹೆಸರಿಡಲಾಗಿದೆ. ಎದುರು ಬಸವಣ್ಣ ಬಳಿ ಶ್ರೀಕೃಷ್ಣದೇವರಾಯ ವೇದಿಕೆ, ವಿರುಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ವಿರೂಪಾಕ್ಷೇಶ್ವರ ವೇದಿಕೆ, ಸಾಸಿವೆಕಾಳು‌ ಗಣಪ ವೇದಿಕೆ, ಮಹಾನವಮಿ ದಿಬ್ಬದ ಬಳಿ ವಿದ್ಯಾರಣ್ಯ ವೇದಿಕೆ, ಆನೆಲಾಯ ಬಳಿ ಹಕ್ಕಬುಕ್ಕ ವೇದಿಕೆಗಳನ್ನು ನಿರ್ಮಿಸಲಾಗಿದೆ. ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಸಾಹಿತ್ಯ ಗೋಷ್ಠಿಗಳು ನಡೆಯಲಿದ್ದು ಉಳಿದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಉತ್ಸವದ ಹಿನ್ನೆಲೆಯಲ್ಲಿ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ತುಂಗಾ ಆರತಿ, ಬೈಕ್ ರ್‍ಯಾಲಿ ನಡೆದಿದ್ದು, ಗುರುವಾರದಂದು ವಿಜಯನಗರ ವಸಂತ ವೈಭವ, ಹಂಪಿ‌ ಬೈ ಸ್ಕೈಗೆ ಚಾಲನೆ ಸಿಕ್ಕಿದೆ. ಉತ್ಸವದಲ್ಲಿ ಗಾಳಿಪಟ ಪ್ರದರ್ಶನ, ಎತ್ತುಗಳ ಪ್ರದರ್ಶನ, ಆಹಾರಮೇಳ, ಗ್ರಾಮೀಣ ಕ್ರೀಡೆಗಳು, ಬೋಟಿಂಗ್, ಫಲಪುಷ್ಪ ಪ್ರದರ್ಶನ, ಡ್ರೋಣ್ ಪ್ರದರ್ಶನ, ಜಾನಪದ ವಾಹಿನಿ, ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು, ವಿಚಾರಸಂಕಿರಣ, ಯುವಗೋಷ್ಠಿ, ಕವಿಗೋಷ್ಠಿ, ಮಹಿಳಾ ಗೋಷ್ಠಿಗಳು ಜರುಗಲಿವೆ.

120 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್: ಉತ್ಸವಕ್ಕೆ ಬರುವ ವಾಹನಗಳಿಗೆ 120 ಎಕರೆ ಪ್ರದೇಶದಲ್ಲಿ 7 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಒಟ್ಟು 168 ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ ಗಳಲ್ಲಿ ಉಚಿತವಾಗಿ ಆಗಮಿಸಿ ಹಂಪಿ ಉತ್ಸವ ಕಣ್ತುಂಬಿಕೊಳ್ಳಬಹುದಾಗಿದೆ.

ಹೊಸಪೇಟೆಯಿಂದ ಹಂಪಿಗೆ 50 ಬಸ್ ಗಳನ್ನು ಬಿಡಲಾಗಿದೆ.

ಉತ್ಸವದ ಮೊದಲ ದಿನದ ಮುಖ್ಯವೇದಿಕೆಯಲ್ಲಿ ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಚಿತ್ರನಟ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ನಟಿ ರುಕ್ಮಿಣಿ ವಸಂತ್ ಭಾಗವಹಿಸಲಿದ್ದು, ವಿಜಯಪ್ರಕಾಶ್‌ ಮತ್ತು ತಂಡ ಹಾಗೂ ಹರಿಹರನ್ ಮತ್ತು ತಂಡದಿಂದ ಗಾನಸುಧೆ ಕಾರ್ಯಕ್ರಮ ನಡೆಯಲಿದೆ.

ಫೆ.14ರಂದು ಮುಖ್ಯವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಟ ರಾಜ್ ಬಿ.ಶೆಟ್ಟಿ, ಸಪ್ತಮಿಗೌಡ, ಝೈದ್ ಖಾನ್, ಗಿಲ್ಲಿ ಮತ್ತು‌ ಕಾವ್ಯ ಭಾಗವಹಿಸಲಿದ್ದು, ಅರ್ಜುನ್ ಜನ್ಯ ಮತ್ತು ತಂಡ ಹಾಗೂ ನವೀನ್ ಸಜ್ಜು ಮತ್ತು‌ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.15ರಂದು ಇದೇ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ, ನಟಿ ರಚಿತಾರಾಮ್, ಧ್ರುವಸರ್ಜಾ ಪಾಲ್ಗೊಳ್ಳಲಿದ್ದು ರಘು ದೀಕ್ಷಿತ್ ಮತ್ತು ತಂಡ, ಮಂಗಲಿ ಮತ್ತು ತಂಡ, ಮಣಿಕಾಂತ್ ಕದ್ರಿ ಮತ್ತು‌ ತಂಡದಿಂದ‌ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಟಿವಿ‌ ಕಲಾವಿದರಿಂದ‌ ಕಾರ್ಯಕ್ರಮಗಳು ನಡೆಯಲಿವೆ.

ಝಗಮಗಿಸುತಿದೆ ಹಂಪಿ: ಉತ್ಸವ ಹಿನ್ನೆಲೆಯಲ್ಲಿ ಹಂಪಿ‌ ಪರಿಸರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ವೇದಿಕೆಗಳ ಮುಂಭಾಗ ಸೇರಿದಂತೆ ಹಂಪಿಯ ಬೀದಿಬೀದಿಗಳು‌ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. 

YouTube video player



Source link

Leave a Reply

Your email address will not be published. Required fields are marked *