ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದಂತೆ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಅತೀವೇಗದಿಂದ ಬಂದ ಎಕ್ಸ್‌ಯುವಿ ಕಾರು ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ.

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವಾರ ಗ್ರಾಮದ ಸಮೀಪ ಇಂದು ನಸುಕಿನ ಜಾವ ಸುಮಾರು ಬೆಳಗ್ಗೆ 4:50ರ ವೇಳೆಗೆ ಭೀಕರ ಸರಣಿ ರಸ್ತೆ ಅಪಘಾತ ದುರ್ಘಟನೆಯಲ್ಲಿ ಒಂದೇ ಕಾರಿನಲ್ಲಿದ್ದ ಆರು ಯುವಕರು ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮೃತರೆಲ್ಲರೂ ವಿದ್ಯಾರ್ಥಿಗಳಾಗಿದ್ದು ಒಬ್ಬೊಬ್ಬರ ಕುಟುಣಂಬದ್ದು ಒಂದೊಂದು ಕರುಣಾಜನಕ ಕಥೆಯಾಗಿದೆ.

ಮೃತ ಬೈಕ್ ಸವಾರ ಗಗನ್ (26) ಸಫಲ್ ಮಾರುಕಟ್ಟೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು, ದೇವನಾಯಕನಹಳ್ಳಿ (ದೇವನಹಳ್ಳಿ ತಾಲೂಕು) ನಿವಾಸಿಯಾಗಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಇಡೀ ಕುಟುಂಬಕ್ಕೆ ಈತನೇ ಆಧಾರಸ್ತಂಭವಾಗಿತ್ತು. 6 ಜನ ವಿದ್ಯಾರ್ಥಿಗಳ ಮೋಜು ಮಸ್ತಿಗೆ ಬೈಕ್ ಸವಾರ ಗಗನ್ ಬಲಿಯಾದ. ಗಗನ್ ಮಾವ ದೇವರಾಜ್ ಮಾತನಾಡಿ, “ಗಗನ್ ನಮ್ಮ ಮನೆಯ ಆಧಾರ ಸ್ತಂಭ. ಆತನ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ತಂದೆ-ತಾಯಿಗೆ ಒಬ್ಬನೇ ಮಗ. ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಅವನು ಮೃತಪಟ್ಟಿದ್ದಾನೆ” ಎಂದು ಕಣ್ಣೀರಿಟ್ಟಿದ್ದಾರೆ.

ಮೃತ ಯುವಕರಲ್ಲಿ ಒಬ್ಬನಾದ ಅಶ್ವಿನ್ ನಾಯರ್ ಇನ್ನೂ 17 ವರ್ಷ. ಯಲಹಂಕದ ಆರ್‌ವಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ನೈಟ್ ಔಟ್‌ಗೆ ಹೋಗಿದ್ದ ಅಶ್ವಿನ್, ಅಮ್ಮನಿಗೆ ತಿಳಿಸದೇ ಮನೆಯಿಂದ ಹೊರಟಿದ್ದಾನೆ. ಮಗ ಮನೆಯಲ್ಲಿ ಮಲಗಿದ್ದಾನೆ ಎಂದುಕೊಂಡಿದ್ದ ತಾಯಿಗೆ, ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್ ಬಂದು “ನಿಮ್ಮ ಮಗ ಕಾರಿನಲ್ಲಿ ಸ್ನೇಹಿತರ ಜೊತೆಗೆ ಹೋಗಿದ್ದಾನೆ” ಎಂದು ಹೇಳಿದಾಗ ಆತಂಕ ಉಂಟಾಗಿದೆ. ತಾಯಿ ಮಗನಿಗೆ ಕರೆ ಮಾಡಿದಾಗ, ಪೊಲೀಸರು ಫೋನ್ ಎತ್ತಿದ್ದು, ಅಪಘಾತವಾಗಿದೆ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಶ್ವಿನ್ ಕುಟುಂಬಕ್ಕೆ ಈ ಸುದ್ದಿ ಆಘಾತ ತಂದಿದೆ.

ಅಪಘಾತದಲ್ಲಿ ಮೃತಪಟ್ಟ ಮತ್ತೊಬ್ಬ ವಿದ್ಯಾರ್ಥಿ ಅರ್ಹಾನ್ ಶರೀಫ್ ಅವರ ಮನೆ ಫ್ರೇಜರ್ ಟೌನ್ನಲ್ಲಿ ಶೋಕ ಮಡುಗಟ್ಟಿದೆ. 10ನೇ ತರಗತಿಯಲ್ಲಿ ಓದುತ್ತಿದ್ದ ಅರ್ಹಾನ್, ಸೋಮವಾರ ಕುಟುಂಬದೊಂದಿಗೆ ದುಬೈ ಮೂಲಕ ಮೆಕ್ಕಾಗೆ ಉಮ್ರಾ ಯಾತ್ರೆಗೆ ತೆರಳಬೇಕಿತ್ತು. ಇದಕ್ಕಾಗಿ ಟಿಕೆಟ್ ಕೂಡ ಬುಕ್ ಆಗಿತ್ತು. ಅರ್ಹಾನ್ ಮಾವ ಸೈಯ್ಯದ್ ಮಾತನಾಡಿ, “ರಾತ್ರಿ ಯಾರಿಗೂ ಹೇಳದೇ ಸ್ನೇಹಿತರ ಜೊತೆಗೆ ಹೋಗಿದ್ದ. ಬೆಳಗ್ಗೆ ಪೊಲೀಸರ ಕರೆ ಬಂದಾಗಲೇ ವಿಷಯ ಗೊತ್ತಾಯಿತು. ಮಗನ ಕನಸುಗಳೆಲ್ಲ ಮಣ್ಣಾಗಿ ಹೋದವು” ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

ಮೃತ ಯುವಕ ಈತನ್ ಜಾರ್ಜ್ ರಾತ್ರಿ ‘ರೂಮ್‌ನಲ್ಲಿ ಮಲಗ್ತೇನೆ’ ಎಂದು ಹೇಳಿ ಹೊರಟಿದ್ದ. ಬೆಳಗ್ಗೆ ಪೊಲೀಸರಿಂದ ಕರೆ ಬಂದಾಗ, ತಂದೆ “ನಮ್ಮ ಮಗ ಮನೆಯಲ್ಲೇ ಇದ್ದಾನೆ” ಎಂದು ಹೇಳಿದರು. ನಂತರ ರೂಮ್‌ಗೆ ಹೋಗಿ ಬಾಗಿಲು ತಟ್ಟಿದರೂ ತೆಗೆಯದ ಕಾರಣ, ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದಾಗಲೇ ಮಗ ಸಾವನ್ನಪ್ಪಿರುವ ಸುದ್ದಿ ಖಚಿತವಾಗಿದೆ. ಕುಟುಂಬ ಅಲ್ಲೇ ಕುಸಿದು ಹೋಗಿದೆ

ಘಟನೆ ಕುರಿತು ಚಂದ್ರಕಾಂತ್, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಾತನಾಡಿ, “ಸುಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಯಾರ ಗುರುತೂ ಸಿಗದಷ್ಟು ಅಪಘಾತದ ತೀವ್ರತೆ ಇತ್ತು. ಮೃತರೆಲ್ಲ 16 ರಿಂದ 20 ವರ್ಷದ ಯುವಕರು. ಎಕ್ಸ್‌ಯುವಿ ಕಾರು ಮೊದಲು ಬೈಕ್‌ಗೆ, ನಂತರ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಪ್ರಕರಣದ ತನಿಖೆಯನ್ನು ಹೊಸಕೋಟೆ ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಲು ಆದೇಶಿಸಲಾಗಿದೆ. ಕಾರು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ KA 03 NW 0138 ಸಂಖ್ಯೆಯ ಮಹೀಂದ್ರಾ ಎಕ್ಸ್‌ಯುವಿ 700 ಕಾರು ಮೊದಲು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಗನ್ (26) ಬೈಕ್ ಮೇಲಿಂದ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನಂತರ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಆ ಬಳಿಕ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದ ಕ್ಯಾಂಟರ್ ಕೂಡ ಪಲ್ಟಿಯಾಗಿ ಪಕ್ಕದ ರಸ್ತೆಗೆ ಬಿದ್ದಿದ್ದು ಅದರ ಹಿಂಭಾಗದ ಚಕ್ರದ ಭಾಗ ಮಧ್ಯ ರಸ್ತೆಯಲ್ಲಿ ಬಿದ್ದ ಕಾರಣ, ನಂತರ ಬರುತ್ತಿದ್ದ ಬ್ರೀಜಾ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆ. ಈ ರೀತಿ ಒಂದರ ಹಿಂದೆ ಒಂದು ನಡೆದ ಡಿಕ್ಕಿಗಳಿಂದ ಘಟನಾ ಸ್ಥಳವೇ ಭೀಕರ ಅಪಘಾತದ ಸನ್ನಿವೇಶ ಹೇಗಿರಬಹುದೆಂದು ಕಣ್ಣಮುಂದೆ ಕಟ್ಟಿಕೊಟ್ಟಂತೆ ಇದೆ. ಅಪಘಾತದ ತೀವ್ರತೆಗೆ ಎಕ್ಸ್‌ಯುವಿ ಕಾರಿನಲ್ಲಿದ್ದ ಆರು ಮಂದಿ ಯುವಕರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನ ಸ್ಥಿತಿ ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ಸಂಪೂರ್ಣವಾಗಿ ಓಪನ್ ಆಗಿ ಬ್ಲಾಸ್ಟ್ ಆಗಿದೆ.

1.ಅಶ್ವಿನ್ ನಾಯರ್,ತಂದೆ: ಅಜಿತ್ ನಾಯರ್,ವಯಸ್ಸು: 17 ವರ್ಷ,1ನೇ ಪಿಯುಸಿ ವಿದ್ಯಾರ್ಥಿ, ಆರ್‌ವಿ ಪಿಯು ಕಾಲೇಜು, ಯಲಹಂಕ,ವಿಳಾಸ: ಕೊತ್ತನೂರು.

2.ಈತನ್ ಜಾರ್ಜ್,ತಂದೆ: ಜಾನ್ ಜಾರ್ಜ್,ವಯಸ್ಸು: 17 ವರ್ಷ,1ನೇ ಪಿಯುಸಿ ವಿದ್ಯಾರ್ಥಿ, ಆರ್‌ವಿ ಪಿಯು ಕಾಲೇಜು, ಯಲಹಂಕ,ವಿಳಾಸ: ಹುಳಿಮಾವು – ಹೆನ್ನೂರು ರಸ್ತೆ.

3.ಅಹ್ರಾಮ್ ಶರೀಫ್,ತಂದೆ: ನೂರುಲ್ಲಾ ಶರೀಫ್,ವಯಸ್ಸು: 16 ವರ್ಷ,10ನೇ ತರಗತಿ ವಿದ್ಯಾರ್ಥಿ, ಸಿಎಂಆರ್ ಶಾಲೆ,ವಿಳಾಸ: ಎಚ್‌ವಿಆರ್ ಲೇಔಟ್.

4.ಅಯಾನ್ ಅಲಿ,ತಂದೆ: ಅಜ್ಗರ್ ಅಲಿ,ವಯಸ್ಸು: 17 ವರ್ಷ,10ನೇ ತರಗತಿ ವಿದ್ಯಾರ್ಥಿ, ಸಿಎಂಆರ್ ಶಾಲೆ,ವಿಳಾಸ: ಕೊತ್ತನೂರು.

5.ಭರತ್,ತಂದೆ: ಗೋಪಿಯವರು,ವಯಸ್ಸು: 17 ವರ್ಷ,10ನೇ ತರಗತಿ ವಿದ್ಯಾರ್ಥಿ, ಶೋಭಾನ ಮೆಮೋರಿಯಲ್ ಶಾಲೆ,ವಿಳಾಸ: ಫ್ರೇಜರ್ ಟೌನ್.

6.ಫರ್ಹಾನ್,ತಂದೆ: ಫಿರೋಜ್,ವಯಸ್ಸು: 18 ವರ್ಷ,ವಿಳಾಸ: ಕಮ್ಮನಹಳ್ಳಿ.

7.ಗಗನ್,ತಂದೆ: ನಾಗರಾಜಪ್ಪ,ವಯಸ್ಸು: 26 ವರ್ಷ,ವೃತ್ತಿ: ಸಫಲ್ ಮಾರುಕಟ್ಟೆ – ಮೇಲ್ವಿಚಾರಕ,ವಿಳಾಸ: ದೇವನಾಯಕನಹಳ್ಳಿ, ಚೆನ್ನರಾಯಪಟ್ಟಣ ತಾಲೂಕು,(ದ್ವಿಚಕ್ರ ವಾಹನ ಸವಾರ).

ಗಾಯಗೊಂಡ ಕ್ಯಾಂಟರ್ ಚಾಲಕ

ಬಾಲಸುಬ್ರಹ್ಮಣ್ಯಂ,ವಯಸ್ಸು: 32 ವರ್ಷ,ಸಂತೆಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಳೂರು ತಾಲೂಕು.

Source link
ಹೊಸಕೋಟೆ ದುರಂತ: ಮನೆಯಲ್ಲಿ ಹೇಳದೆ ನೈಟ್‌ರೈಡ್ ಹೋದ ಅಪ್ರಾಪ್ತರು! ಮಗನನ್ನು ಕಳೆದುಕೊಂಡ ಅಂಧ ತಾಯಿ! ಕಥೆ ಒಂದೊಂದಲ್ಲ