
ತುಮಕೂರು ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ, ಆಟವಾಡುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿಯ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾಗಿವೆ. ಗಂಭೀರ ಗಾಯಗೊಂಡರೂ ಆಸ್ಪತ್ರೆಗೆ ಸಾಗಿಸದೆ ನಿರ್ಲಕ್ಷ್ಯ ತೋರಿದ ಶಿಕ್ಷಕರು, ತುಂಡಾದ ಬೆರಳುಗಳನ್ನು ಕಸಕ್ಕೆ ಎಸೆದಿದ್ದಾರೆ.
ತುಮಕೂರು: ಮಾನವೀಯತೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತೆ ವರ್ತಿಸಿರುವ ಸರ್ಕಾರಿ ಶಾಲೆಯ ಶಿಕ್ಷಕರ ಅಮಾನವೀಯ ನಡೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತುಮಕೂರು ತಾಲೂಕಿನ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಈ ಘಟನೆ, ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿ ಹಿಡಿದಿದೆ. ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ 1ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ದೇವಿ ತನ್ನ ಎರಡು ಕೈ ಬೆರಳುಗಳನ್ನು ಕಳೆದುಕೊಂಡಿದ್ದರೂ, ಶಾಲೆಯ ಶಿಕ್ಷಕರು ಯಾವುದೇ ಕರುಣೆ ತೋರಿಸದೇ, ಗಂಭೀರ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಶಾಲೆಯ ಶಿಕ್ಷಕರು ಹಾಗೂ ಬಿಇಓ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶಾಲೆಯ ಕಬ್ಬಿಣದ ಬಾಗಿಲು ಅಪಘಾತಕ್ಕೆ ಕಾರಣ
ಸೋಮವಾರ ಮಧ್ಯಾಹ್ನ ಸುಮಾರು 1.40ರ ವೇಳೆಗೆ, ಶಾಲೆಯಲ್ಲಿ ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆ ಬಿಡಲಾಗಿತ್ತು. ಈ ಸಂದರ್ಭ ವಿದ್ಯಾರ್ಥಿನಿ ಚಿನ್ಮಯಿ ದೇವಿ ಶಾಲೆಯ ಕಬ್ಬಿಣದ ಬಾಗಿಲು ಬಳಿ ಕೈ ಇಟ್ಟು ನಿಂತಿದ್ದಾಗ, ಹಿಂದಿನಿಂದ ಯಾರೋ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ. ಬಾಗಿಲು ಹಾಕಿದ ರಭಸಕ್ಕೆ ಚಿನ್ಮಯಿ ದೇವಿಯ ಕೈಯ ಎರಡು ಬೆರಳುಗಳು ಸಂಪೂರ್ಣವಾಗಿ ತುಂಡಾಗಿ ಬಿದ್ದಿವೆ. ಅಪಘಾತದ ತೀವ್ರತೆಯಿಂದ ವಿದ್ಯಾರ್ಥಿನಿಗೆ ಭಾರೀ ರಕ್ತಸ್ರಾವ ಉಂಟಾಗಿತ್ತು.
ರಕ್ತಸ್ರಾವವಾಗುತ್ತಿದ್ದರೂ ಆಸ್ಪತ್ರೆಗೆ ಕರೆದೊಯ್ಯದೇ ಶಿಕ್ಷಕರ ನಿರ್ಲಕ್ಷ್ಯ
ಅಪಘಾತದ ನಂತರವೂ ಶಿಕ್ಷಕರು ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೇ, ಶಾಲೆಯಲ್ಲಿಯೇ ಕೇವಲ ಬ್ಯಾಂಡೇಜ್ ಸುತ್ತಿ, ನೀರು ಹಾಕಿ ಅಲ್ಲೇ ಕುಳ್ಳಿರಿಸಿ ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲೂ ಇನ್ನೂ ಗಂಭೀರ ಸಂಗತಿ ಎಂದರೆ, ತುಂಡಾಗಿ ಬಿದ್ದ ಕೈ ಬೆರಳುಗಳನ್ನು ಚಿಕಿತ್ಸೆಗೆ ಸಂರಕ್ಷಿಸುವ ಬದಲು, ಶಿಕ್ಷಕರು ಅದನ್ನು ಕಸಕ್ಕೆ ಎಸೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದಾಗ ಶಾಲೆಯ ಇತರ ಮಕ್ಕಳು ರಕ್ತದ ದೃಶ್ಯ ನೋಡಿ ಭಯಪಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದೇವೆ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ.
ಪೋಷಕರಿಗೆ ತಡವಾಗಿ ಮಾಹಿತಿ
ಅಪಘಾತದ ಬಗ್ಗೆ ವಿದ್ಯಾರ್ಥಿನಿಯ ಮೂಲಕವೇ ಪೋಷಕರಿಗೆ ಮಾಹಿತಿ ತಿಳಿಯಿತು. ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಚಿನ್ಮಯಿ ದೇವಿಯ ಪೋಷಕರು ಶಾಲೆಗೆ ಬಂದು ಮಗಳ ಸ್ಥಿತಿ ನೋಡಿ ಬೆಚ್ಚಿಬಿದ್ದು, ಕೂಡಲೇ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆಯ ವೈದ್ಯರು, ತುಂಡಾದ ಬೆರಳುಗಳು ಇದ್ದರೆ ಜೋಡಿಸಬಹುದು ಎಂದಿದ್ದಾರೆ. ಈ ವೇಳೆ ಶಿಕ್ಷಕರು ಬೆರಳುಗಳನ್ನು ಕಸಕ್ಕೆ ಎಸೆದ ವಿಚಾರ ತಿಳಿದಿದೆ.
ಶಿಕ್ಷಕರ ಅಸಂಬದ್ಧ ಸಮರ್ಥನೆ
ಶಾಲೆಗೆ ಮರಳಿ ಬಂದ ಪೋಷಕರು, ಬೆರಳುಗಳ ಬಗ್ಗೆ ಪ್ರಶ್ನಿಸಿದಾಗ, ಶಾಲೆಯ ಮಕ್ಕಳು ರಕ್ತ ನೋಡಿ ಭಯಪಡುತ್ತಾರೆ, ಆದ್ದರಿಂದ ಬೆರಳುಗಳನ್ನು ಕಸಕ್ಕೆ ಹಾಕಿದ್ದೇವೆ ಎಂದು ಶಿಕ್ಷಕರು ಹೇಳಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಇಓ ವಿರುದ್ಧವೂ ಗಂಭೀರ ಆರೋಪ
ಈ ಅಮಾನವೀಯ ಘಟನೆ ಬಗ್ಗೆ ತುಮಕೂರು ತಾಲೂಕು ಬಿಇಓಗೆ ಮಾಹಿತಿ ನೀಡಿದರೂ, ಅವರು ಉಡಾಫೆಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಾರ್ವಜನಿಕರು, ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ದೂರು ದಾಖಲಿಸಿದ್ದಾರೆ.
ಯಾರ ವಿರುದ್ಧ ಎಫ್ಐಆರ್?
ಈ ಪ್ರಕರಣಕ್ಕೆ ಸಂಬಂಧಿಸಿ, ಶಾಲೆಯ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ರೇಣುಕಮ್ಮ, ವೆಂಕಟೇಶ್, ಹಾಗೂ ತುಮಕೂರು ತಾಲೂಕು ಬಿಇಓ ಹನುಮಂತಪ್ಪ ಇವರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಕಳೆದ 11ನೇ ತಾರೀಖು ನಡೆದಿದ್ದು, ತಡವಾಗಿ ಇದೀಗ ಬೆಳಕಿಗೆ ಬಂದಿದೆ.
ಅಪಘಾತಕ್ಕೊಳಗಾದ ಬಾಲಕಿ ಚಿನ್ಮಯಿ ದೇವಿ ಹೇಳುವಂತೆ: ಊಟಕ್ಕೆ ಬಿಡುವಾಗ ಲೈನ್ ಮಾಡಿಸಿದ್ದರು. ನಾನು ಬಾಗಿಲ ಬಳಿ ಕೈ ಇಟ್ಟು ನಿಂತಿದ್ದೆ. ಹಿಂದಿನಿಂದ ಯಾರೋ ಬಾಗಿಲು ಹಾಕಿದರು. ಕೈ ನೋವಾಗಿತ್ತು, ರಕ್ತ ಬರುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಅಲ್ಲೇ ಕುಳ್ಳಿರಿಸಿ ಬ್ಯಾಂಡೇಜ್ ಹಾಕಿದರು. ನಂತರ ಅಮ್ಮ, ಅಪ್ಪ, ಮಾಮ ಆಸ್ಪತ್ರೆಗೆ ಕರೆದೊಯ್ದರು ಎಂದಿದ್ದಾರೆ.