ಡಿಎಚ್‌ಓ ಮೋಹನ್ ಮತ್ತು ವೈರಲ್ ಆಗಿರುವ ಪತ್ರಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಬೆಂಗಳೂರು, ಫೆಬ್ರವರಿ 13: ಮಂಡ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅಬಕಾರಿ ಇಲಾಖೆಗೆ ವರ್ಗಾಯಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಬರೆದಿರುವ ಪತ್ರ ವೈರಲ್ ಆಗಿರೋದು ಈಗ ವಿವಾದವಾಗಿ ಮಾರ್ಪಟ್ಟಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ, ಆರೋಗ್ಯ ಇಲಾಖೆ ಡಿಎಚ್‌ಓ ಮೋಹನ್ ಅವರನ್ನು ಅಬಕಾರಿ ಉಪ ಆಯುಕ್ತ ನೇಮಿಸಲು ಶಿಫಾರಸ್ಸು ಮಾಡಿರುವ ಪತ್ರದ ಬಗ್ಗೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಸಿಎಂ ಸ್ಪಷ್ಟನೆಗೆ ಬಿಜೆಪಿ ಪಟ್ಟು
ವೈರಲ್ ಆಗಿರುವ ಮುಖ್ಯಮಂತ್ರಿಗಳದ್ದು ಎನ್ನಲಾದ ಶಿಫಾರಸ್ಸು ಪತ್ರದಲ್ಲಿ ಪತ್ರದ ಸಂಖ್ಯೆಯಾಗಲಿ ಅಥವಾ ದಿನಾಂಕವಾಗಲಿ ನಮೂದಾಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ಸಹಿ ಇರುವುದು ಅನುಮಾನಕ್ಕೆ ಎಡಮಾಡಿಕೊಟ್ಟಿದೆ. ಹೀಗಾಗಿ ವರ್ಗಾವಣೆ ದಂಧೆಯ ಹಿಂದೆ ಕುಟುಂಬದ ವ್ಯಕ್ತಿಯೊಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮಾಡಿದ್ದು, ಸಿಎಂ ಈ ಕೂಡಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ; ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್ ಗೆ ಬಣಗಳ ಸಿದ್ಧತೆ
‘ಸಾರಾಯಿ ಮಾರೋಕೆ ಡಾಕ್ಟರ್ ಯಾಕೆ?’
ಪತ್ರದ ವಿಚಾರವಾಗಿ ಕಾಣಿಸಿಕೊಂಡಿರುವ ಮಾಜಿ ಸಚಿವ ಸುನಿಲ್ ಕುಮಾರ್, ವರ್ಗಾವಣೆ ದಂಧೆಯಲ್ಲಿ ಎಲ್ಲಾ ಇಲಾಖೆಗಳು ಮುಳುಗಿವೆ. ಸರ್ಕಾರದ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ಹಾಕುವುದು ಅತ್ಯಂತ ಅನುಚಿತ. ಇದು ತುಘಲಕ್ ದರ್ಬಾರ್ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಅಭಯ್ ಪಾಟೀಲ್ , ಸಾರಾಯಿ ಮಾರೋಕೆ ಡಾಕ್ಟರ್ ಯಾಕೆ? ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಅರಳು ಮರಳಿದ್ದರೆ, ಸಿಎಂ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.
ಆರೋಗ್ಯ ಸಚಿವರ ಸ್ಪಷ್ಟನೆ
ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದು, ವರ್ಗಾವಣೆ ಪತ್ರ ಅಧಿಕೃತವೋ? ಅಲ್ಲವೋ? ಎಂಬುದು ತಮಗೆ ತಿಳಿದಿಲ್ಲ. ಆದರೆ ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಹೋಗಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಕೇವಲ ಟ್ವೀಟ್ ಮಾಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಚರ್ಚೆಯಾಗಬಾರದು ಎಂಬುದು ಅವರ ಉದ್ದೇಶ ಎಂದು ತಿರುಗೇಟು ನೀಡುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.