
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಚಾಲಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ (ಫೆ.13): ಜಿಲ್ಲೆಯ ಪವಿತ್ರ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಘಾಟ್ ರಸ್ತೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಾರಿಗೆ ಸಂಸ್ಥೆಯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಚಾಲಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಮಹದೇಶ್ವರ ಬೆಟ್ಟದಿಂದ ತಾಳಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದ ಏಳನೇ (7ನೇ) ತಿರುವಿನಲ್ಲಿ ಈ ಅವಘಡ ನಡೆದಿದೆ. ಘಾಟ್ ರಸ್ತೆಯ ತಿರುವುಗಳಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯವಿರುತ್ತದೆ. ಆದರೆ, ಇಂದು ಎದುರು ಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಜಖಂಗೊಂಡಿದ್ದು, ಚಾಲಕರು ಸೀಟಿನ ನಡುವೆ ಸಿಲುಕಿಕೊಂಡಿದ್ದರು ಎನ್ನಲಾಗಿದೆ.
ಗಾಯಾಳುಗಳ ವಿವರ:
ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹನುಮಂತಪ್ಪ ಹಾಗೂ ನಿರ್ವಾಹಕ ವೆಂಕಟೇಶ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇವರಲ್ಲದೆ ಬಸ್‌ನಲ್ಲಿದ್ದ ಪ್ರಯಾಣಿಕರಾದ ರಾಮನಗರ ಮೂಲದ ಚಂದ್ರಶೇಖರ್, ದತ್ತರಾಜು, ಅಭಿಷೇಕ್ ಹಾಗೂ ಸ್ವಾಮಿ ಎಂಬುವವರಿಗೆ ರಕ್ತದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಮತ್ತು ಇತರ ವಾಹನ ಸವಾರರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಗೆ ದಾಖಲು:
ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಹನೂರು ಹಾಗೂ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಹಾಗೂ ನಿರ್ವಾಹಕರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಿರುವುಗಳಲ್ಲಿ ಹೆಚ್ಚಿದ ಆತಂಕ:
ಮಹದೇಶ್ವರ ಬೆಟ್ಟದ ಘಾಟ್ ರಸ್ತೆಯು ಕಡಿದಾದ ತಿರುವುಗಳಿಂದ ಕೂಡಿದ್ದು, ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಏಳನೇ ತಿರುವಿನಲ್ಲಿ ಈ ಹಿಂದೆಯೂ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಚಾಲಕರು ತಿರುವುಗಳಲ್ಲಿ ವೇಗ ಕಡಿಮೆ ಮಾಡದಿರುವುದು ಮತ್ತು ಅಜಾಗರೂಕತೆಯೇ ಇಂತಹ ಘಟನೆಗಳಿಗೆ ಮುಖ್ಯ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಘಟನೆಯಿಂದಾಗಿ ಘಾಟ್ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.