
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ದೇಶಾದ್ಯಂತ ಬಂದ್‌ಗೆ ಕರೆ ನೀಡಿದ ಮರುದಿನವೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರೈತ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ವ್ಯಾಪಾರ ಒಪ್ಪಂದದ ವಿರುದ್ಧ ದೇಶವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವ ಕುರಿತು ಮಾತುಕತೆ
ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ದೇಶಾದ್ಯಂತ ಬಂದ್‌ಗೆ ಕರೆ ನೀಡಿದ ಮರುದಿನವೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರೈತ ನಾಯಕರು ಶುಕ್ರವಾರ ಇಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ವ್ಯಾಪಾರ ಒಪ್ಪಂದದ ವಿರುದ್ಧ ದೇಶವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವ ಕುರಿತು ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.
ದೇಶದ ವಿವಿಧ ಭಾಗಗಳಿಂದ ಬಂದ ರೈತ ನಾಯಕರು
‘ದೇಶದ ವಿವಿಧ ಭಾಗಗಳಿಂದ ಬಂದ ರೈತ ನಾಯಕರು ಸಂಸತ್ ಭವನದ ಕಚೇರಿಯಲ್ಲಿ ರಾಹುಲ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ, ಜೋಳ, ಸೋಯಾಬೀನ್, ಹತ್ತಿ, ಹಣ್ಣುಗಳು ಮತ್ತು ಬೀಜಗಳ ಬೆಳೆಗಾರರಿಗೆ ಉಂಟಾಗಬಹುದಾದ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಪ್ಪಂದವನ್ನು ವಿರೋಧಿಸಲು ಮತ್ತು ಕೃಷಿ ಕಾರ್ಮಿಕರ ಜೀವನೋಪಾಯವನ್ನು ರಕ್ಷಿಸಲು ದೊಡ್ಡ ಪ್ರಮಾಣದ ರಾಷ್ಟ್ರೀಯ ಚಳವಳಿಯ ಅಗತ್ಯವನ್ನು ಚರ್ಚಿಸಿದರು’ ಕಾಂಗ್ರೆಸ್ ತಿಳಿಸಿದೆ.
ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ವಿಡಿಯೋ ಮಾಡಿದ್ದ ರಾಹುಲ್
ಗುರುವಾರವಷ್ಟೇ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ, ‘ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಿ ಅಥವಾ ಹಕ್ಕುಚ್ಯುತಿ ಮಂಡಿಸಲಿ, ನಾನು ರೈತರ ಪರವಾಗಿ ಹೋರಾಡುತ್ತೇನೆ. ರೈತರ ಜೀವನೋಪಾಯ ಕಸಿದುಕೊಳ್ಳುವ ಅಥವಾ ದೇಶದ ಆಹಾರ ಭದ್ರತೆಯನ್ನು ದುರ್ಬಲಗೊಳಿಸುವ ಯಾವುದೇ ಒಪ್ಪಂದವು ರೈತ ವಿರೋಧಿಯಾಗಿದೆ. ಮೋದಿ ಸರ್ಕಾರವು ರೈತರ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳಲು ನಾವು ಬಿಡುವುದಿಲ್ಲ’ ಎಂದಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.