ರಾಜ್ಯ ಕಾಂಗ್ರೆಸ್‌ ಸರ್ಕಾರದ 1000 ದಿನದ ಸಮಾವೇಶ ಇಂದು- ಅಧಿಕಾರಕ್ಕೇರಿ ನಿನ್ನೆಗೆ 1000 ದಿನ ಪೂರ್ಣ | Karnataka Congress Govt Marks 1000 Days

ರಾಜ್ಯ ಕಾಂಗ್ರೆಸ್‌ ಸರ್ಕಾರದ 1000 ದಿನದ ಸಮಾವೇಶ ಇಂದು- ಅಧಿಕಾರಕ್ಕೇರಿ ನಿನ್ನೆಗೆ 1000 ದಿನ ಪೂರ್ಣ | Karnataka Congress Govt Marks 1000 Days



ರಾಜ್ಯ ಕಾಂಗ್ರೆಸ್‌ ಸರ್ಕಾರದ 1000 ದಿನದ ಸಮಾವೇಶ ಇಂದು- ಅಧಿಕಾರಕ್ಕೇರಿ ನಿನ್ನೆಗೆ 1000 ದಿನ ಪೂರ್ಣ | Karnataka Congress Govt Marks 1000 Days

ಪಂಚ ಗ್ಯಾರಂಟಿ ಮತ್ತು ಅದರ ಯಶಸ್ವಿ ಅನುಷ್ಠಾನದ ಸಾಧನೆ, ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಕೊಡುಗೆ ಮತ್ತು ರಾಜಕೀಯ ಮೇಲಾಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಶುಕ್ರವಾರ ‘ಸಾವಿರ ದಿನ’ ಪೂರೈಸಿದೆ.

ಬೆಂಗಳೂರು : ಪಂಚ ಗ್ಯಾರಂಟಿ ಮತ್ತು ಅದರ ಯಶಸ್ವಿ ಅನುಷ್ಠಾನದ ಸಾಧನೆ, ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಕೊಡುಗೆ ಮತ್ತು ರಾಜಕೀಯ ಮೇಲಾಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಶುಕ್ರವಾರ ‘ಸಾವಿರ ದಿನ’ ಪೂರೈಸಿದೆ.

ಪಂಚ ಗ್ಯಾರಂಟಿಗಳಿಂದ ಗಲ್ಲಿಯಿಂದ ದಿಲ್ಲಿ, ನ್ಯೂಯಾರ್ಕ್‌ವರೆಗೂ ಚರ್ಚೆಯಾಗಿರುವ ಸರ್ಕಾರ ತನ್ನ ಸಾವಿರ ದಿನ ಪೂರೈಸಿದೆ. ಈ ಮೈಲುಗಲ್ಲಿನ ನೆನಪಿಗಾಗಿ ‘1001’ನೇ ದಿನವಾದ ಶನಿವಾರ ‘ಭೂ ಗ್ಯಾರಂಟಿ’ ಘೋಷಣೆ ಮಾಡುತ್ತಿದೆ.

ಹಾವೇರಿಯಲ್ಲಿ ರಾಜ್ಯ ಮಟ್ಟದ ಬೃಹತ್‌ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನೂ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಸುತ್ತಮುತ್ತಲಿನ 9 ಜಿಲ್ಲೆಗಳ ಒಟ್ಟು 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಭೂ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದೆ.

ಸಾವಿರ ದಿನದ ಸರ್ಕಾರ:

2023ರ ಮೇ 20 ರಂದು ಪ್ರಚಂಡ ಬಹುಮತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುಕ್ಕಾಣಿ ಹಿಡಿಯುವ ಮೂಲಕ ಕಾಂಗ್ರೆಸ್‌ ಸರ್ಕಾರದ ಅವಧಿ ಶುರುವಾಯಿತು. ಸರ್ಕಾರ ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ, ನಕ್ಸಲ್‌ ಮುಕ್ತ ರಾಜ್ಯ ಘೋಷಣೆ, ಒಳ ಮೀಸಲಾತಿ ಜಾರಿ, ರೈತರ ಪರ ದಿಟ್ಟ ನಿರ್ಧಾರಗಳು, ಕಂದಾಯ ಇಲಾಖೆಯಲ್ಲಿ ಸಾಲು-ಸಾಲು ಸುಧಾರಣೆ, ಹಗರಣ ರಹಿತ ಆಡಳಿತದಿಂದ ಜನ ಮನ್ನಣೆ ಗಳಿಸಿದೆ. ಈ ಸಾಧನೆಗಳ ಗುಚ್ಛಕ್ಕೆ ಶನಿವಾರದ ಭೂ ಗ್ಯಾರಂಟಿಯೂ ಸೇರ್ಪಡೆಯಾಗಲಿದೆ.

ದಾಖಲೆಯ 17ನೇ ಬಜೆಟ್‌ಗೆ ಅಣಿಯಾಗಿರುವ ಸಿದ್ದರಾಮಯ್ಯರಿಂದ ರಾಜ್ಯಕ್ಕೆ ಮತ್ತಷ್ಟು ಘೋಷಣೆಗಳನ್ನು ನಿರೀಕ್ಷಿಸಲಾಗಿದೆ.

ಮುಡಾ, ವಾಲ್ಮೀಕಿ ನಿಗಮ ಹಗರಣದ ಆರೋಪ ಕೇಳಿ ಬಂದರೂ ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ವಿಫಲವಾಗಿವೆ. ಗುತ್ತಿಗೆದಾರರ ಸಂಘ ಶೇ.50 ರಷ್ಟು ಕಮಿಷನ್‌ ಆರೋಪ ಮಾಡಿದರೂ ದಾಖಲೆ ಒದಗಿಸಲು ವಿಫಲವಾಯಿತು. ಧರ್ಮಸ್ಥಳ ಬುರುಡೆ ಕೇಸ್‌, ಆರ್‌ಎಸ್‌ಎಸ್‌ ವಿವಾದದಂಥ ಸಣ್ಣ ಪುಟ್ಟ ವಿವಾದಗಳೂ ಚರ್ಚೆ ಹುಟ್ಟು ಹಾಕಿದ್ದವು. ಮತ್ತೊಂದೆಡೆ ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ, ಸಂಪುಟ ಪುನರ್ ರಚನೆ, ದಲಿತ ಮುಖ್ಯಮಂತ್ರಿ ಸೇರಿ ಸಚಿವರ ಇರಿಸು-ಮುರುಸು ಹೇಳಿಕೆಗಳಿಂದ ರಾಜಕೀಯ ತಲ್ಲಣಗಳು ಸೃಷ್ಟಿಯಾದರೂ ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವ ಉಂಟು ಮಾಡಿಲ್ಲ.

ಗ್ಯಾರಂಟಿ ಸಾಧನೆ, 1 ಲಕ್ಷ ಕೋಟಿ ವೆಚ್ಚ:

ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ ಸರ್ಕಾರ ಮೊದಲ ಆರು ತಿಂಗಳಲ್ಲೇ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಈವರೆಗೆ 1.05 ಲಕ್ಷ ಕೋಟಿ ರು. ಪ್ರಯೋಜನವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಈ ಕರ್ನಾಟಕ ಮಾದರಿ ದೇಶ, ವಿದೇಶದಲ್ಲಿ ಮನ್ನಣೆ ಪಡೆದಿದ್ದು, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸೇರಿ ಎಲ್ಲಾ ಪಕ್ಷಗಳೂ ಈ ಮಾದರಿ ಅನುಸರಿಸಲು ಪ್ರೇರಣೆ ನೀಡಿದೆ.

ಪಂಚ ಗ್ಯಾರಂಟಿ ಜಾರಿಯಾದಾಗ ಆರ್ಥಿಕತೆಗೆ ಬೊಕ್ಕಸಕ್ಕೆ ಧಕ್ಕೆ ಆಗಲಿದೆ. ಸರ್ಕಾರ ದಿವಾಳಿಯಾಗಲಿದೆ ಎಂಬೆಲ್ಲಾ ಆರೋಪಗಳು ಕೇಳಿ ಬಂದಿತ್ತು. ರಾಜ್ಯದ ಗ್ಯಾರಂಟಿಯಿಂದ ಪ್ರೇರಣೆ ಪಡೆದು ಹಲವು ಗ್ಯಾರಂಟಿ ಆರಂಭಿಸಿದ್ದ ಹಿಮಾಚಲಪ್ರದೇಶ ಹಾಗೂ ಮಹಾರಾಷ್ಟ್ರದಂತಹ ಕೆಲ ರಾಜ್ಯಗಳು ಆರ್ಥಿಕ ಸಂಕಷ್ಟವನ್ನೂ ಅನುಭವಿಸಿದವು. ಆದರೆ, ಗ್ಯಾರಂಟಿಗಳನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ತಡೆಯಾಗದಂತೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಿದ ಕಾರಣ ದಿನದಿಂದ ದಿನಕ್ಕೆ ರಾಜ್ಯ ಆರ್ಥಿಕವಾಗಿ ಸಬಲವಾಗುತ್ತಿದೆ.

ಗ್ಯಾರಂಟಿಯಿಂದ ಅನುದಾನ ಕೊರತೆ ಆಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಪ್ರತಿಪಕ್ಷದ ಶಾಸಕರಿಗೂ ಸೇರಿ ಎಲ್ಲರಿಗೂ ಅನುದಾನ ನೀಡುವ ಮೂಲಕ ಅಸಮಾಧಾನ ಶಮನ ಮಾಡಲಾಗಿದೆ.

ತಲಾದಾಯದಲ್ಲಿ ದೇಶದಲ್ಲೇ ನಂ.1:

ಗ್ಯಾರಂಟಿಗಳ ಪರಿಣಾಮವಾಗಿ ರಾಜ್ಯವು ತಲಾದಾಯದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ 500 ಕೋಟಿ ಬಾರಿ ಪ್ರಯಾಣ ಮಾಡಿರುವುದು ಗಿನ್ನೆಸ್‌ ದಾಖಲೆಯಾಗಿದೆ.

ಬೆಲೆ ಏರಿಕೆ ಪರಸ್ಪರ ಕೆಸರೆರಚಾಟ:

ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಇಂಧನ, ಮೋಟಾರು ವಾಹನ ನೋಂದಣಿ ಮತ್ತು ಮದ್ಯ ಸೇರಿ ಹಲವು ಅಗತ್ಯ ವಸ್ತುಗಳ ತೆರಿಗೆಗಳು ಮತ್ತು ಬೆಲೆ ಹೆಚ್ಚಿಸುತ್ತಲೇ ಇದೆ ಎಂದು ವಿರೋಧ ಪಕ್ಷ ಬಿಜೆಪಿ-ಜೆಡಿಎಸ್ ಆರೋಪಿಸುತ್ತಿವೆ.

ಇದಕ್ಕೆ ಫೆಬ್ರವರಿ 2ನೇ ವಾರ ನಡೆದ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯೂ ಜತೆಯಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಕೆಸರೆರಚಾಟಕ್ಕೆ ಕಾರಣವಾದ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕಲಾಗಿದೆ.

ಆದರೆ, ವಿವಿಧ ವಸ್ತು, ಸೇವೆಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ, ರಾಜ್ಯಕ್ಕೆ ಕೇಂದ್ರ ಸರಿಯಾಗಿ ತೆರಿಗೆ ಪಾಲು ನೀಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ಕಡಿಮೆ ಮಾಡುತ್ತಿದೆ. ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದ ಕಾರಣ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್‌ ವಾದಿಸುತ್ತಿದೆ.

ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ:

ಸರ್ಕಾರದ ಅವಧಿ ಶುರುವಾ ದ ದಿನದಿಂದಲೂ ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ಬಣ ವಾದಿಸುತ್ತಿದ್ದರೆ ಅಂಥ ಒಪ್ಪಂದವೇ ಆಗಿಲ್ಲ ಎಂದು ಸಿದ್ದರಾಮಯ್ಯ ಬಣ ಅಲ್ಲಗೆಳೆಯುತ್ತಿದೆ. ಇದೀಗ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‌ ಮಂಡಿಸಲು ಅಣಿಯಾಗಿದ್ದಾರೆ. ಅಲ್ಲದೆ ಹೈಕಮಾಂಡ್‌ ಒಪ್ಪಿದರೆ ಐದೂ ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದಾರೆ.

ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ಅಧಿಕಾರ ಸಿಗುವ ವಿಶ್ವಾಸದೊಂದಿಗೆ ಮುಂದುವರೆದಿದ್ದಾರೆ. ಪ್ರಯತ್ನ ಫಲಿಸದಿದ್ದರೂ ಪ್ರಾರ್ಥನೆ ಫಲಿಸುತ್ತದೆ. ಕಷ್ಟಪಟ್ಟವರಿಗೆ ಪ್ರತಿಫಲ ಇದ್ದೇ ಇರುತ್ತದೆ ಎಂಬ ಹೇಳಿಕೆ ಜತೆಗೆ ಸತತವಾಗಿ ದೆಹಲಿ ಪೆರೇಡ್‌ ಮುಂದುವರೆಸಿದ್ದಾರೆ. ಇದರಿಂದ ಸಾವಿರ ದಿನಗಳ ಬಳಿಕದ ರಾಜಕೀಯ ಬೆಳವಣಿಗೆಗಳು ಸಹ ಕುತೂಹಲಕ್ಕೆ ಕಾರಣವಾಗುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *