Hampi Utsav 2026: ‘ಚರಿತ್ರೆ ಗೊತ್ತಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ’: ಸಿಎಂ | Latest News | Only Those Who Know History Can Create History Cm Siddaramaiah At Hampi Utsav 2026

Hampi Utsav 2026: ‘ಚರಿತ್ರೆ ಗೊತ್ತಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ’: ಸಿಎಂ | Latest News | Only Those Who Know History Can Create History Cm Siddaramaiah At Hampi Utsav 2026


ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ದಿನಗಳ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಇನ್ನು ಮುಂದೆ ಪ್ರತಿ ವರ್ಷ ನವೆಂಬರ್ 3, 4, ಮತ್ತು 5 ರಂದು ಹಂಪಿ ಉತ್ಸವವನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರದ ಪ್ರೋತ್ಸಾಹವಿದೆ ಎಂದರು

ಹಂಪಿ (ಫೆ.14): ನಾಡಿನ ಭವ್ಯ ಇತಿಹಾಸ, ಸುವರ್ಣ ಆಡಳಿತದ ಪ್ರತಿಧ್ವನಿಯಂತಿರುವ ಹಂಪಿಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಮೂರು ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಶುಕ್ರವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದಿ.ಎಂ.ಪಿ. ಪ್ರಕಾಶ್ ಅವರು ಮೈಸೂರು ದಸರಾ ಪ್ರೇರಣೆಯಿಂದ ಹಂಪಿ ಉತ್ಸವ ಆಚರಣೆಗೆ ತಂದರು. ಬಳಿಕ ಉತ್ಸವ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ. ಫೆಬ್ರವರಿಯಲ್ಲಿ ತಿಂಗಳಲ್ಲಿ ಉತ್ಸವ ನಡೆಯುವುದರಿಂದ ಪರೀಕ್ಷಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೇಳುತ್ತಿರುವುದರಿಂದ ಇನ್ನು ಮುಂದೆ ನವೆಂಬರ್ 3, 4, 5ರಂದು ಹಂಪಿ ಉತ್ಸವ ನಡೆಸಲಾಗುವುದು. ಈ ವರ್ಷದ ನವೆಂಬರ್‌ನಲ್ಲಿ ಮತ್ತೆ ಉತ್ಸವ ಜರುಗಲಿದೆ ಎಂದು ಭರವಸೆ ನೀಡಿದರು.

ಹಂಪಿಯ ಐತಿಹ್ಯ ಇಂದಿನ ಯುವಪೀಳಿಗೆಗೆ ಅರ್ಥ ಮಾಡಿಸುವ ಕೆಲಸವಾಗಬೇಕು. ಚರಿತ್ರೆಯನ್ನು ತಿಳಿಯುವುದರಿಂದ ಮಾತ್ರ ಚರಿತ್ರೆ ಸೃಷ್ಟಿಸಲು ಸಾಧ್ಯವಿದೆ. ಹಂಪಿ ಉತ್ಸವ ಸೇರಿದಂತೆ ನಾಡಿನಲ್ಲಿ ಅನೇಕ ಉತ್ಸವಗಳನ್ನು ನಮ್ಮ ಸರ್ಕಾರ ಆಚರಿಸುತ್ತಿದೆ. ರಸ್ತೆಗಳು, ಸೇತುವೆಗಳು, ಕಟ್ಟಡಗಳ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಯ ಬೆಳವಣಿಗೆ ನಾಡಿನ ಅಭಿವೃದ್ಧಿಯಾಗಿದೆ. ಹೀಗಾಗಿಯೇ ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾ ಬರುತ್ತಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಸಮಾನತೆ ಬರಲು ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಬೇಕು. ಹೀಗಾಗಿಯೇ ಗ್ಯಾರಂಟಿ ಯೋಜನೆಗಳ ಮೂಲಕ ಜನರಲ್ಲಿ ಆರ್ಥಿಕ ಸದೃಢತೆ ತರಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಾನು ಮುಖ್ಯಮಂತ್ರಿಯಾದ ಬಳಿಕ ಪ್ರಜಾಪ್ರಭುತ್ವ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದೇನೆ. ಶೋಷಿತ ಸಮುದಾಯಗಳ ಹಿತ ಕಾಯುವ ಕೆಲಸ ಮಾಡಿರುವೆ. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಇದೆ. ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ ಎಂದರು.

====

ನಟ ಶಿವರಾಜಕುಮಾರ್ ಮಾತನಾಡಿ, ಈ ಹಿಂದೆ ಸಿನಿಮಾ ಚಿತ್ರೀಕರಣಕ್ಕಾಗಿ ಹಂಪಿಗೆ ಬರುತ್ತಿದ್ದೆವು. ಇದೀಗ ಹಂಪಿ ಉತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಉತ್ಸವಕ್ಕೆ ಬರುವಂತೆ ಹೇಳಿದಾಗ ನಾನು ಸಂತಸದಿಂದಲೇ ಒಪ್ಪಿಕೊಂಡು ಬಂದಿದ್ದೇನೆ. ಉದ್ಘಾಟನೆ ಸಮಾರಂಭದ ಬಳಿಕ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಮ್ಮನ್ನು ರಂಜಿಸಲಿದ್ದೇನೆ ಎಂದು ತಿಳಿಸಿದರು.

ನಟ ದಿ.ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ಹಂಪಿಯ ಸಾಂಸ್ಕೃತಿಕ ಹಿನ್ನೆಲೆ ಕುರಿತು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ, ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಸಚಿವ ಜಮೀರ್ ಅಹ್ಮದ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಬೇಕಾದ ಅನುದಾನ ನೀಡಿ ಸಹಕರಿಸುತ್ತಿದ್ದಾರೆ ಎಂದರು.

ಸಂಸದ ಈ.ತುಕಾರಾಂ, ವಿಜಯನಗರ ಕಾಲದಲ್ಲಿ ಶ್ರೀಕೃಷ್ಣದೇವರಾಯರು ಸುವರ್ಣಯುಗ ಸೃಷ್ಟಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದೇಶದಲ್ಲಿಯೇ ಬೆಸ್ಟ್ ಸಿಎಂ ಎಂಬ ಹೆಸರು ಮಾಡಿರುವ ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿರುವುದು ನಮ್ಮ ಪುಣ್ಯ ಎಂದು ಗುಣಗಾನ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಕೆಯ ವಿಚಾರದಲ್ಲಿ ನಮ್ಮ ಸರ್ಕಾರ ಹೊಣೆಗಾರಿಕೆಯ ಕಾರ್ಯ ನಿರ್ವಹಿಸಿದೆ. ಸಿಎಂ ಸಿದ್ದರಾಮಯ್ಯನವರು ಗೇಟ್ ಅಳವಡಿಕೆಗೆ ಅನುದಾನ ನೀಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡಿದ್ದಾರೆ. ಎರಡು ಬೆಳೆಗಳಿಗೆ ನೀರು ಪೂರೈಸುವ ಸಿಎಂ ಸಿದ್ದರಾಮಯ್ಯ ಅವರಿಂದಾಗಿದೆ ಎಂದು ತಿಳಿಸಿದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ಮಾತನಾಡಿದರು.

ಶಾಸಕರಾದ ನಾರಾ ಭರತ್ ರೆಡ್ಡಿ, ಲತಾ ಮಲ್ಲಿಕಾರ್ಜುನ, ನೇಮಿರಾಜ ನಾಯ್ಕ, ಎಲ್.ಕೃಷ್ಣನಾಯ್ಕ, ಡಾ.ಎನ್.ಟಿ. ಶ್ರೀನಿವಾಸ, ಬಿ.ಎಂ. ನಾಗರಾಜ್ ಇದ್ದರು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸ್ವಾಗತಿಸಿದರು.

YouTube video player



Source link

Leave a Reply

Your email address will not be published. Required fields are marked *