
ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್, ಆಟೋ ರಿಕ್ಷಾ ಹಾಗೂ ಕಾರಿನ ಮೇಲೆ ಪಿಲ್ಲರ್ ಬಿದ್ದಿದೆ. ನಾಲ್ವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಮುಂಬೈ (ಫೆ.14) ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಆಟೋ ರಿಕ್ಷಾ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಮುಂಬೈನ ನಿರ್ಮಾಮ ಹಂತದ ಪಿಲ್ಲರ್ ದುರ್ಘಟನೆಯಿಂದ ಆಟೋದಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಿಲ್ಲರ್ ಆಟೋ ಹಾಗೂ ಕಾರಿನ ಮೇಲೆ ಬಿದ್ದಿದೆ. ಕಾರಿನ ಬಾನೆಟ್ ಮೇಲೆ ಬಿದ್ದ ಕಾರಣ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇತ್ತ ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ 12.20ರ ಸಮಯದಲ್ಲಿ ಮೆಟ್ರೋ ಪಿಲ್ಲರ್ ಕುಸಿದಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಫ್ಯಾಕ್ಟರಿ ಮುಂಭಾಗದ ಎಲ್ಬಿಎಸ್ ರಸ್ತೆಯಲ್ಲಿ ನಡೆಯುತ್ತಿದ್ದ ಮೆಟ್ರೋ ಮಿಲ್ಲರ್ ಅಸಮರ್ಪಕ ಕಾಮಗಾರಿಯಿಂದ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮುಂಬೈ ಪಾಲಿಕೆ ಅಧಿಕಾರಿಗಳು, ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೂರರಿಂದ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾರೆ. ಮೆಟ್ರೋ ಪಿಲ್ಲರ್ ಮೇಲಿನ ಸಿಮೆಂಟ್ ಸ್ಲ್ಯಾಬ್ ಕೆಳಕ್ಕೆ ಬಿದ್ದಿದೆ. ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಕಾರು ಕೂಡ ನಜ್ಜು ಗುಜ್ಜಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್, ಪೊಲೀಸ್, ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮುಂಬೈ ಮೆಟ್ರೋ ಸ್ಪಷ್ಟನೆ
ಮುಂಬೈ ಮೆಟ್ರೋ ನಿರ್ಮಾಣ ಜವಾಬ್ದಾರಿ ಹೊತ್ತಿರುವ MMRDA ಘಟನೆ ಕುರಿತು ಪ್ರತಿಕ್ರಿಯೆ ನೀಡಿದೆ. ದುರುದೃಷ್ಟಕರ ಘಟನೆ ನಡೆದಿದೆ. ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಮೆಟ್ರೋ ಪಿಲ್ಲರ್ ಕುಸಿದು ಬೀಳಲು ಕಾರಣವೇನು ಅನ್ನೋ ಕುರಿತು ಅಧಿಕಾರಗಳು ತನಿಖೆ ನಡೆಸುತ್ತಿದ್ದಾರೆ.
ದೇಶಾದ್ಯಂದ ಹಲವು ನಗರಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿದೆ. ಕೆಲ ನಗರದಲ್ಲಿ ಈ ರೀತಿಯ ಘಟನೆಗಳು ನಡೆದಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಮುಂಬೈನಲ್ಲ ನಡೆದ ಮೆಟ್ರೋ ಪಿಲ್ಲರ್ ಕುಸಿತ ಗಂಭೀರ ಸ್ವರೂಪ ಪಡೆಯುತ್ತಿದೆ. ನಾಗರೀಕರ ಸುರಕ್ಷತೆ ಪ್ರಶ್ನೆ ಎದುರಾಗಿದೆ.