
ಗಣೇಶ್ ಅವರ ಕುಟುಂಬದಿಂದ ಕೇವಲ ಮಹೇಶ್ ಮಾತ್ರವಲ್ಲ, ಕಿರಿಯ ಸಹೋದರ ಸೂರಜ್ ಕೃಷ್ಣ ಕೂಡ ‘ನಾನೇ ರಾಜ’ ಎಂಬ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಆ ಸಿನಿಮಾ ಸೋತಿದ್ದರಿಂದ ಅವರು ಚಿತ್ರರಂಗದಿಂದ ದೂರ ಸರಿದು ಈಗ ಮತ್ತೆ ಬೇರೆ ಕೆಲಸ ಮಾಡುತ್ತಿದ್ದಾರೆ. ಈ ಸ್ಟೋರಿ ನೋಡಿ..
ಗಣೇಶ್ ಮಾತು ಕೇಳದೆ 4 ಕೋಟಿ ಕಳೆದುಕೊಡು ಈಗ ಮರುಗುತ್ತಿದ್ದಾರೆ ಸಹೋದರ ಮಹೇಶ್!
ಸ್ಯಾಂಡಲ್‌ವುಡ್‌ನ ‘ಗೋಲ್ಡನ್ ಸ್ಟಾರ್’ ಗಣೇಶ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ‘ಮುಂಗಾರುಮಳೆ’ಯಿಂದ ಶುರುವಾದ ಅವರ ಯಶಸ್ಸಿನ ಪಯಣ ಇಂದಿಗೂ ಮಿನುಗುತ್ತಲೇ ಇದೆ. ಆದರೆ, ಅದೇ ಕುಟುಂಬದ ಮತ್ತೊಬ್ಬ ಸದಸ್ಯ ಬಣ್ಣದ ಲೋಕದ ಮಾಯೆಗೆ ಬಿದ್ದು, ಅಣ್ಣ ಹಾಕಿಕೊಟ್ಟ ಭದ್ರ ಬುನಾದಿಯನ್ನು ಕಳೆದುಕೊಂಡ ಕಥೆ ಈಗ ಚರ್ಚೆಗೆ ಗ್ರಾಸವಾಗಿದೆ. ಅವರೇ ಗಣೇಶ್ ಅವರ ಸಹೋದರ ಮಹೇಶ್.
ನಟ ಮಹೇಶ್ ‘ನಮಕ್‌ಹರಾಮ್’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಈಗ ‘ಮಗ್ಗಿ ಪುಸ್ತಕ’ ಎಂಬ ಸಿನಿಮಾದಲ್ಲಿ ನೆಗೆಟಿವ್ ಶೆಡ್ ಇರುವ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಗೌರೀಶ್ ಅಕ್ಕಿ ಅವರ ಸ್ಟುಡಿಯೋದಲ್ಲಿ (Gaurish Akki Studio) ನೀಡಿದ ಸಂದರ್ಶನದಲ್ಲಿ ಮಹೇಶ್ ತಮ್ಮ ಸಿನಿ ಜರ್ನಿಯ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಅಣ್ಣನ ಮಾತು ಮೀರಿ ಬಂದಿದ್ದಕ್ಕೆ ಪಶ್ಚಾತ್ತಾಪ:
“ನನ್ನ ಅಣ್ಣ ಗಣೇಶ್ ಅವರಿಗೆ ಚಿತ್ರರಂಗದ ಕಷ್ಟಗಳು ಚೆನ್ನಾಗಿ ಗೊತ್ತಿತ್ತು. ನಾನು ಸಿನಿಮಾ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಅವರು ನನಗೆ ಒಂದು ಉತ್ತಮ ಬ್ಯುಸಿನೆಸ್ ಸೆಟ್ ಮಾಡಿಕೊಟ್ಟಿದ್ದರು,” ಎಂದು ಮಹೇಶ್ ನೆನಪಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಅರ್ಧಕ್ಕೆ ಬಿಟ್ಟಿದ್ದ ಮಹೇಶ್ ಅವರಿಗೆ, ‘ಮುಂಗಾರುಮಳೆ’ ಹಿಟ್ ಆದ ನಂತರ ಗಣೇಶ್ ಅವರು ಎಂಟಿಆರ್ (MTR) ಹೋಲ್ ಸೇಲ್ ಡಿಸ್ಟ್ರಿಬ್ಯೂಷನ್ ಬ್ಯುಸಿನೆಸ್ ಆರಂಭಿಸಿಕೊಟ್ಟಿದ್ದರು. ವರ್ಷಕ್ಕೆ ಸುಮಾರು 4 ರಿಂದ 5 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದ ಆ ವ್ಯವಹಾರದಲ್ಲಿ ಮಹೇಶ್ ನೆಲೆ ಕಂಡುಕೊಂಡಿದ್ದರು.
ಆದರೆ, ಸುತ್ತಮುತ್ತಲಿನ ಗೆಳೆಯರ ಪ್ರಚೋದನೆ ಮತ್ತು ಸಿನಿಮಾ ಮೇಲಿನ ವ್ಯಾಮೋಹದಿಂದ ಮಹೇಶ್ ಆ ಲಾಭದಾಯಕ ಬ್ಯುಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಿದರು. “ನಾನು ದಡ್ಡನ ತರಹ ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಹಾಳು ಮಾಡಿಕೊಂಡೆ. ಸಿನಿಮಾ ಮಾಡೋಣ, ನೀವೇ ಹೀರೋ ಅಂತ ಸ್ನೇಹಿತರು ಹೇಳಿದ್ದನ್ನು ನಂಬಿ ಬಂದೆ. ಅಣ್ಣ ಬೇಡ ಅಂದರೂ ಕೇಳಲಿಲ್ಲ. ಆ ನಿರ್ಧಾರ ತಪ್ಪು ಎಂದು ಈಗ ಅನ್ನಿಸುತ್ತಿದೆ, ಆ ಕೊರಗು ಇವತ್ತಿಗೂ ಇದೆ,” ಎಂದು ಮಹೇಶ್ ಭಾವುಕರಾಗಿ ನುಡಿದಿದ್ದಾರೆ.
ಮತ್ತೊಬ್ಬ ಸಹೋದರನ ಕಥೆಯೂ ಇದೇ:
ಗಣೇಶ್ ಅವರ ಕುಟುಂಬದಿಂದ ಕೇವಲ ಮಹೇಶ್ ಮಾತ್ರವಲ್ಲ, ಕಿರಿಯ ಸಹೋದರ ಸೂರಜ್ ಕೃಷ್ಣ ಕೂಡ ‘ನಾನೇ ರಾಜ’ ಎಂಬ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಆ ಸಿನಿಮಾ ಸೋತಿದ್ದರಿಂದ ಅವರು ಚಿತ್ರರಂಗದಿಂದ ದೂರ ಸರಿದು, ಈಗ ತಮ್ಮ ಹುಟ್ಟೂರಾದ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಅಣಬೆ ವ್ಯಾಪಾರ ಮಾಡಿಕೊಂಡಿದ್ದಾರೆ.
‘ಮಗ್ಗಿ ಪುಸ್ತಕ’ದ ಮೇಲೆ ಭರವಸೆ:
ಮಹೇಶ್ ನಟನೆಯ 5ನೇ ಸಿನಿಮಾ ‘ಮಗ್ಗಿ ಪುಸ್ತಕ’ ಈಗ ಬಿಡುಗಡೆಯಾಗಿದೆ. ಎಚ್. ಸಿ ಮಹೇಶ್ ಬರೆದ ‘ಅವನಿ’ ಎಂಬ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಗಿರಿಜಾ ಲೋಕೇಶ್ ಅಂತಹ ಹಿರಿಯ ಕಲಾವಿದರಿದ್ದಾರೆ. ನೆಗೆಟಿವ್ ರೋಲ್ ಮೂಲಕ ಮಹೇಶ್ ಈ ಬಾರಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆಯಲ್ಲಿದ್ದಾರೆ. ಅಣ್ಣ ಗಣೇಶ್ ಇಂದಿಗೂ ತಮಗೆ ರೋಲ್ ಮಾಡೆಲ್ ಎಂದು ಹೇಳುವ ಮಹೇಶ್, ಕಳೆದುಕೊಂಡಿದ್ದನ್ನು ಸಾಧನೆಯ ಮೂಲಕ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ.