
ನಮೀಬಿಯಾ ವಿರುದ್ಧದ ಟಿ20 ಪಂದ್ಯದಲ್ಲಿ, ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಪೂರ್ಣ ಬೌಲಿಂಗ್ ಕೋಟಾ ನೀಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ‘ಅಸಂಬದ್ಧ’ ಎಂದು ಟೀಕಿಸಿದ್ದಾರೆ.
ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಕೇವಲ ಎರಡು ಓವರ್ ಬೌಲಿಂಗ್ ನೀಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಮಾಜಿ ಆಟಗಾರ ಮತ್ತು ಚೀಫ್ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ ‘ಅಸಂಬದ್ಧ’ ಎಂದು ಕರೆದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಟೀಮ್ ಮ್ಯಾನೇಜ್‌ಮೆಂಟ್ ವರುಣ್‌ಗೆ ಐದು ವಿಕೆಟ್ ಪಡೆಯುವ ಸುವರ್ಣಾವಕಾಶವನ್ನು ತಪ್ಪಿಸಿದೆ ಎಂದು ಆರೋಪಿಸಿದ್ದಾರೆ.
ವರುಣ್ ಚಕ್ರವರ್ತಿ ಕೇವಲ ಎರಡು ಓವರ್‌ಗಳಲ್ಲಿ 7 ರನ್ ನೀಡಿ 3 ವಿಕೆಟ್ ಪಡೆದು ನಮೀಬಿಯಾ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಆದರೂ ಅವರಿಗೆ ಪೂರ್ತಿ ಬೌಲಿಂಗ್ ಕೋಟಾ ನೀಡಲಿಲ್ಲ. “ಬೌಲರ್‌ನನ್ನು ರಕ್ಷಿಸಬೇಕು, ಬೇರೆ ತಂಡಗಳ ಮುಂದೆ ಎಕ್ಸ್‌ಪೋಸ್ ಮಾಡಬಾರದು ಅನ್ನೋದೆಲ್ಲಾ ವಿಚಿತ್ರ ವಾದ. ಹಾಗಿದ್ರೆ, ಅವನನ್ನು ಒಂದು ರೂಮಿನೊಳಗೆ ಲಾಕ್ ಮಾಡಿ ಇಡಬೇಕಿತ್ತು. ವರುಣ್‌ಗೆ ಈಗ ತುಂಬಾ ಬೇಜಾರಾಗಿರತ್ತೆ. ವಿಶ್ವಕಪ್‌ನಲ್ಲಿ ಐದು ವಿಕೆಟ್ ಪಡೆಯೋದು ಸಣ್ಣ ಮಾತಲ್ಲ. ಅವನನ್ನು ಯಾಕೆ ಮುಚ್ಚಿಡುತ್ತಿದ್ದೀರಿ? ಎಲ್ಲರೂ ಅವನ ಬೌಲಿಂಗ್ ಅನ್ನು ಟಿವಿಯಲ್ಲಿ ಸಾವಿರ ಸಲ ನೋಡಿದ್ದಾರೆ. ಇನ್ನೂ ಎರಡು ಓವರ್ ಕೊಟ್ಟಿದ್ದರೆ, ಅವನು ನಮೀಬಿಯಾವನ್ನು ಆಲೌಟ್ ಮಾಡುತ್ತಿದ್ದ,” ಎಂದು ಶ್ರೀಕಾಂತ್ ಹೇಳಿದ್ದಾರೆ.
ಬುಮ್ರಾಗೆ ಬೌಲಿಂಗ್ ನೀಡದ್ದಕ್ಕೂ ಟೀಕೆ
ಪವರ್‌ಪ್ಲೇ ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾಗೆ ಬೌಲಿಂಗ್ ನೀಡದ ಸೂರ್ಯಕುಮಾರ್ ಯಾದವ್ ನಿರ್ಧಾರವನ್ನೂ ಶ್ರೀಕಾಂತ್ ಟೀಕಿಸಿದರು. ನಮೀಬಿಯಾ ಪವರ್‌ಪ್ಲೇನಲ್ಲಿ 57 ರನ್ ಗಳಿಸಿದರೂ, ಬುಮ್ರಾಗೆ 7ನೇ ಓವರ್‌ನಲ್ಲಿ ಬೌಲಿಂಗ್ ನೀಡಲಾಯಿತು. “ಬುಮ್ರಾನ ಯಾಕೆ ಪವರ್‌ಪ್ಲೇನಲ್ಲಿ ಬೌಲಿಂಗ್‌ನಿಂದ ದೂರ ಇಡ್ತಿದ್ದೀರಾ? ಪವರ್‌ಪ್ಲೇ ಮುಗಿದ ಮೇಲೆ ಬರೋಕೆ ಬುಮ್ರಾ ಏನು ಸಾಮಾನ್ಯ ಬೌಲರಾ? ಬುಮ್ರಾನನ್ನೂ ನೀವು ಮುಚ್ಚಿಡುತ್ತಿದ್ದೀರಾ? ಬುಮ್ರಾ ಆರಂಭದಲ್ಲೇ ಬೌಲ್ ಮಾಡಿದ್ರೆ, ಆಟ ಬೇಗ ಮುಗಿದು ಹೋಗುತ್ತಿತ್ತು,” ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ನಮೀಬಿಯಾ ವಿರುದ್ಧ ಭಾರತ ಸುಲಭವಾಗಿ ಗೆದ್ದರೂ, ಇಂತಹ ತಾಂತ್ರಿಕ ತಪ್ಪುಗಳು ದೊಡ್ಡ ತಂಡಗಳ ವಿರುದ್ಧ ದೊಡ್ಡ ಹಿನ್ನಡೆಯನ್ನುಂಟು ಮಾಡಬಹುದು ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ.
ಪಾಕಿಸ್ತಾನ ಎದುರಿನ ಪಂದ್ಯಕ್ಕೆ ರೆಡಿಯಾದ ಟೀಂ ಇಂಡಿಯಾ:
ಇದೀಗ ಫೆಬ್ರವರಿ 15ರಂದು ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಕಾದಾಡಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಬಹುತೇಕ ಸೂಪರ್-8 ಹಾದಿಯನ್ನು ಖಚಿತಪಡಿಸಿಕೊಳ್ಳಲಿದೆ. ಕೆಲ ತಿಂಗಳ ಹಿಂದಷ್ಟೇ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಸತತ ಮೂರು ಬಾರಿ ಪಾಕ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿದ್ದು, ಜಿದ್ದಾಜಿದ್ದಿನ ಪೈಪೋಟಿಯ ಪಂದ್ಯವನ್ನು ನಿರೀಕ್ಷಿಸಲಾಗಿದೆ.