
ತವರು ಮನೆಯಿಂದ ಪತ್ನಿ ವಾಪಸ್ ಬಾರದಿದ್ದಕ್ಕೆ ಕೋಪಗೊಂಡ ಪತಿ, ತನ್ನ ಮಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ಹೆಣ್ಣು ಕೊಟ್ಟ ಮಾವನನ್ನೇ ಕೊಂದ ಅಳಿಯ
ಅಹ್ಮದಾಬಾದ್: ಹೆಂಡ್ತಿ ತನ್ನ ತವರು ಮನೆಯಿಂದ ಗಂಡನ ಮನೆಗೆ ವಾಪಸ್ ಬರಲಿಲ್ಲ ಎಂದು ಸಿಟ್ಟಿಗೆದ್ದ ಗಂಡನೋರ್ವ ಹೆಣ್ಣು ಕೊಟ್ಟ ಮಾವನನ್ನೇ ಚಾಕುವಿನಿಂದ ಇರಿದು ಕೊಂದಂತಹ ಭೀಕರ ಘಟನೆ ಗುಜರಾತ್‌ನ ಅಹಮದಾಬಾದ್‌ನ ನರೋಲ್ ಪ್ರದೇಶದಲ್ಲಿ ನಡೆದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಬ್ರಾಹಿಂ ಮನ್ಸೂರಿ ಕೊಲೆ ಮಾಡಿದ ಅಳಿಯ. ಈತ ತನ್ನಿಬ್ಬರು ಸಹಚರರ ಜೊತೆ ಸೇರಿ ತನ್ನ ಮಾವ ಅಜೀಜ್ ಮನ್ಸೂರಿ ಅವರನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಇಬ್ರಾಹಿಂ ಮನ್ಸೂರಿ, ನರೋಲ್ ಪ್ರದೇಶದಲ್ಲಿ ವಾಸಿಸುವ ಹುಡುಗಿಯನ್ನು ಮದುವೆಯಾಗಿದ್ದ. ಈತನ ಪತ್ನಿ ಕಳೆದ 10 ದಿನಗಳಿಂದ ನರೋಲ್‌ನಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ತನ್ನ ಅತ್ತಿಗೆ ಮತ್ತು ತಾಯಿ ಇಬ್ಬರೂ ಅನಾರೋಗ್ಯ ಪೀಡಿತರಾಗಿದ್ದರಿಂದ ಅವರನ್ನು ಆರೈಕೆ ಮಾಡುವುದಕ್ಕಾಗಿ ಆಕೆ ತನ್ನತವರು ಮನೆಯಲ್ಲಿ ನೆಲೆಸಿದ್ದಳು. ಆದರೆ 10 ದಿನವಾದರೂ ಪತ್ನಿ ತವರಿನಿಂದ ಬಾರದೇ ಹೋದಾಗ ಸಿಟ್ಟಿಗೆದ್ದ ಇಬ್ರಾಹಿಂ ಮನ್ಸೂರಿ ಅತ್ತೆ ಮನೆಗೆ ಹೋಗಿ ಅಲ್ಲಿ ಜೋರಾಗಿ ಜಗಳ ತೆಗೆದಿದ್ದಾನೆ. ಅಳಿಯನ ಆರ್ಭಟ ನೋಡಿ ಅವನ ಮಾವ ಅಜೀಜ್ ಮನ್ಸೂರಿ ಅಳಿಯನಿಗೆ ಗದರಿಸಿದಾಗ, ಆತ ತನ್ನ ಹೆಂಡ್ತಿ ಕುಟುಂಬದವರನ್ನು ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ಹೊರಟು ಹೋಗಿದ್ದಾನೆ.
ಇದನ್ನೂ ಓದಿ: 58 ವರ್ಷ ಸುಖ ಸಂಸಾರ ನಡೆಸಿದ ದಂಪತಿಗೆ ಡಿವೋರ್ಸ್ ನೀಡಲು ಕೋರ್ಟ್ ನಿರಾಕರಿಸಿದ್ದೇಕೆ?
ಹೀಗೆ ಗಲಾಟೆ ಮಾಡಿ ಹೋದವನು ಮತ್ತೆ ತನ್ನಿಬ್ಬರು ಸಹಚರರ ಜೊತೆಗೆ ಅಲ್ಲಿಗೆ ಬಂದಿದ್ದು, ಮೊದಲಿಗೆ ಮೂವರು ಸೇರಿ ಇಬ್ರಾಹಿಂ ಮನ್ಸೂರಿಯ ಪತ್ನಿ ಮನೆಯವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಮಾವನಿಗೆ ಚಾಕುವಿನಿಂದ ಇರಿದಿದ್ದಾರೆ. ದಾಳಿಯಿಂದ ಕೆಳಗೆ ಬಿದ್ದ ಅವರನ್ನು ಒದ್ದು ಗಲಾಟೆ ಮಾಡಿ ಆಕ್ರೋಶ ತೋರಿದ ಆತ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಅಳಿಯನ ಹಲ್ಲೆಯಿಂದ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ.
ಚಾಕುವಿನಿಂದ ಇರಿದ ನಂತರ ಅಳಿಯ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಮೃತರ ಕುಟುಂಬದಿಂದ ಪೊಲೀಸರು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ನರೋಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ : 13 ರಾಷ್ಟ್ರಗಳಿಗೆ ಆಮಂತ್ರಣ ಭಾರತಕ್ಕಿದೆಯಾ ಆಹ್ವಾನ