
Bengaluru Flat Rent: ಬೆಂಗಳೂರಿನ ಫ್ಲಾಟ್ ಒಂದಕ್ಕೆ 80,000 ರೂ. ಬಾಡಿಗೆ ಕೇಳಲಾಗಿದೆ. ಮೂಲಭೂತ ಅವಶ್ಯಕತೆಯಾದ ನೈಸರ್ಗಿಕ ಬೆಳಕನ್ನು ಈಗ ‘ಐಷಾರಾಮಿ ಸೌಲಭ್ಯ’ ಎಂದು ಬಿಂಬಿಸಿ ಹಣ ವಸೂಲಿ ಮಾಡುತ್ತಿರುವುದು ಬಾಡಿಗೆದಾರರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರು ತನ್ನ ಐಟಿ ಕಂಪನಿಗಳಿಗಿಂತ ಹೆಚ್ಚಾಗಿ ಈಗ ಇಲ್ಲಿನ ವಿಶಿಷ್ಟ ಬಾಡಿಗೆಯಿಂದಾಗಿ ಸುದ್ದಿಯಲ್ಲಿದೆ. ಮನೆ ಹುಡುಕುವುದು ಇಲ್ಲಿ ಒಂದು ದೊಡ್ಡ ಯುದ್ಧವೇ ಸರಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ ಬೆಂಗಳೂರಿನ ರಿಯಲ್ ಎಸ್ಟೇಟ್ ಯಾವ ಮಟ್ಟಕ್ಕೆ ಹೋಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಕೇವಲ ಮನೆಯ ಕಿಟಕಿಯಿಂದ ಸೂರ್ಯನ ಬೆಳಕು ಚೆನ್ನಾಗಿ ಬೀಳುತ್ತದೆ ಎಂಬ ಕಾರಣಕ್ಕೆ ಬರೋಬ್ಬರಿ 80,000 ರೂಪಾಯಿ ಬಾಡಿಗೆ ಕೇಳಿರುವ ಘಟನೆ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಸೂರ್ಯನ ಬೆಳಕಿಗೂ ಬಂತು ಪ್ರೀಮಿಯಂ ಬೆಲೆ
ಅನು ಎಂಬುವವರು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಈ ಪೋಸ್ಟ್ ಶೇರ್ ಮಾಡಿದ್ದಾರೆ. ಅವರು ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆಯಲು ಹೋದಾಗ, ಮನೆ ಮಾಲೀಕರು ಆ ಮನೆಯಲ್ಲಿ ‘ಉತ್ತಮ ನೈಸರ್ಗಿಕ ಬೆಳಕು ಮತ್ತು ಬಿಸಿಲು’ (Good Sunlight) ಬರುತ್ತದೆ ಎನ್ನುವ ಕಾರಣ ನೀಡಿ 80,000 ರೂ. ಬಾಡಿಗೆ ನಿಗದಿಪಡಿಸಿದ್ದಾರೆ. ಈ ಹಿಂದೆ ಯಾವುದೇ ಮನೆಯ ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಲಾಗುತ್ತಿದ್ದ ಗಾಳಿ ಮತ್ತು ಬೆಳಕನ್ನು ಈಗ ‘ಪ್ರೀಮಿಯಂ ಅಮೆನಿಟಿ’ ಅಥವಾ ಐಷಾರಾಮಿ ಸೌಲಭ್ಯ ಎಂದು ಬಿಂಬಿಸಲಾಗುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, 80,000 ರೂ. ಬಾಡಿಗೆ ಕಟ್ಟುವ ಬದಲು ಅಷ್ಟೇ ಮೊತ್ತದ ಸಾಲದ ಕಂತನ್ನು (EMI) ಕಟ್ಟಿ ಸ್ವಂತ ಮನೆ ಖರೀದಿಸುವುದೇ ಲೇಸು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೆಕ್ಯೂರಿಟಿ ಡಿಪಾಸಿಟ್ ಹೆಸರಿನಲ್ಲಿ 23 ಲಕ್ಷ ರೂ. ಬೇಡಿಕೆ!
ಬಾಡಿಗೆಯ ಕಿರಿಕಿರಿ ಸುದ್ದಿ ಈ ಹಿಂದೆಯೂ ವೈರಲ್ ಆಗಿತ್ತು. ಘಟನೆಯು ಬೆಂಗಳೂರಿನ ಬೆನ್ನಿಗಾನಹಳ್ಳಿ ಪ್ರದೇಶದಲ್ಲಿ ಬೆಳಕಿಗೆ ಬಂದಿತ್ತು. ಕೆನಡಾದ ಡಿಜಿಟಲ್ ಕ್ರಿಯೇಟರ್ ಒಬ್ಬರು ಹಂಚಿಕೊಂಡ ಮಾಹಿತಿಯಂತೆ, ಅಲ್ಲಿನ 4BHK ಮನೆಯೊಂದಕ್ಕೆ 2.3 ಲಕ್ಷ ರೂಪಾಯಿ ಮಾಸಿಕ ಬಾಡಿಗೆ ಇತ್ತು. ಆದರೆ ಜನರನ್ನು ಬೆಚ್ಚಿಬೀಳಿಸಿದ್ದು ಬಾಡಿಗೆಗಿಂತ ಹೆಚ್ಚಾಗಿ ಅಲ್ಲಿನ ಸೆಕ್ಯೂರಿಟಿ ಡೆಪಾಸಿಟ್ ಮೊತ್ತ. ಮಾಲೀಕರು ಬರೋಬ್ಬರಿ 10 ತಿಂಗಳ ಬಾಡಿಗೆಯನ್ನು ಅಂದರೆ 23 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ನೀಡುವಂತೆ ಕೇಳಿದ್ದಾರೆ. ಇದನ್ನು ‘ದುರಾಸೆಯ ಪರಮಾವಧಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿತ್ತು.
Scroll to load tweet…
ಸಾಮಾನ್ಯ ಜನರ ಆತಂಕ
ಈ ರೀತಿ ನಿರಂತರವಾಗಿ ಏರುತ್ತಿರುವ ಬಾಡಿಗೆ ಮತ್ತು ಅವಾಸ್ತವಿಕ ಡೆಪಾಸಿಟ್ ಬೇಡಿಕೆಗಳು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗುತ್ತಿದೆ. ವಾಸಕ್ಕೆ ಯೋಗ್ಯವಾದ ಮನೆಗಳಿಗೂ ಸಹ ಮುಂಬೈನಂತಹ ದುಬಾರಿ ನಗರಗಳಿಗಿಂತ ಹೆಚ್ಚು ಬೆಲೆ ತೆರಬೇಕಾದ ಪರಿಸ್ಥಿತಿ ಇಂದು ಬೆಂಗಳೂರಿನಲ್ಲಿದೆ.
ಬೆಂಗಳೂರಿನ ಬಾಡಿಗೆ ವ್ಯವಸ್ಥೆಯು ಇಂದು ಹಣ ಮಾಡುವ ದಂಧೆಯಾಗಿ ಬದಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ನೈಸರ್ಗಿಕ ಬೆಳಕು ಮತ್ತು ಗಾಳಿಯಂತಹ ಸೌಲಭ್ಯಗಳಿಗೂ ಪ್ರತ್ಯೇಕ ಬೆಲೆ ತೆರಬೇಕಾದ ಇಂದಿನ ಪರಿಸ್ಥಿತಿ ಬಾಡಿಗೆದಾರರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಕೋವಿಡ್ ನಂತರ ಕಚೇರಿಗಳು ಪುನಃ ಆರಂಭವಾದ ಮೇಲೆ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಉತ್ತಮ ಮನೆಗಳ ಸಂಖ್ಯೆ ಕಡಿಮೆಯಿದೆ. ಹಾಗೆಯೇ ಸೌಲಭ್ಯಗಳ ಹೆಸರಿನಲ್ಲಿ ಸಾಮಾನ್ಯ ಮಧ್ಯಮ ವರ್ಗದವರಿಗೂ ಲಭ್ಯವಾಗದಷ್ಟು ಬಾಡಿಗೆ ಏರಿಕೆಯಾಗುತ್ತಿದೆ. ಇತ್ತೀಚೆಗೆ ‘ಬೆಂಗಳೂರು ಬಾಡಿಗೆ ಕಥೆಗಳು’ (Bengaluru Rental Stories) ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಇಂತಹ ಅನೇಕ ಘಟನೆಗಳು ವೈರಲ್ ಆಗುತ್ತಿರುವುದನ್ನ ನಾವಿಲ್ಲಿ ಗಮನಿಸಬಹುದು.