Headlines

ಒಲ್ಲೆ ಎಂದರೂ ಜೆನ್‌ಝಿ ಕತ್ತೆಗಳಿಗೆ ಮದುವೆ ಭಾಗ್ಯ !- ಓಡಿ ಹೋದ್ರೂ ಬಿಡಲಿಲ್ಲ, ಮತ್ತೆ ಎಳೆತಂದು ಕಲ್ಯಾಣ | Despite Saying No Gen Z Youths Finding Marriage Prospects

ಒಲ್ಲೆ ಎಂದರೂ ಜೆನ್‌ಝಿ ಕತ್ತೆಗಳಿಗೆ ಮದುವೆ ಭಾಗ್ಯ !- ಓಡಿ ಹೋದ್ರೂ ಬಿಡಲಿಲ್ಲ, ಮತ್ತೆ ಎಳೆತಂದು ಕಲ್ಯಾಣ | Despite Saying No Gen Z Youths Finding Marriage Prospects



ಒಲ್ಲೆ ಎಂದರೂ ಜೆನ್‌ಝಿ ಕತ್ತೆಗಳಿಗೆ ಮದುವೆ ಭಾಗ್ಯ !- ಓಡಿ ಹೋದ್ರೂ ಬಿಡಲಿಲ್ಲ, ಮತ್ತೆ ಎಳೆತಂದು ಕಲ್ಯಾಣ | Despite Saying No Gen Z Youths Finding Marriage Prospects

ಬೇರೇನೋ ಕಾರಣ ಹೇಳಿ ಕರೆದುಕೊಂಡು ಬಂದು ಈಗ ಮದುವೆ ಮಾಡಲು ಹೊರಟಿದ್ದಾರೆಂದು ತಿಳಿದುಕೊಂಡ ಕತ್ತೆ ‘ಮದುವೆ ಬೇಡಪ್ಪಾ ಬೇಡಾ..’ಎಂದು ಓಟಕ್ಕಿತ್ತಿತು. ಮದುವೆಗೆ ಗಂಡೇ ಇರದಿದ್ದರೆ ಕಷ್ಟ ಅಂತ ಒಂದಿಬ್ಬರು ಅದರ ಹಿಂದೆ ಓಡಿ ಹಿಡಿದುಕೊಂಡರು.

ಮದುವೇನಾ…? ಸದ್ಯ ಬೇಡವೇ ಬೇಡಾ, ಮದುವೆ ಮಾಡಿಕೊಂಡ್ರೆ ಜಂಜಾಟ…ಫ್ರೀಡಂ ಸಿಗಲ್ಲ ಎನ್ನುವ ಜೆನ್‌ಝಿಗಳೇ ಜಾಸ್ತಿ. ಇದಕ್ಕೆ ನಮ್ಮ ಜೆನ್‌ಝಿ ಪ್ರಾಣಿಗಳೂ ಹೊರತಾಗಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಶನಿವಾರ ಹಾಡು ಹಗಲು ಏರ್ಪಡಿಸಿದ್ದ ಮದುವೆ ಕಾರ್ಯಕ್ರಮವೇ ಸಾಕ್ಷಿ…

ಪ್ರೇಮಿಗಳ ದಿನದ ಅಂಗವಾಗಿ ನಮ್ಮ ವಾಟಾಳ್‌ ನಾಗರಾಜ ಸಾಹೇಬ್ರು ಕತ್ತೆಗಳ ಮದುವೆಯನ್ನು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಏರ್ಪಡಿಸಿದ್ದರು. ಮದುವೆ ಅಂದ್ರೆ ಸಿಂಪಲ್‌ ಆಗಿ ಹೋಗಲು ಸಾಧ್ಯವೇ? ಎಂದಿನಂತೆ ವಾಟಾಳ್‌ ಸೇರಿ ಅವರ ಶಿಷ್ಯಂದಿರು ಬಿಳಿ ಪ್ಯಾಂಟು, ಶರ್ಟು ಧರಿಸಿ ಟಿಪ್‌ ಟಾಪ್‌ ಆಗಿ ಬಂದಿದ್ದರು. ಮದುವೆಯ ಕೇಂದ್ರ ಬಿಂದುವಾಗಿದ್ದ ಹೆಣ್ಣು ಕತ್ತೆ, ಗಂಡು ಕತ್ತೆ ಸಹ ಕರೆದುಕೊಂಡು ಬರಲಾಗಿತ್ತು.

ಬೇರೇನೋ ಕಾರಣ ಹೇಳಿ ಕರೆದುಕೊಂಡು ಬಂದು ಈಗ ಮದುವೆ ಮಾಡಲು ಹೊರಟಿದ್ದಾರೆಂದು ತಿಳಿದುಕೊಂಡ ಕತ್ತೆ ‘ಮದುವೆ ಬೇಡಪ್ಪಾ ಬೇಡಾ..’ಎಂದು ಓಟಕ್ಕಿತ್ತಿತು. ಮದುವೆಗೆ ಗಂಡೇ ಇರದಿದ್ದರೆ ಕಷ್ಟ ಅಂತ ಒಂದಿಬ್ಬರು ಅದರ ಹಿಂದೆ ಓಡಿ ಹಿಡಿದುಕೊಂಡರು. ಆಗ ಮದುವೆ ಸಹವಾಸವೇ ಬೇಡ ಎಂಬಂತೆ ಕತ್ತೆ ಕೊಸರಿಕೊಳ್ಳತೊಡಗಿತು.

ಕೊನೆಗೆ ‘ನೀನು ಮದುವೆಯಾಗುವವಳು ಬೆಳ್ಳಗೆ ಇದ್ದಾಳೆ, ಮದುವೆ ಮಾಡಿಸುವವರು ವಾಟಾಳ್‌ ಸಾಹೇಬ್ರು’ ಎಂದು ಹೇಳಿ ಸಮಾಧಾನಪಡಿಸಿರಬೇಕು ಅನಿಸುತ್ತೆ. ಆ ಬಳಿಕ ಕೊಸರಾಡಡೆ ಗಂಡು ಕತ್ತೆ ಸುಮ್ಮನಾಯಿತು.

ನಂತರ ಮದುವೆ ನಡೆಯುವ ಸ್ಥಳಕ್ಕೆ ಗಂಡು ಕತ್ತೆಯನ್ನು ಕರೆತರಲಾಯಿತು. ಆದರೆ ಗಂಡು ಕತ್ತೆಯನ್ನು ನೋಡಿದ ತಕ್ಷಣ ಹೆಣ್ಣು ಕತ್ತೆ ಬರಲು ಹಿಂದೇಟು ಹಾಕತೊಡಗಿತು. ಮದುವೆ ಇಷ್ಟವಿಲ್ಲ ಅಂತಾನೋ, ಗಂಡು ಚೆನ್ನಾಗಿಲ್ಲ ಎಂಬ ಕಾರಣವೋ ಗೊತ್ತಾಗಲಿಲ್ಲ. ಮದುವೆ ಸ್ಥಳಕ್ಕೆ ಎಳೆದುಕೊಂಡೇ ಬರೇಬೇಕಾಯಿತು.

ನಂತರ ಶುರುವಾಗಿದ್ದೇ ವಿವಾಹ ಮಹೋತ್ಸವ…ಗಂಡು ಕತ್ತೆ ತಲೆಗೆ ಪೇಟ ಕಟ್ಟಿ, ಮೈಮೇಲೆ ಬಿಳಿ ಪಂಚೆ ಹಾಕಿದರೆ, ಹೆಣ್ಣು ಕತ್ತೆಗೆ ರೇಷ್ಮೆ ಸೀರೆ ಮೈ ಮೇಲೆ ಹಾಕಲಾಯಿತು. ಬಾಸಿಂಗ ಸಹ ಕಟ್ಟಲಾಯಿತು. ನಂತರ ಹೆಣ್ಣು ಮತ್ತು ಗಂಡಿನ ಮಧ್ಯ ಖುರ್ಚಿಯಲ್ಲಿ ಕುಳಿತ ವಾಟಾಳ್‌ ನಾಗರಾಜ ಸಾಹೇಬ್ರು ಸಮ್ಮುಖದಲ್ಲಿ ಶಿಷ್ಯಂದಿರು ಕುಂಕುಮ, ಅರಿಶಿಣ ಹಚ್ಚಿ, ಕುತ್ತಿಗೆಗೆ ಹಾರ ಹಾಕಿಸಿ ಅಲಂಕರಿಸಿದರು. ನಂತರ ಸಂಭ್ರಮದಿಂದ ನೆರೆದಿದ್ದ ಜನರ ಸಮ್ಮುಖದಲ್ಲಿ ತಾಳಿ ಕಟ್ಟುವ ಮೂಲಕ ಮದುವೆ ಕಾರ್ಯ ನಡೆಯಿತು. ಫೋಟೋ, ವಿಡಿಯೋ ಶೂಟ್‌ ಕೂಡಾ ಭರ್ಜರಿಯಾಗಿ ಜರುಗಿತು. ಮದುವೆ ಶಾಸ್ತ್ರ ಮುಗಿದ ನಂತರ ಜನ ತೆರಳಿದರು.

ಮುಂದೆ ನೂತನ ವಧು-ವರ ಎಲ್ಲಿಗೆ ಹೋದರು? ಮುಂದಿನ ಸ್ಥಿತಿ ಏನಾಯಿತು? ಎಂಬುದು ಮಾತ್ರ ಗೊತ್ತಾಗಲಿಲ್ಲ!!!

ಬರಿಗೈಲಿ ಬರ್ಲಿಲ್ಲ ಮಂತ್ರಿ ಮಾಮಾ…!

ರಾಜಕೀಯ ಮಂದಿಗೆ ಜನರು ಸಾಹೇಬ್ರು, ಸಾಹುಕಾರ, ಬಾಸು ಎಂದೆಲ್ಲಾ ಕರೆಯುವುದು ಸಾಮಾನ್ಯ, ಆದರೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಮಧ್ಯಪ್ರದೇಶದ ತವರೂರಲ್ಲಿ ಜನ ಪ್ರೀತಿಯಿಂದ ‘ಮಾಮಾ’ ಎಂದೇ ಕರೆಯುತ್ತಾರಂತೆ.

ಇದನ್ನು ಸ್ವತಃ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪದಲ್ಲಿ ಬಹಿರಂಗಪಡಿಸಿದರು.

‘ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ನಮ್ಮ ಜನ, ಕರ್ನಾಟಕಕ್ಕೆ ಏನು ಉಡುಗೊರೆ ನೀಡುತ್ತೀರಿ ಮಾಮಾ ಎಂದು ಕೇಳಿದ್ದರು. ನನ್ನನ್ನು ನಮ್ಮ ಜನ ಮಾಮಾ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಈ ಮಾಮಾ ಇಲ್ಲಿಗೆ ಬರೀ ಕೈಯಲ್ಲಿ ಬಂದಿಲ್ಲ. ದ್ವಿದಳ ಧಾನ್ಯ ಮಿಷನ್‌ ಅಡಿ ಕೇಂದ್ರ ಸರ್ಕಾರದಿಂದ 191.67 ಕೋಟಿ ರು. ಅನುದಾನ ತಂದಿದ್ದೇನೆ. ಕರ್ನಾಟಕದ ಕೃಷಿ ಇಲಾಖೆಯ ಯಾವ ಯೋಜನೆಗಳಿಗೂ ನಾವು ವಿಳಂಬ ಮಾಡಿಲ್ಲ. ಮನವಿ ಸಲ್ಲಿಸಿದ ಬೇಡಿಕೆಗಳನ್ನೆಲ್ಲ ಈಡೇರಿಸಿದ್ದೇವೆ. ಬೇಕಾದರೆ ನಿಮ್ಮ ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನೇ ಕೇಳಿ. ರೈತರ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ನುಡಿದರು.

ಮಾಮಾ ಇಷ್ಟು ಹೇಳಿದ ಮೇಲೆ ಸಚಿವ ಚಲುವರಾಯಸ್ವಾಮಿ ಅವರು ಸುಮ್ಮನಿರಲು ಸಾಧ್ಯವೇ? ಕೇಂದ್ರ ಸಚಿವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಚೌಹಾಣ್‌ ಸಾಹೇಬ್ರು ನಮಗೆ ಫುಲ್‌ ಸಾಥ್‌ ನೀಡುತ್ತಿದ್ದಾರೆ. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ನಮ್ಮ ರಾಜ್ಯವೇ ಮುಂದಿದೆ. ರಾಜಕೀಯ ಬೇರೆ ಅಭಿವೃದ್ಧಿ, ವಿಷಯವೇ ಬೇರೆ ಎಂದು ಹೊಗಳಿದರು.

ಇಬ್ಬರ ಮಾತು ಕೇಳಿದ ರೈತರು ಕೇಂದ್ರ-ರಾಜ್ಯದ ನಡುವೆ ಏನೆಲ್ಲಾ ತಿಕ್ಕಾಟವಿರಲಿ, ರೈತರ ಕಲ್ಯಾಣಕ್ಕೆ ಚೌಹಾಣ್‌-ಚೆಲುವ ಒಂದಾಗಿದ್ದಾರೆ, ಕೃಷಿ ಇಲಾಖೆಯಲ್ಲಿ ಇಷ್ಟೊಂದು ಸಾಮರಸ್ಯವಿದೆಯಲ್ಲಾ ಎಂದು ಕೊಂಡಾಡಿದರು.

-ಸಿದ್ದು ಚಿಕ್ಕಬಳ್ಳೇಕೆರೆ

-ಸುರೇಶ್‌ ಪಿ



Source link

Leave a Reply

Your email address will not be published. Required fields are marked *