ಬೆಂಗಳೂರಿನಲ್ಲಿ, ಸರ್ಕಾರಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕನೊಬ್ಬ ಗ್ರಾಹಕರ ಲಾಕರ್‌ನಿಂದ ₹4.12 ಕೋಟಿ ಮೌಲ್ಯದ ಚಿನ್ನವನ್ನು ಕದ್ದಿದ್ದಾನೆ. ಈ ಚಿನ್ನವನ್ನು ಅಡವಿಟ್ಟು ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದು, ಸದ್ಯ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

ಬೆಂಗಳೂರು: ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾದ ಕಥೆಯನ್ನು ನೆನಪಿಸುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಒಂದರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ, ಗ್ರಾಹಕರು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದ ₹4.12 ಕೋಟಿ ಮೌಲ್ಯದ 2.783 ಕೆಜಿ ಚಿನ್ನಾಭರಣಗಳನ್ನು ಕದ್ದು, ಅವನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡಮಾನವಿಟ್ಟು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಜೂಜಾಡಿದ್ದಾನೆ. ಇದು ಈಗ ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡುವುದು ಅಥವಾ ಅಡವಿಡುವುದು ಎಷ್ಟು ಸೇಫ್ ಎಂಬ ಪ್ರಶ್ನೆ ಹುಟ್ಟಿಸಿದೆ.

ಸದ್ಯ ಪೊಲೀಸರು ಬ್ಯಾಂಕ್ ಅಧಕಾರಿಯನ್ನು ಬಂಧಿಸಿದ್ದು, ಎಂ.ಎಸ್.ಪಾಳ್ಯ ನಿವಾಸಿ ಇ. ಕಿರಣ್ ಕುಮಾರ್ ಎಂಬ ಆರೋಪಿಯಿಂದ ಸುಮಾರು 700 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಲಾಕರ್‌ನಲ್ಲಿದ್ದ ಚಿನ್ನ ಪಡೆಯಲು ಮಹಿಳೆಯೊಬ್ಬರು ಬಂದ ಸಂದರ್ಭದಲ್ಲಿ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬ್ಯಾಂಕ್‌ನ ವಲಯ ಮುಖ್ಯಸ್ಥ ದಿಲೀಪ್ ಕುಮಾರ್ ನೀಡಿದ ದೂರಿನ ಮೇರೆಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೂಲದ ಕಿರಣ್ ಕುಮಾರ್, ಕುಟುಂಬದೊಂದಿಗೆ ವಿದ್ಯಾರಣ್ಯಪುರದ ಸಮೀಪದ ಎಂ.ಎಸ್.ಪಾಳ್ಯದಲ್ಲಿ ವಾಸವಾಗಿದ್ದ. 2019ರಿಂದ ಇಂಡಿಯನ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಆತ, ಇತ್ತೀಚೆಗೆ ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆನ್‌ಲೈನ್ ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿದ್ದ ಕಿರಣ್, ಮೊದಲಿಗೆ ತನ್ನ ವೇತನ, ಬಳಿಕ ಕುಟುಂಬದ ಆಭರಣಗಳು ಹಾಗೂ ಸ್ನೇಹಿತರಿಂದ ಪಡೆದ ಸಾಲದ ಹಣವನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದಾನೆ. ನಷ್ಟ ಹೆಚ್ಚಾಗುತ್ತಿದ್ದಂತೆ, ಹಣದ ಅವಶ್ಯಕತೆ ಪೂರೈಸಿಕೊಳ್ಳಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ ಗ್ರಾಹಕರ ಲಾಕರ್‌ನ ಚಿನ್ನಕ್ಕೆ ಕೈ ಹಾಕಿದ್ದಾನೆ.

ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಜನವರಿ ಅಂತ್ಯದವರೆಗೆ, ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ಕಳವು ಮಾಡಿರುವ ಕಿರಣ್, ಅವುಗಳನ್ನು ಬೇರೆ ಬೇರೆ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡಮಾನವಿಟ್ಟು ಸುಮಾರು ₹2.5 ಕೋಟಿ ಹಣವನ್ನು ಪಡೆದಿದ್ದಾನೆ. ಈ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಪಣವಿಟ್ಟು ಜೂಜಾಡಿದ್ದಾನೆ. ಈವರೆಗೆ ಆತ ₹5 ಕೋಟಿಗೂ ಹೆಚ್ಚು ಹಣವನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಕಳೆದ ವರ್ಷ ಜೂನ್‌ನಿಂದ ಗಿರಿನಗರ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಬಳಿ ಬ್ಯಾಂಕ್ ಲಾಕರ್‌ಗಳ ಕೀಗಳಿದ್ದವು. ಗ್ರಾಹಕರ ಲಾಕರ್ ತೆರೆಯುವ ಅಧಿಕಾರವೂ ಅವನಿಗಿತ್ತು. ಹಣದ ಅವಶ್ಯಕತೆ ಬಿದ್ದಾಗಲೆಲ್ಲ ಬೆಳಿಗ್ಗೆ ಕಚೇರಿಗೆ ಬೇಗ ಬಂದು ಅಥವಾ ಸಂಜೆ ಸಿಬ್ಬಂದಿ ತೆರಳಿದ ಬಳಿಕ ಲಾಕರ್ ತೆರೆಯುತ್ತಿದ್ದ. ಲಾಕರ್‌ನಲ್ಲಿ ಚಿನ್ನ ಇಡುವ ಮೊದಲು ಗ್ರಾಹಕರಿಂದ ಲೆಕ್ಕ ಪರಿಶೀಲಿಸಿ ಸಹಿ ಪಡೆಯುವ ಜವಾಬ್ದಾರಿಯೂ ಕಿರಣ್‌ದ್ದೇ ಆಗಿದ್ದರಿಂದ, ಯಾವ ಲಾಕರ್‌ನಲ್ಲಿ ಎಷ್ಟು ಚಿನ್ನವಿದೆ ಎಂಬ ಸಂಪೂರ್ಣ ಮಾಹಿತಿ ಅವನಿಗೆ ತಿಳಿದಿತ್ತು. ಹೆಚ್ಚಿನ ಪ್ರಮಾಣದಲ್ಲಿದ್ದ ಚಿನ್ನವನ್ನು ಗ್ರಾಂ ಲೆಕ್ಕದಲ್ಲಿ ಕಳವು ಮಾಡಿ ಅಡಮಾನವಿಟ್ಟು ಹಣ ಪಡೆದು, ಅದನ್ನೇ ಕೆಲವೇ ಗಂಟೆಗಳಲ್ಲಿ ಬೆಟ್ಟಿಂಗ್‌ನಲ್ಲಿ ಕಳೆದುಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಫೆಬ್ರವರಿ 2ರಂದು ಗ್ರಾಹಕಿಯೊಬ್ಬರು ಚಿನ್ನ ಅಡಮಾನ ಸಾಲ ಮರುಪಾವತಿಸಿ ಆಭರಣ ಪಡೆಯಲು ಬ್ಯಾಂಕ್‌ಗೆ ಬಂದಿದ್ದರು. ಲಾಕರ್ ತೆರೆಯುವಾಗ ಕೆಲ ಆಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಆಂತರಿಕ ವಿಚಾರಣೆಯಲ್ಲಿ ಕಿರಣ್ ಮೇಲೆ ಶಂಕೆ ಮೂಡಿದ್ದು, ವಲಯ ಮುಖ್ಯಸ್ಥರು ವಿಚಾರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಗಿರಿನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿರುವ ಸತ್ಯ ಬಯಲಾಗಿದೆ.

ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, “ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಕಳವು ಮಾಡಲಾದ 2.783 ಕೆಜಿ ಚಿನ್ನವನ್ನು ಕಾನೂನು ಪ್ರಕಾರ ವಶಕ್ಕೆ ಪಡೆದು ಬ್ಯಾಂಕ್‌ಗೆ ಹಿಂತಿರುಗಿಸಲಾಗುತ್ತದೆ. ನಂತರ ಬ್ಯಾಂಕ್ ಮೂಲಕ ಸಂಬಂಧಿತ ಗ್ರಾಹಕರಿಗೆ ಆಭರಣಗಳನ್ನು ಹಸ್ತಾಂತರಿಸಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ.

Source link
Bengaluru: ಬ್ಯಾಂಕ್ ಲಾಕರಲ್ಲಿದ್ದ ಚಿನ್ನ ಎಗರಿಸಿ ಬೆಟ್ಟಿಂಗ್ ಆಟ! ₹4 ಕೋಟಿ ಮೌಲ್ಯದ ಆಭರಣ ಕದ್ದ ಮ್ಯಾನೇಜರ್!