
ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕವು 736 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದು, ಇದು ರಣಜಿ ಇತಿಹಾಸದಲ್ಲಿ ತಂಡದ 3ನೇ ಗರಿಷ್ಠ ಸ್ಕೋರ್ ಆಗಿದೆ. ಕರ್ನಾಟಕವು ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಫೈನಲ್‌ಗೆ ಪ್ರವೇಶಿಸುವ ಸನಿಹದಲ್ಲಿದೆ.
ಲಖನೌ: ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಬೃಹತ್ ಗೆಲುವಿನದತ್ತ ದಾಪುಗಾಲಿಟ್ಟಿದೆ. ಮಂಗಳವಾರ ತಂಡ 736 ರನ್ ಕಲೆಹಾಕಿ ಆಲೌಟ್ ಆಯಿತು. ಇದು ರಣಜಿ ಇತಿಹಾಸದಲ್ಲೇ ಕರ್ನಾಟಕದ 3ನೇ ಗರಿಷ್ಠ ಸ್ಕೋರ್.
3ನೇ ದಿನಕ್ಕೆ 121 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಆರ್.ಸ್ಮರಣ್ 135 ರನ್ ಸಿಡಿಸಿ, ತಂಡದ 7ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ಅವರ ಜೊತೆ 7ನೇ ವಿಕೆಟ್‌ಗೆ 109 ರನ್ ಜೊತೆಯಾಟವಾಡಿದ ವಿದ್ಯಾಧರ್ ಪಾಟೀಲ್ 54 ರನ್ ಸಿಡಿಸಿದರು.
ಭಾರೀ ಹಿನ್ನಡೆಯಲ್ಲಿರುವ ಉತ್ತರಖಂಡ
ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಉತ್ತರಾಖಂಡ 3ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿದ್ದು, ಇನ್ನೂ 587 ರನ್ ಹಿನ್ನಡೆಯಲ್ಲಿದೆ. ವಿದ್ಯಾಧರ್ 2 ವಿಕೆಟ್ ಪಡೆದರು. ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಇದ್ದು, ಹೀಗಾದರೆ ಮೊದಲ ಇನ್ನಿಂಗ್ಸ್ ಲೀಡ್ ಪಡೆದ ತಂಡ ಫೈನಲ್‌ಗೇರಲಿದೆ.
ಸ್ಕೋರ್: ಕರ್ನಾಟಕ 736/10 (ಸ್ಮರಣ್ 135, ವಿದ್ಯಾಧರ್ 54, ಆದಿತ್ಯ 4-154), ಉತ್ತರಾಖಂಡ 149/5(3ನೇ ದಿನದಂತ್ಯಕ್ಕೆ) (ಲಕ್ಷ್ಯ 52*, ವಿದ್ಯಾಧರ್ 2-26)
ಕರ್ನಾಟಕದ ಗರಿಷ್ಠ ಮೊತ್ತ
ಸ್ಕೋರ್ ಎದುರಾಳಿ ವರ್ಷ
791/6 ಡಿ. ಬೆಂಗಾಲ್ 1990-91
762/10 ತಮಿಳುನಾಡು 2014-15
736/10 ಉತ್ತರಾಖಂಡ 2025-26
719/9 ಡಿ. ಉತ್ತರಪ್ರದೇಶ 2014-15
716/6 ಡಿ. ತಮಿಳುನಾಡು 1990-91
07ನೇ ಬಾರಿ: ಕರ್ನಾಟಕ ತಂಡ ರಣಜಿಯಲ್ಲಿ 7ನೇ ಬಾರಿ 700+ ರನ್ ಕಲೆಹಾಕಿದೆ. ಈ ಪೈಕಿ ತಮಿಳುನಾಡು ವಿರುದ್ಧವೇ 3 ಬಾರಿ ಸಾಧನೆ ಮಾಡಿದೆ.
ಜಮ್ಮ &ಕಾಶ್ಮೀರ ಫೈನಲ್ ತಲುಪಲು ಬೇಕು 83 ರನ್
ಕಲ್ಯಾಣಿ: ಬೆಂಗಾಲ್ ಹಾಗೂ ಜಮ್ಮು-ಕಾಶ್ಮೀರ ರಣಜಿ ಸೆಮಿಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ 126 ರನ್ ಗುರಿ ಪಡೆದ ಜೆಕೆ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 43 ರನ್ ಗಳಿಸಿದ್ದು, ಇನ್ನೂ 83 ರನ್ ಅಗತ್ಯವಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಬೆಂಗಾಲ್‌ನ 328 ರನ್‌ಗೆ ಉತ್ತರವಾಗಿ ಮಂಗಳವಾರ ಜೆಕೆ 302 ರನ್‌ಗೆ ಆಲೌಟಾಯಿತು. 231ಕ್ಕೆ 8 ವಿಕೆಟ್ ಬಿದ್ದ ಬಳಿಕ ಆಖಿಬ್ ನಬಿ(42), ಯುಧ್‌ವೀರ್(33) ಹೋರಾಡಿದರು. ಆದರೆ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ಸಿಗಲಿಲ್ಲ. ಮಾರಕ ದಾಳಿ ನಡೆಸಿದ ಮೊಹಮ್ಮದ್ ಶಮಿ 8 ವಿಕೆಟ್ ಪಡೆದರು. ಬಳಿಕ 2ನೇ ಇನ್ನಿಂಗ್ಸ್ ಆಡಿದ ಬೆಂಗಾಲ್ ಕೇವಲ 99 ರನ್‌ಗೆ ಆಲೌಟಾಯಿತು. ಆಖಿಬ್ ನಬಿ 4, ಸುನಿಲ್ ಕುಮಾರ್ 4 ವಿಕೆಟ್ ಪಡೆದರು. ಸದ್ಯ ಜೆಕೆ ಪರ ಶುಭಂ(23), ವನ್ಶರಾಜ್(9) ಹೋರಾಡುತ್ತಿದ್ದಾರೆ.