
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೂ, ಅನೇಕರು ದೈಹಿಕ ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ. ಈ ಲೇಖನವು ದೈಹಿಕ ಪರೀಕ್ಷೆಯಾದ ET ಮತ್ತು PST ಗೆ ಬೇಕಾದ ಸಮಗ್ರ ಸಿದ್ಧತೆ, ಆಹಾರ ಕ್ರಮ, ವ್ಯಾಯಾಮ ಮತ್ತು ಮಾನಸಿಕ ದೃಢತೆಯ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುವುದು ಸಾವಿರಾರು ಯುವಕರ ಕನಸು. ಪರೀಕ್ಷಾ ಕೇಂದ್ರಗಳಲ್ಲಿ ಪುಸ್ತಕ ಹಿಡಿದು ಹಗಲಿರುಳು ಕಷ್ಟಪಟ್ಟು 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ, ಲಿಖಿತ ಪರೀಕ್ಷೆಯ ಲಿಸ್ಟ್‌ನಲ್ಲಿ ಮೊದಲ ಸಾಲಿನಲ್ಲಿ ನಿಂತ ಎಷ್ಟೋ ಅಭ್ಯರ್ಥಿಗಳನ್ನು ನಾನು ನೋಡಿದ್ದೇನೆ. ಆದರೆ, ದುರದೃಷ್ಟವಶಾತ್ ಅದೇ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯ ಮೈದಾನದಲ್ಲಿ ಕೇವಲ ಎರಡೇ ಸೆಕೆಂಡುಗಳ ಅಂತರದಲ್ಲಿ ಅಥವಾ ಎತ್ತರ ಜಿಗಿತದ ಒಂದು ಸಣ್ಣ ತಪ್ಪಿನಿಂದ ಅನರ್ಹರಾದಾಗ ಅವರ ಕಣ್ಣಲ್ಲಿ ಹರಿಯುವ ಕಣ್ಣೀರು ಯಾರಿಗೂ ಬೇಡ.
ಆ ಸಮಯದಲ್ಲಿ ಅವರ ದುಃಖ ಕೇವಲ ಒಂದು ಹುದ್ದೆ ತಪ್ಪಿದ್ದಕ್ಕಲ್ಲ, ಬದಲಾಗಿ ಅವರು ವರ್ಷವಿಡೀ ಕಂಡ ಕನಸು, ಅವರ ತಂದೆ-ತಾಯಿಯ ಆಸೆಗಳು ಆ ಮೈದಾನದ ಧೂಳಿನಲ್ಲಿ ಮಣ್ಣಾದವಲ್ಲ ಎಂಬ ವೇದನೆ ಅವರದ್ದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳ ಮುಂದೆ ನಿಲ್ಲುವ ದೊಡ್ಡ ಸವಾಲೆಂದರೆ ದೈಹಿಕ ಪರೀಕ್ಷೆ (PST & ET). ಅನೇಕ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಅದ್ಭುತ ಅಂಕಗಳನ್ನು ಗಳಿಸಿದರೂ, ಸರಿಯಾದ ದೈಹಿಕ ಸಿದ್ಧತೆ ಇಲ್ಲದೆ ದೈಹಿಕ ಪರೀಕ್ಷೆಯಲ್ಲಿ ವಿಫಲರಾಗುತ್ತಾರೆ.
ದೈಹಿಕ ಪರೀಕ್ಷೆ ಎಂಬುದು ಕೇವಲ ಓಟವಲ್ಲ
1)ದೈಹಿಕ ಅರ್ಹತೆ ಮತ್ತು ಪರೀಕ್ಷೆಯ ಸ್ವರೂಪ ತಿಳಿಯಿರಿ:
ಮೊದಲನೆಯದಾಗಿ ನೀವು ಯಾವ ಪರೀಕ್ಷೆಗೆ ಸಿದ್ಧರಾಗುತ್ತಿದ್ದೀರಿ ಎಂಬ ಸ್ಪಷ್ಟತೆ ಇರಲಿ. ಕರ್ನಾಟಕ ಪೊಲೀಸ್ ನೇಮಕಾತಿಯಲ್ಲಿ ಎರಡು ಹಂತದ ದೈಹಿಕ ಪರೀಕ್ಷೆಗಳಿರುತ್ತವೆ, ದೈಹಿಕ ಸಹಿಷ್ಣುತೆ ಪರೀಕ್ಷೆ (ET) ಮತ್ತು ದೈಹಿಕ ಪ್ರಮಾಣಿತ ಪರೀಕ್ಷೆ (PST). ಪುರುಷ ಅಭ್ಯರ್ಥಿಗಳಿಗೆ 1600 ಮೀಟರ್ ಓಟ (6.30 ನಿಮಿಷಗಳಲ್ಲಿ), ಎತ್ತರ ಜಿಗಿತ ಅಥವಾ ಉದ್ದ ಜಿಗಿತ, ಮತ್ತು ಗುಂಡು ಎಸೆತ ಇರುತ್ತದೆ.
ಮಹಿಳಾ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 400 ಮೀಟರ್ ಓಟ (2 ನಿಮಿಷಗಳಲ್ಲಿ), ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಮತ್ತು ಗುಂಡು ಎಸೆತ ಇರುತ್ತದೆ. ದೈಹಿಕ ಪ್ರಮಾಣಿತ ಪರೀಕ್ಷೆಯಲ್ಲಿ ಪುರುಷರಿಗೆ ಕನಿಷ್ಠ 168 ಸೆಂ.ಮೀ ಎತ್ತರ ಮತ್ತು ಎದೆಯ ಸುತ್ತಳತೆ (ವಿಸ್ತರಿಸಿದಾಗ 5 ಸೆಂ.ಮೀ ಹೆಚ್ಚಾಗಬೇಕು) ಮುಖ್ಯವಾಗಿರುತ್ತದೆ. ಮಹಿಳೆಯರಿಗೆ 157 ಸೆಂ.ಮೀ ಎತ್ತರ ಮತ್ತು ಕನಿಷ್ಠ 45 ಕೆಜಿ ತೂಕ ಕಡ್ಡಾಯ. ಈ ಮಾನದಂಡಗಳನ್ನು ಮೊದಲು ಪರೀಕ್ಷಿಸಿಕೊಳ್ಳುವುದು ನಿಮ್ಮ ಸಿದ್ಧತೆಯ ಮೊದಲ ಹೆಜ್ಜೆ.
2)ದೈನಂದಿನ ಅಭ್ಯಾಸದ ವೇಳಾಪಟ್ಟಿ: ಶಿಸ್ತುಬದ್ಧ ಜೀವನ ಶೈಲಿ
ದೈಹಿಕ ಸಿದ್ಧತೆ ಎಂಬುದು ಒಂದೇ ದಿನದಲ್ಲಿ ಬರುವುದಿಲ್ಲ. ಇದಕ್ಕೆ ಕನಿಷ್ಠ 2 ರಿಂದ 3 ತಿಂಗಳ ನಿರಂತರ ಅಭ್ಯಾಸದ ಅಗತ್ಯವಿದೆ. ನಿಮ್ಮ ದಿನವು ಬೆಳಗ್ಗೆ 5 ಗಂಟೆಗೆ ಆರಂಭವಾಗಲಿ. ನೇರವಾಗಿ ಓಡಲು ಆರಂಭಿಸುವ ಮೊದಲು 10-15 ನಿಮಿಷಗಳ ಕಾಲ ”ವಾರ್ಮ್-ಅಪ್” (Warm-up) ಮಾಡುವುದು ಕಡ್ಡಾಯ. ಇದು ಸ್ನಾಯುಗಳ ಸೆಳೆತವನ್ನು ತಡೆಯುತ್ತದೆ. ಆರಂಭದ ದಿನಗಳಲ್ಲಿ ಸುದೀರ್ಘ ನಡಿಗೆ ಮತ್ತು ನಿಧಾನಗತಿಯ ಓಟದ (Jogging) ಮೂಲಕ ಸ್ಟಾಮಿನಾ ಹೆಚ್ಚಿಸಿಕೊಳ್ಳಿ.
ಒಮ್ಮೆ ನಿಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾದ ನಂತರ, ವಾರಕ್ಕೆ ಎರಡು ಬಾರಿ ಟೈಮರ್ ಇಟ್ಟುಕೊಂಡು 1600 ಮೀಟರ್ ಓಟದ ತಾಲೀಮು ನಡೆಸಿ. ಕೇವಲ ಓಟವಷ್ಟೇ ಅಲ್ಲದೆ, ಪುಷ್-ಅಪ್ಸ್, ಪುಲ್-ಅಪ್ಸ್ ಮತ್ತು ಸ್ಕ್ವಾಟ್ಸ್ ಮಾಡುವುದರಿಂದ ಕಾಲು ಮತ್ತು ಎದೆಯ ಸ್ನಾಯುಗಳು ಬಲಗೊಳ್ಳುತ್ತವೆ. ಸಂಜೆ ಹೊತ್ತು ಲಘು ವ್ಯಾಯಾಮ ಅಥವಾ ಯೋಗ ಮಾಡುವುದು ದೇಹದ ನಮ್ಯತೆಯನ್ನು (Flexibility) ಕಾಪಾಡುತ್ತದೆ.
3)ಆಹಾರ ಮತ್ತು ಪೌಷ್ಟಿಕಾಂಶ: ದೇಹಕ್ಕೆ ಇಂಧನ ತುಂಬಿ
ನೀವು ಎಷ್ಟು ಕಷ್ಟಪಟ್ಟು ವ್ಯಾಯಾಮ ಮಾಡುತ್ತೀರೋ ಅಷ್ಟೇ ಸಮರ್ಪಕವಾದ ಆಹಾರವನ್ನು ಸೇವಿಸುವುದು ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಅತಿಯಾದ ಸಿಹಿಯನ್ನು ಸಂಪೂರ್ಣವಾಗಿ ತ್ಯಜಿಸಿ. ನಿಮ್ಮ ಆಹಾರದಲ್ಲಿ ಪ್ರೋಟೀನ್ (Protein) ಅಂಶ ಹೆಚ್ಚಿರಲಿ. ನೆನೆಸಿದ ಕಡಲೆಕಾಲು, ಹೆಸರುಕಾಳು, ಸೋಯಾಬೀನ್, ಮೊಟ್ಟೆ, ಹಾಲು ಮತ್ತು ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಿಕೊಳ್ಳಿ.
ಓಟದ ಅಭ್ಯಾಸ ಮಾಡುವಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ದಿನಕ್ಕೆ ಕನಿಷ್ಠ 4-5 ಲೀಟರ್ ನೀರು ಕುಡಿಯಿರಿ. ಎದೆಯ ಸುತ್ತಳತೆ ಕಡಿಮೆ ಇರುವವರು ಬಾಳೆಹಣ್ಣು ಮತ್ತು ಹಾಲಿನ ಸೇವನೆ ಮಾಡುವುದರ ಜೊತೆಗೆ ”ಚೆಸ್ಟ್ ವರ್ಕೌಟ್” ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನೆನಪಿಡಿ, ಸರಿಯಾದ ಆಹಾರವಿಲ್ಲದ ಸಿದ್ಧತೆಯು ದೇಹವನ್ನು ಸುಸ್ತಾಗಿಸುವುದೇ ಹೊರತು ಶಕ್ತಿಯನ್ನಲ್ಲ.
4)ನಿದ್ರೆ ಮತ್ತು ವಿಶ್ರಾಂತಿ: ಸ್ನಾಯುಗಳ ಚೇತರಿಕೆಗೆ ಸಮಯ ಕೊಡಿ
ಅನೇಕ ಅಭ್ಯರ್ಥಿಗಳು ಮಾಡುವ ದೊಡ್ಡ ತಪ್ಪು ಎಂದರೆ ದಿನವಿಡೀ ಅತಿಯಾಗಿ ವ್ಯಾಯಾಮ ಮಾಡುವುದು. ಇದು ಗಾಯಗಳಿಗೆ (Injuries) ಕಾರಣವಾಗಬಹುದು. ವ್ಯಾಯಾಮದಷ್ಟೇ ಮುಖ್ಯವಾದುದು ವಿಶ್ರಾಂತಿ. ಪ್ರತಿದಿನ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಆಳವಾದ ನಿದ್ರೆ ಅತ್ಯಗತ್ಯ. ನಿದ್ರೆಯ ಸಮಯದಲ್ಲಿ ನಮ್ಮ ಸ್ನಾಯುಗಳು ರಿಪೇರಿ ಆಗುತ್ತವೆ ಮತ್ತು ಮೆದುಳು ಮುಂದಿನ ದಿನದ ಸವಾಲಿಗೆ ಸಿದ್ಧವಾಗುತ್ತದೆ. ವಾರಕ್ಕೆ ಒಂದು ದಿನ (ಸಾಮಾನ್ಯವಾಗಿ ಭಾನುವಾರ) ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ. ಒಂದು ವೇಳೆ ಅಭ್ಯಾಸದ ವೇಳೆ ತೀವ್ರವಾದ ನೋವು ಕಾಣಿಸಿಕೊಂಡರೆ ಹಠ ಮಾಡದೆ ವೈದ್ಯರ ಸಲಹೆ ಪಡೆಯಿರಿ. ಪರೀಕ್ಷೆಯ ದಿನದವರೆಗೂ ನಿಮ್ಮ ದೇಹವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಒಂದು ಕಲೆಯಾಗಿದೆ.
5)ವೈದ್ಯಕೀಯ ಪರೀಕ್ಷೆಯ ಪೂರ್ವಸಿದ್ಧತೆ
ದೈಹಿಕ ಪರೀಕ್ಷೆಯ ನಂತರ ವೈದ್ಯಕೀಯ ಪರೀಕ್ಷೆ (Medical Test) ಇರುತ್ತದೆ. ಇದರಲ್ಲಿ ದೃಷ್ಟಿ ದೋಷ (Color Blindness), ಶ್ರವಣ ದೋಷ, ಮೊಣಕಾಲು ತಾಗುವುದು (Knock Knees), ಪಾದದ ರಚನೆ (Flat Foot), ಮತ್ತು ವಿಕಾರವಾದ ನರಗಳು (Varicose Veins) ಮುಂತಾದವುಗಳನ್ನು ಪರೀಕ್ಷಿಸಲಾಗುತ್ತದೆ. ಅಭ್ಯಾಸ ಆರಂಭಿಸುವ ಮುನ್ನವೇ ಒಮ್ಮೆ ಸಾಮಾನ್ಯ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ನಿಮ್ಮ ತೂಕ ಹೆಚ್ಚಿದ್ದರೆ ಅಥವಾ ಕಡಿಮೆಯಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸಮಯವಿರುತ್ತದೆ. ದೃಷ್ಟಿ ದೋಷವಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ. ಪರೀಕ್ಷೆಯ ದಿನದಂದು ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ಸ್ಟಿರಾಯ್ಡ್‌ಗಳ ಮೊರೆ ಹೋಗಬೇಡಿ
6)ಮಾನಸಿಕ ಸಿದ್ಧತೆ: ಗೆಲ್ಲಲೇಬೇಕೆಂಬ ಹಠವಿರಲಿ
ದೈಹಿಕ ಪರೀಕ್ಷೆಯು ದೇಹಕ್ಕಿಂತ ಹೆಚ್ಚಾಗಿ ಮನಸ್ಸಿನ ಆಟ. 1600 ಮೀಟರ್ ಓಡುವಾಗ ಕೊನೆಯ 400 ಮೀಟರ್‌ಗಳಲ್ಲಿ ಶ್ವಾಸ ಕಟ್ಟಿದಂತಾಗುತ್ತದೆ, ಕಾಲುಗಳು ಭಾರವೆನಿಸುತ್ತವೆ. ಆಗ ನಿಮ್ಮ ಮನಸ್ಸು “ನಿಲ್ಲಿಸು” ಎಂದು ಹೇಳುತ್ತದೆ. ಅಂತಹ ಕ್ಷಣದಲ್ಲಿ ನಿಮ್ಮ ತಂದೆ-ತಾಯಿಯ ಮುಖ ಮತ್ತು ನಿಮ್ಮ ಕನಸಿನ ಖಾಕಿ ಸಮವಸ್ತ್ರವನ್ನು ನೆನಪಿಸಿಕೊಳ್ಳಿ. ಮಾನಸಿಕವಾಗಿ ದೃಢವಾಗಿರುವ ಅಭ್ಯರ್ಥಿ ಮಾತ್ರ ಆ ಅಂತಿಮ ಗೆರೆಯನ್ನು ದಾಟಬಲ್ಲ. ಪ್ರತಿದಿನ ಓಡುವಾಗ ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ. “ಇಂದು ನಾನು 5 ನಿಮಿಷ ಹೆಚ್ಚಿಗೆ ಓಡುತ್ತೇನೆ” ಎಂಬ ಛಲವಿರಲಿ. ಪರೀಕ್ಷಾ ಮೈದಾನದಲ್ಲಿ ನೂರಾರು ಅಭ್ಯರ್ಥಿಗಳ ಮುಂದೆ ಗಾಬರಿಯಾಗಬೇಡಿ. ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ.
7) ಪರೀಕ್ಷಾ ದಿನದ ಕಾರ್ಯತಂತ್ರ
ದೈಹಿಕ ಪರೀಕ್ಷೆಯ ದಿನ ಸರಿಯಾದ ಸಮಯಕ್ಕೆ ಮೈದಾನಕ್ಕೆ ತಲುಪಿ. ಹಗುರವಾದ ಮತ್ತು ಆರಾಮದಾಯಕವಾದ ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ. ಓಡುವ ಮೊದಲು ಅತಿಯಾದ ಆಹಾರ ಸೇವಿಸಬೇಡಿ. ನಿಮ್ಮ ಜೊತೆಯಲ್ಲಿ ಗ್ಲುಕೋಸ್ ಅಥವಾ ಎಲೆಕ್ಟ್ರೋಲ್ ನೀರನ್ನು ಇಟ್ಟುಕೊಳ್ಳಿ. ಲಾಂಗ್ ಜಂಪ್ ಅಥವಾ ಹೈ ಜಂಪ್ ಮಾಡುವಾಗ ಸರಿಯಾದ ತಂತ್ರವನ್ನು (Technique) ಬಳಸಿ, ಕೇವಲ ಬಲವನ್ನಲ್ಲ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಲು ಪ್ರಯತ್ನಿಸಿ, ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಓಟದಲ್ಲಿ ಸ್ವಲ್ಪ ಹಿಂದುಳಿದರೂ ಹತಾಶರಾಗದೆ ಅಂತಿಮ ಕ್ಷಣದವರೆಗೆ ವೇಗವನ್ನು ಕಾಯ್ದುಕೊಳ್ಳಿ.
8)ಕನಸು ಕಮರಿ ಹೋಗದಿರಲಿ
ವಿದ್ಯಾರ್ಥಿಗಳೇ ನೆನಪಿಡಿ, ನಾನು ಓದಿನಲ್ಲಿ ಶಾಣ್ಯಾ ಇದ್ದೇನೆ, ಫಿಸಿಕಲ್ ಆಮೇಲೆ ನೋಡಿಕೊಂಡರಾಯಿತು ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಲಿಖಿತ ಪರೀಕ್ಷೆಯಲ್ಲಿ ನೀವು ಗಳಿಸುವ ಅಂಕಗಳು ನಿಮಗೆ ಅರ್ಹತೆ ನೀಡಬಹುದು, ಆದರೆ ನಿಮ್ಮ ಮೈಮೇಲೆ ಆ ‘ಖಾಕಿ’ ಸಮವಸ್ತ್ರವನ್ನು ತೊಡಿಸುವುದು ನಿಮ್ಮ ಕಾಲುಗಳ ಶಕ್ತಿ ಮತ್ತು ಎದೆಯ ದೃಢತೆ ಮಾತ್ರ. ನಿಮ್ಮ ಲೇಖನಿ ಎಷ್ಟು ವೇಗವಾಗಿ ಚಲಿಸುತ್ತದೆಯೋ, ನಿಮ್ಮ ಕಾಲುಗಳೂ ಅಷ್ಟೇ ವೇಗವಾಗಿ ಮೈದಾನದಲ್ಲಿ ಓಡಬೇಕು. ಪರೀಕ್ಷೆ ಮುಗಿದ ನಂತರ ಪಶ್ಚಾತ್ತಾಪ ಪಡುವುದಕ್ಕಿಂತ, ಈಗಲೇ ಬೆವರು ಸುರಿಸುವುದು ಉತ್ತಮ. ಆ ಎರಡು ಸೆಕೆಂಡುಗಳ ನೋವು ಜೀವನಪರ್ಯಂತ ನಿಮ್ಮನ್ನು ಕಾಡದಂತೆ ನೋಡಿಕೊಳ್ಳಿ. ನಿಮ್ಮ ಕನಸು ಮೈದಾನದ ಮಣ್ಣಲ್ಲಿ ಕಮರಿ ಹೋಗಬಾರದು ಎಂದರೆ, ಪುಸ್ತಕದ ಜೊತೆಗೆ ಮೈದಾನದೊಂದಿಗೂ ನಿಮ್ಮ ಸ್ನೇಹ ಅಷ್ಟೇ ಗಾಢವಾಗಿರಲಿ.