ಆರೋಪಿಗಳಾದ ಸಿದ್ಧೀಕ್ ಹಾಗೂ ನಾಗಲಕ್ಷ್ಮೀಚಿತ್ರದ ಕ್ರೆಡಿಟ್ ಮೂಲ: tv9
ಹಾಸನ, ಫೆಬ್ರವರಿ 18: ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ (ಹನಿ ಟ್ರ್ಯಾಪ್) ಮೂಲಕ ಹಣ ವಸೂಲಿ ಮಾಡುತ್ತಿರುವ ಖತರ್ನಾಕ್ ಗ್ಯಾಂಗೊಂದನ್ನು ಹಾಸನದ (ಹಾಸನ) ಹೊಳೆನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆ ನಾಗಲಕ್ಷ್ಮೀ, ಆಕೆಯ ಪತಿ ಸಿದ್ಧೀಕ್ ಹಾಗೂ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಧರ್ಮರಾಜು ಅಲಿಯಾಸ್ ಫಣಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಡ ಹಾಗೂ ಅಸಹಾಯಕ ಮಹಿಳೆಯರನ್ನು ಮುಂದಿಟ್ಟುಕೊಂಡು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಆರೋಪ ಇವರ ಮೇಲಿದ್ದು, ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯ ಪರಿಚಯಸ್ಥನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸಲು ಬಲವಂತ
ಫೆಬ್ರವರಿ 13 ರಂದು ಸಂತ್ರಸ್ತ ಮಹಿಳೆಯ ಮನೆಗೆ ಪರಿಚಯಸ್ಥ ವ್ಯಕ್ತಿಯೊಬ್ಬರು ಬಂದಿದ್ದರು. ಆ ವೇಳೆ, ಮತ್ತೊಬ್ಬ ಮಹಿಳೆ ಆತ ಸಂತ್ರಸ್ತ ಜೊತೆ ಇರುವ ಫೋಟೋ ತೆಗೆದು ನಾಗಲಕ್ಷ್ಮಿಗೆ ಕಳುಹಿಸಿದ್ದಳು. ನಂತರ ಈ ವಿಚಾರವನ್ನು ನೆಪ ಮಾಡಿಕೊಂಡ ನಾಗಲಕ್ಷ್ಮೀ ಮತ್ತು ಆಕೆಯ ತಂಡ ಮನೆಗೆ ಬಂದು, ಪರಿಚಯಸ್ಥನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಹಿಳೆಗೆ ಮನವಿ ಮಾಡಲಾಗಿತ್ತು.
ಬಲವಂತವಾಗಿ ಖಾಸಗಿ ಅಂಗಾಂಗ ಮುಟ್ಟಿ ತಪಾಸಣೆ
ರೇಪ್ ಕೇಸ್ ದಾಖಲಿಸಲು ಮಹಿಳೆ ಒಪ್ಪದ, ಹೊಳೆನರಸೀಪುರದಲ್ಲೇ ಲ್ಯಾಬ್ ನಡೆಸುತ್ತಿದ್ದ ಫಣಿಯನ್ನು ಆರೋಪಿಗಳು ಮನೆಗೆ ಕರೆಸಿಕೊಂಡಿದ್ದಾರೆ. ಆತ ಬಲವಂತವಾಗಿ ಸಂತ್ರಸ್ತೆಯ ಖಾಸಗಿ ಅಂಗಾಂಗಗಳನ್ನು ಮುಟ್ಟುತ್ತಾ ಮೆಡಿಕಲ್ ಪರೀಕ್ಷೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ, ‘ನನ್ನ ವಿರುದ್ಧ ಸಾಕ್ಷ್ಯವಿದೆ, ಪ್ರಕರಣ ಕೊಡದಿದ್ದರೆ ಗಂಡನಿಗೆ ವಿಷಯ ಹೇಳುತ್ತೇವೆ’ ಎಂದು ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದಾರೆ.
ಸಾಂತ್ವನ ಕೇಂದ್ರಕ್ಕೆ ಕಳುಹಿಸಿದಾಗ ರಟ್ಟಾಯ್ತು ಗುಟ್ಟು
ಫೆಬ್ರವರಿ 15 ರಂದು ಸಂತ್ರಸ್ತ ಆರೋಪಿಗಳು ಬಲವಂತವಾಗಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಆದರೂ ಮಹಿಳೆ ದೂರು ನೀಡಲು ಹಿಂದೇಟು ಹಾಕಿ ಕಣ್ಣೀರಿಟ್ಟಿದ್ದಳು. ಅನುಮಾನಗೊಂಡ ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ದಂಧೆ ಸಂಪೂರ್ಣವಾಗಿ ಬಯಲಾಗಿದ್ದರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅರೆಕಾಲಿಕ ಉಪನ್ಯಾಸಕಿಯೇ ಕಿಂಗ್ ಪಿನ್!
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಾಗಲಕ್ಷ್ಮೀ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದು, ಈ ಹಿಂದೆ ಹಲವು ಪ್ರಕರಣಗಳಲ್ಲಿ ಆಕೆಯ ಹೆಸರು ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. ನಾಗಲಕ್ಷ್ಮೀ ಮತ್ತು ತಂಡ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ದಂಧೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪತಿ ಅಂದ್ರೆ ಒಲ್ಲೆ, ಪ್ರಿಯಕರನ ಜೊತೆ ಲಲ್ಲೆ! ಗಂಡನಿಂದ ದೂರವಾಗಲು ಅತ್ಯಾಚಾರದ ರೀತಿ ಕಥೆ ಕಟ್ಟಿದ್ದ ಖತರ್ನಾಕ್ ಲೇಡಿ
ಸದ್ಯ ಹೊಳೆನರಸೀಪುರ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ, ಇನ್ನೂ ಹೆಚ್ಚಿನ ಮಹಿಳೆಯರು ದೂರು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ