Epstein Row: ಎಪ್‌ಸ್ಟೀನ್‌ ವಿವಾದ: ಸಿಬಲ್, ಪಿತ್ರೋಡಾ ಹೆಸರು ಎಳೆದು ತಂದ ಬಿಜೆಪಿ, ರಾಹುಲ್ ಗಾಂಧಿಗೆ ನೇರ ಪ್ರಶ್ನೆ | Bjp Accuses Congress Leaders Of Links To Jeffrey Epstein Rahul Gandhi Questioned

Epstein Row: ಎಪ್‌ಸ್ಟೀನ್‌ ವಿವಾದ: ಸಿಬಲ್, ಪಿತ್ರೋಡಾ ಹೆಸರು ಎಳೆದು ತಂದ ಬಿಜೆಪಿ, ರಾಹುಲ್ ಗಾಂಧಿಗೆ ನೇರ ಪ್ರಶ್ನೆ | Bjp Accuses Congress Leaders Of Links To Jeffrey Epstein Rahul Gandhi Questioned


ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಹಣ ನೀಡಿದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಪಿಲ್ ಸಿಬಲ್ ಪ್ರಶಸ್ತಿ ಸ್ವೀಕರಿಸಿದ್ದೇಕೆ ಎಂದು ಬಿಜೆಪಿ, ರಾಹುಲ್ ಗಾಂಧಿಯನ್ನು ಪ್ರಶ್ನಿಸಿದೆ. ಆದರೆ, ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದ್ದು, ಅದೊಂದು ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಎಪ್‌ಸ್ಟೀನ್‌ ನಂಟಿನ ಬಗ್ಗೆ ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಹಣ ನೀಡಿದ ಕಾರ್ಯಕ್ರಮದಲ್ಲಿ ನಿಮ್ಮ ಸಚಿವ ಕಪಿಲ್ ಸಿಬಲ್ ಯಾಕೆ ಪ್ರಶಸ್ತಿ ಸ್ವೀಕರಿಸಿದ್ದರು? ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಬುಧವಾರ ಆಗ್ರಹಿಸಿದ್ದಾರೆ. ANI ಸುದ್ದಿ ಸಂಸ್ಥೆಯೊಂದಿಗೆ ಅವರು ಮಾತನಾಡಿದರು.

ಗಾಂಧಿ ಕುಟುಂಬದ ಆಪ್ತರಾದ, ಕಾಂಗ್ರೆಸ್‌ನ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಕೂಡ ಇದೇ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದರು. ಗಾಂಧಿ-ವಾದ್ರಾ ಕುಟುಂಬಕ್ಕೂ ಜೆಫ್ರಿ ಎಪ್‌ಸ್ಟೀನ್‌ಗೂ ಏನು ಸಂಬಂಧ? ಸರ್ಕಾರದಲ್ಲಿದ್ದಾಗ ಕಪಿಲ್ ಸಿಬಲ್ ಆ ಪ್ರಶಸ್ತಿಯನ್ನು ಯಾಕೆ ಒಪ್ಪಿಕೊಂಡರು? ಎಂದು ಭಂಡಾರಿ ಪ್ರಶ್ನಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ನೀತಿಗಳಲ್ಲಿ ಹಲವು ಬದಲಾವಣೆಗಳಾಗಿದ್ದವು. ಹಾಗಾದರೆ, ಜೆಫ್ರಿ ಎಪ್‌ಸ್ಟೀನ್‌ ಪರವಾಗಿ ಕಪಿಲ್ ಸಿಬಲ್ ಲಾಬಿ ನಡೆಸುತ್ತಿದ್ದರಾ? ಗಾಂಧಿ-ವಾದ್ರಾ ಕುಟುಂಬಕ್ಕೆ ಎಪ್‌ಸ್ಟೀನ್‌ನನ್ನು ಭೇಟಿ ಮಾಡಿಸುವ ಕೆಲಸವನ್ನು ಸ್ಯಾಮ್ ಪಿತ್ರೋಡಾ ಮಾಡುತ್ತಿದ್ದರಾ? ಈ ಬಗ್ಗೆ ಗಾಂಧಿ ಕುಟುಂಬದ ಮೌನವೇ ಎಲ್ಲವನ್ನೂ ಹೇಳುತ್ತಿದೆ’ ಎಂದು ಭಂಡಾರಿ ಗಂಭೀರ ಆರೋಪ ಮಾಡಿದ್ದಾರೆ.

ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಯಲ್ಲಿ ಸಿಬಲ್ ಹೆಸರು ಉಲ್ಲೇಖವಾದಾಗಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಈ ಹಿಂದೆ ಭಂಡಾರಿ, 2010ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ‘ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಎಜುಕೇಶನ್’ (IIE) ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ’ದ ದಾಖಲೆಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಎಪ್‌ಸ್ಟೀನ್ ಹಣಕಾಸು ನೆರವು ನೀಡಿದ್ದ ಎಂದು ಅವರು ಆರೋಪಿಸಿದ್ದರು. ‘ಇದೆಲ್ಲಾ ಕಾಕತಾಳೀಯವೇ ಅಥವಾ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳ ಮೇಲೆ ಎಪ್‌ಸ್ಟೀನ್‌ನ ಬಾಹ್ಯ ಪ್ರಭಾವವಿತ್ತೇ? ರಾಹುಲ್ ಗಾಂಧಿ ಉತ್ತರಿಸಬೇಕು!’ ಎಂದು ಅವರು ಆಗ್ರಹಿಸಿದ್ದರು. ‘ಎಪ್‌ಸ್ಟೀನ್ — ಕಾಂಗ್ರೆಸ್ ಸರ್ಕಾರದ ವ್ಯಾಲೆಂಟೈನ್!’ ಎಂದೂ ಬರೆದುಕೊಂಡಿದ್ದರು. 2022ರಲ್ಲಿ ಕಾಂಗ್ರೆಸ್ ತೊರೆದಿದ್ದ ಸಿಬಲ್, ಸದ್ಯ ರಾಜ್ಯಸಭೆಯ ಸ್ವತಂತ್ರ ಸದಸ್ಯರಾಗಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿದ ಕಾಂಗ್ರೆಸ್

ಆದರೆ, ಕಾಂಗ್ರೆಸ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಇವು ದಾರಿ ತಪ್ಪಿಸುವ ಯತ್ನ ಎಂದು ಹೇಳಿದೆ.

ಅದು ಎಪ್‌ಸ್ಟೀನ್‌ ಅತಿಥಿ ಪಟ್ಟಿಯಲ್ಲ, ಸಾರ್ವಜನಿಕ ಕ್ಯಾಲೆಂಡರ್

ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಬಿಜೆಪಿ ಉಲ್ಲೇಖಿಸುತ್ತಿರುವ 59 ಪುಟಗಳ ದಾಖಲೆಯು ‘ಪ್ರಮುಖ ಕಾರ್ಯಕ್ರಮಗಳು, ಉದ್ಘಾಟನೆಗಳು ಮತ್ತು ನಿಧಿ ಸಂಗ್ರಹಣೆಗಳ ಕ್ಯಾಲೆಂಡರ್’ ಆಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಗಳ ಪಟ್ಟಿಯಿದು. ಎಪ್‌ಸ್ಟೀನ್ ಈ ಕಾರ್ಯಕ್ರಮಗಳ ಮೇಲೆ ಕಣ್ಣಿಟ್ಟಿರಬಹುದು, ಅಷ್ಟೇ’ ಎಂದು ಖೇರಾ ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, 2010ರಲ್ಲಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಕಪಿಲ್ ಸಿಬಲ್, ‘IIE’ ಕಾರ್ಯಕ್ರಮದಲ್ಲಿ ‘ಸ್ಟೀಫನ್ ಪಿ. ಡಗ್ಗನ್ ಪ್ರಶಸ್ತಿ’ ಸ್ವೀಕರಿಸಿದ್ದರು. ಈ ವಿಷಯ 55ನೇ ಪುಟದಲ್ಲಿ ಉಲ್ಲೇಖವಾಗಿದೆ. ಈ ಕಾರ್ಯಕ್ರಮಕ್ಕೂ ಎಪ್‌ಸ್ಟೀನ್‌ಗೂ ಯಾವುದೇ ಸಂಬಂಧವಿಲ್ಲ. ಸಿಬಲ್, ಎಪ್‌ಸ್ಟೀನ್‌ನ ಅತಿಥಿಯೂ ಆಗಿರಲಿಲ್ಲ ಅಥವಾ ಅವರ ಜೊತೆ ಯಾವುದೇ ಸಭೆ ನಡೆಸಿದ ಬಗ್ಗೆ ದಾಖಲೆಗಳಿಲ್ಲ ಎಂದು ಖೇರಾ ಹೇಳಿದ್ದಾರೆ. ‘ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಎಪ್‌ಸ್ಟೀನ್ ಭೇಟಿಯ ಬಗ್ಗೆ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ವಕ್ತಾರರಾದ ಪ್ರದೀಪ್ ಭಂಡಾರಿ ಮತ್ತು ಶೆಹಜಾದ್ ಪೂನಾವಾಲಾ, ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಸುಳ್ಳು ಕಥೆ ಕಟ್ಟುತ್ತಿದ್ದಾರೆ’ ಎಂದು ಖೇರಾ ಆರೋಪಿಸಿದ್ದಾರೆ.

ಹರ್ದೀಪ್ ಸಿಂಗ್ ಪುರಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಎಪ್‌ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. (ANI)

YouTube video player



Source link

Leave a Reply

Your email address will not be published. Required fields are marked *