ಬೆಂಗಳೂರಲ್ಲಿ ತೆರಿಗೆ ಕಟ್ಟದ 71 ಆಸ್ತಿಗಳ ಬಹಿರಂಗ ಹರಾಜು; ಚೀಪ್ ರೇಟಿಗೆ ಪ್ರಾಪರ್ಟಿ ಸೇಲ್ ನಿಲ್ಲಿಸಲು ಕೊನೇ ಚಾನ್ಸ್! | Greater Bengaluru West Zone Property Tax Auction Malleshwaram 71 Properties Sat

ಬೆಂಗಳೂರಲ್ಲಿ ತೆರಿಗೆ ಕಟ್ಟದ 71 ಆಸ್ತಿಗಳ ಬಹಿರಂಗ ಹರಾಜು; ಚೀಪ್ ರೇಟಿಗೆ ಪ್ರಾಪರ್ಟಿ ಸೇಲ್ ನಿಲ್ಲಿಸಲು ಕೊನೇ ಚಾನ್ಸ್! | Greater Bengaluru West Zone Property Tax Auction Malleshwaram 71 Properties Sat



ಬೆಂಗಳೂರಲ್ಲಿ ತೆರಿಗೆ ಕಟ್ಟದ 71 ಆಸ್ತಿಗಳ ಬಹಿರಂಗ ಹರಾಜು; ಚೀಪ್ ರೇಟಿಗೆ ಪ್ರಾಪರ್ಟಿ ಸೇಲ್ ನಿಲ್ಲಿಸಲು ಕೊನೇ ಚಾನ್ಸ್! | Greater Bengaluru West Zone Property Tax Auction Malleshwaram 71 Properties Sat

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ವಲಯವು, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 1.14 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 71 ಆಸ್ತಿಗಳನ್ನು ಫೆಬ್ರವರಿ 21 ರಂದು ಬಹಿರಂಗ ಹರಾಜು ಹಾಕಲು ನಿರ್ಧರಿಸಿದೆ. ಹಲವು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಫೆ. 18): ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೆ ಸುಸ್ತಿದಾರರಾಗಿರುವ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮಲ್ಲೇಶ್ವರಂ ವಲಯ-2 ವ್ಯಾಪ್ತಿಯಲ್ಲಿ ಬರುವ ಸುಮಾರು 71 ಆಸ್ತಿಗಳ ಮಾಲೀಕರು ಒಟ್ಟು 1.14 ಕೋಟಿ ರೂಪಾಯಿಗಳ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದು, ಈ ಆಸ್ತಿಗಳನ್ನು ಫೆಬ್ರವರಿ 21 ರಂದು ಬಹಿರಂಗ ಹರಾಜು (Distress Sale) ಮಾಡಲು ತೀರ್ಮಾನಿಸಲಾಗಿದೆ ಎಂದು ಜಂಟಿ ಆಯುಕ್ತರಾದ ಸಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಗೆ ತೆರಿಗೆ ಪಾವತಿ ಅನಿವಾರ್ಯ:

ನಗರದ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ನಿರ್ವಹಣೆಯಲ್ಲಿ ಆಸ್ತಿ ತೆರಿಗೆಯ ಪಾತ್ರ ಬಹುಮುಖ್ಯವಾಗಿದೆ. ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025’ ಮತ್ತು ‘ಆಸ್ತಿ ತೆರಿಗೆ ನಿರ್ಧಾರ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024’ರ ಅಡಿಯಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕರು ವಾರ್ಷಿಕವಾಗಿ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕರಿಗೆ ಅಗತ್ಯವಿರುವ ರಸ್ತೆ, ಚರಂಡಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯುಂಟುಮಾಡುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕ್ರಮಬದ್ಧ ನೋಟಿಸ್ ಜಾರಿ:

ಸುಸ್ತಿದಾರರಿಗೆ ನೇರವಾಗಿ ಹರಾಜು ನೋಟಿಸ್ ನೀಡಿಲ್ಲ, ಬದಲಾಗಿ ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಹಂತದ ಪ್ರಯತ್ನಗಳನ್ನು ಪಾಲಿಕೆ ಮಾಡಿದೆ. ಮೊದಲಿಗೆ ಕಾರಣ ಕೇಳುವ ನೋಟಿಸ್, ನಂತರ ಬೇಡಿಕೆ ಪತ್ರಗಳನ್ನು ಜಾರಿಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ, ಮೊಬೈಲ್ ಸಂದೇಶಗಳು ಹಾಗೂ ಸ್ವತ್ತಿನ ಸ್ಥಳದಲ್ಲಿ ನೋಟಿಸ್ ಅಂಟಿಸುವ ಮೂಲಕವೂ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಪಾಲಿಕೆಯ ಅಧಿಕೃತ ಜಾಲತಾಣದಲ್ಲಿಯೂ ಸುಸ್ತಿದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದರೂ, ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದ ಕಾರಣ ಈಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಹರಾಜು ಪ್ರಕ್ರಿಯೆಯ ವಿವರ:

ದಿನಾಂಕ 17/02/2026ರಂದು ನಡೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಸ್ವತ್ತುಗಳು ಹಾಗೂ ಹೊಸದಾಗಿ ಗುರುತಿಸಲಾದ ಆಸ್ತಿಗಳನ್ನು ಸೇರಿಸಿ ಒಟ್ಟಾರೆಯಾಗಿ ಫೆಬ್ರವರಿ 21ರ ಶನಿವಾರದಂದು ಬೆಳಿಗ್ಗೆ 11:00 ಗಂಟೆಗೆ ಹರಾಜು ಹಾಕಲಾಗುತ್ತದೆ.

ಸ್ಥಳ: ಜಂಟಿ ಆಯುಕ್ತರ ಕಾರ್ಯಾಲಯ, ಮಲ್ಲೇಶ್ವರಂ ವಲಯ-2, ನಂ. 145, 26ನೇ ಅಡ್ಡ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು–560010.

ಆಸಕ್ತ ಸಾರ್ವಜನಿಕರು ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಮಾಲೀಕರಿಗೆ ಪಾರಾಗಲು ಈಗಲೂ ಇದೆ ಅವಕಾಶ!

ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನವೇ ಸುಸ್ತಿದಾರರು ತಮ್ಮ ಬಾಕಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿದರೆ, ಅಂತಹ ಆಸ್ತಿಗಳನ್ನು ಹರಾಜಿನ ಪಟ್ಟಿಯಿಂದ ತಕ್ಷಣವೇ ಕೈಬಿಡಲಾಗುವುದು. ಅಲ್ಲದೆ, ಯಾವುದಾದರೂ ಆಕ್ಷೇಪಣೆಗಳಿದ್ದರೆ ಜಂಟಿ ಆಯುಕ್ತರ ಕಚೇರಿಗೆ ಸಲ್ಲಿಸಲು ಅವಕಾಶವಿದೆ. ಒಟ್ಟಾರೆಯಾಗಿ, ನಗರದ ಅಭಿವೃದ್ಧಿಗೆ ಸಹಕರಿಸಲು ಮತ್ತು ತಮ್ಮ ಸ್ವತ್ತನ್ನು ಉಳಿಸಿಕೊಳ್ಳಲು ತೆರಿಗೆ ಪಾವತಿದಾರರಿಗೆ ಇದು ಕೊನೆಯ ಅವಕಾಶವಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *