Karnataka CM change politics ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕೆಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆಗ್ರಹಿಸಿದ್ದಾರೆ. ಈ ಗೊಂದಲದಿಂದ ಪಕ್ಷ ಹಾಗೂ ಸರ್ಕಾರದ ಇಮೇಜ್‌ಗೆ ಹಾನಿಯಾಗುತ್ತಿದೆ ಎಂದಿದ್ದಾರೆ.
ಮಂಡ್ಯ (ಫೆ.19): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೋ, ಇಲ್ಲವೋ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಪಕ್ಷದ ಜೊತೆ ಸರ್ಕಾರದ ಇಮೇಜ್‌ಗೂ ಹಾನಿಯಾಗಲಿದೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದಾರೆ. ನಿಷ್ಠಾವಂತ ನಾಯಕರಾಗಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಅವರ ಕೊಡುಗೆಯೂ ಇದೆ. ಅವರು ಮುಖ್ಯಮಂತ್ರಿಯಾಗಲು ಅರ್ಹರಾಗಿರುವುದರಿಂದ ಹೈಕಮಾಂಡ್ ಕೂಡಲೇ ನಿರ್ಧಾರ ಪ್ರಕಟಿಸುವುದು ಉತ್ತಮ ಎಂದರು.
ಸಚಿವ ಎಚ್.ಸಿ.ಮಹದೇವಪ್ಪನವರು ಶಾಸಕರನ್ನು ಬೀದಿ ನಾಯಿಗೆ ಹೋಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಾಯಿ, ಪ್ರಾಮಾಣಿಕತೆ ಹಾಗೂ ನಿಯತ್ತಿನ ಸಂಕೇತ. ಹಾಗಾಗಿ, ಪಕ್ಷಕ್ಕೆ ನಿಯತ್ತಾಗಿರುವ ಶಾಸಕರು ಎಂಬ ಅರ್ಥದಲ್ಲಿ ಹೇಳಿರಬೇಕು. ಇನ್ನು, ಡಿ.ಕೆ.ಶಿವಕುಮಾರ್ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ನಿಯತ್ತಾಗಿ ಇರುವವರು. ಕಾಂಗ್ರೆಸ್ ಹೈಕಮಾಂಡ್‌ನ ನಿಯತ್ತಿನ ಸೈನಿಕ ಅವರು. ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಹೈಕಮಾಂಡ್ ಗೆ ನಿಯತ್ತಾಗಿದ್ದಾರೆ ಎಂದರು.
ಎರಡು ಬಾರಿ ಅವರನ್ನು ಮಂತ್ರಿ ಮಾಡಲಿಲ್ಲ, ಈಗ ಸಿಎಂ ಕೂಡ ಆಗಿಲ್ಲ. ಆದರೂ ಅವರು ಪಕ್ಷಕ್ಕೆ ನಿಯತ್ತಾಗಿದ್ದಾರೆ. ಅದಕ್ಕಾಗಿ ಮಹದೇವಪ್ಪನವರು ಹಾಗೆ ಹೇಳಿರಬೇಕು ಎಂದು ಸಚಿವರಿಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಆಪ್ತ ಶಾಸಕರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ಅವರೆಲ್ಲಾ ಏತಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪ್ರಾಯೋಜಕರು ಕರೆದೊಯ್ದಿರಲಿ, ಅವರೇ ದುಡ್ಡು ಹಾಕೊಂಡು ವಿದೇಶಕ್ಕೆ ಹೋಗಿರಲಿ ಉದ್ದೇಶ ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ನಾನೂ ಬೇಕಿದ್ದರೆ, 50 ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗಬಹುದು. ಅದರಿಂದ ಸಿಎಂ ಬದಲಾಯಿಸಲು ಆಗೋಲ್ಲ. ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಪುಲ್‌ಸ್ಟಾಪ್ ಹಾಕಬೇಕು. ಇಲ್ಲದಿದ್ದರೆ ಈ ಗೊಂದಲ ಇನ್ನೂ ಜಾಸ್ತಿಯಾಗುತ್ತೆ ಎಂದರು.
