
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಸಾಂಜೋ ಸುನಿಲ್ ಎಂಬ ಯುವಕ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣವನ್ನು ಸಂಶಯಾಸ್ಪದವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಕಡಬ / ಡಬ್ಲಿನ್: ಕಳೆದ ಕೆಲ ದಿನಗಳಿಂದ ವಿದೇಶದಲ್ಲಿರುವ ಕನ್ನಡಿಗರ ಸಾವಿನ ಪ್ರಕರಣ ಬೆಳಕಿಗೆ ಬರುತ್ತಿದೆ.ಇದೀಗದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಯುವಕನೊಬ್ಬ ಐರ್ಲೆಂಡ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ಸಾಂಜೋ ಸುನಿಲ್ (31) ಎಂದು ಗುರುತಿಸಲಾಗಿದ್ದು, ಅವರು ಡಬ್ಲಿನ್ ನಗರದಲ್ಲಿ ವಾಸವಾಗಿದ್ದರು. ಡಬ್ಲಿನ್ ನಗರದ ಫಿಂಗ್ಲಾಸ್ ಪ್ರದೇಶದ ಚಾರ್ಲ್ಸ್‌ಟೌನ್‌ನಲ್ಲಿ ಇರುವ ಬಾಡಿಗೆ ಮನೆಯಲ್ಲಿ ಸಾಂಜೋ ಸುನಿಲ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣವು ಸಂಶಯಾಸ್ಪದವಾಗಿರುವುದರಿಂದ ಐರ್ಲೆಂಡ್ ಪೊಲೀಸರು ಆತ್ಮ*ಹತ್ಯೆ ಹಾಗೂ ಇತರೆ ಎಲ್ಲಾ ಕಾರಣಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ.
ಕಡಬ ಮೂಲದ ಯುವಕ
ಸಾಂಜೋ ಸುನಿಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಗ್ರಾಮದ ನಿವಾಸಿಯಾಗಿದ್ದಾರೆ. ಒಂದು ವರ್ಷದ ಹಿಂದೆ ಕಡಬ ಮೂಲದ ಯುವತಿಯನ್ನು ವಿವಾಹವಾಗಿದ್ದು, ಅವರ ಪತ್ನಿ ಕೂಡ ಐರ್ಲೆಂಡ್‌ನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹಿಂದೆ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಸುನೀಲ್
ಸುನಿಲ್ ಅವರು ಹಿಂದಿನಿಂದಲೂ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದರು. ಪತ್ನಿ ಐರ್ಲೆಂಡ್‌ನಲ್ಲಿ ಉದ್ಯೋಗದಲ್ಲಿದ್ದ ಹಿನ್ನೆಲೆ, ಕೆಲ ತಿಂಗಳ ಹಿಂದಷ್ಟೇ ಸುನಿಲ್ ಅವರು ಇಸ್ರೇಲ್‌ನ ಕೆಲಸ ಬಿಟ್ಟು ಐರ್ಲೆಂಡ್‌ಗೆ ಸ್ಥಳಾಂತರಗೊಂಡಿದ್ದರು. ದಂಪತಿ ಡಬ್ಲಿನ್‌ನ ಫಿಂಗ್ಲಾಸ್ ಪ್ರದೇಶದಲ್ಲಿ ವಾಸವಾಗಿದ್ದರು.
ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ
ಲಭ್ಯವಾದ ಮಾಹಿತಿಯ ಪ್ರಕಾರ, ಪತ್ನಿ ಕೆಲಸಕ್ಕೆ ತೆರಳಿದ್ದ ನಂತರ ಈ ದುರ್ಘಟನೆ ನಡೆದಿದೆ. ಮನೆಗೆ ಮರಳಿದಾಗ ಸುನಿಲ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆ ಮುಂದುವರಿಕೆ
ಪ್ರಾಥಮಿಕವಾಗಿ ಆತ್ಮ*ಹತ್ಯೆ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ಸಾಧ್ಯತೆಯನ್ನು ತಳ್ಳಿಹಾಕದೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಸಾಂಜೋ ಸುನಿಲ್ ಅವರ ಅಕಾಲಿಕ ಮರಣದ ಸುದ್ದಿ ಕಡಬ ತಾಲೂಕು ಸೇರಿದಂತೆ ಅವರ ಊರಿನಲ್ಲಿ ಶೋಕದ ವಾತಾವರಣವನ್ನು ಮೂಡಿಸಿದೆ. ವಿದೇಶದಲ್ಲಿ ದುಡಿಯುತ್ತಿದ್ದ ಯುವಕನ ನಿಗೂಢ ಸಾವು ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರನ್ನು ತೀವ್ರ ಆಘಾತಕ್ಕೆ ಒಳಪಡಿಸಿದೆ.