
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಅವರನ್ನು ದರೋಡೆಕೋರನೊಬ್ಬ ಕೊಲೆ ಮಾಡಿದ್ದಾನೆ. ಒಂಟಿಯಾಗಿ ವಾಸಿಸುತ್ತಿದ್ದ ಅವರ ಶವವು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆಯಾಗಿದ್ದು, ಕಳ್ಳತನದ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
99 ವರ್ಷದ ವೃದ್ಧೆಯ ಕೊಂದ ಪಾಪಿ:
ಹೋಶಿಯಾರ್‌ಪುರ: ಆ ಅಜ್ಜಿಗೆ 99 ವರ್ಷ ವಯಸ್ಸಾಗಿತ್ತು. ಶತಾಯುಷಿ ಎನಿಸಿಕೊಳ್ಳುವುದಕ್ಕೆ ಕೇವಲ ಕೆಲ ತಿಂಗಳಷ್ಟೇ ಬಾಕಿ ಇತ್ತು ಆದರೆ ಪಾಪಿಯೊಬ್ಬನ ಕೈಗೆ ಸಿಕ್ಕಿ 100 ವರ್ಷ ತುಂಬುವ ಮೊದಲೇ ಅವರು ಶವವಾಗಿದ್ದಾರೆ. ಹೌದು ಪಂಜಾಬ್‌ನ ಹೋಶಿಯಾರ್‌ಪುರ ಎಂಬ ಹಳ್ಳಿಯೊಂದರಲ್ಲಿ ದರೋಡೆಕೋರನೋರ್ವ 99 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಅವರ ಶವವನ್ನು ಕಬ್ಬಿಣದ ಪೆಟ್ಟಿಗೆಯೊಳಗೆ ತುಂಬಿ ಪರಾರಿಯಾಗಿದ್ದಾನೆ. ಮೃತ ವೃದ್ಧೆಯನ್ನು ಜೋಗಿಂದರ್ ಕೌರ್ ಎಂದು ಗುರುತಿಸಲಾಗಿದೆ.
ಶವ ಟ್ರಂಕ್‌ಗೆ ತುಂಬಿ ಎಸ್ಕೇಪ್:
ಜೋಗಿಂದರ್ ಕೌರ್ ಚಬ್ಬೇವಾಲ್ ಪ್ರದೇಶದ ಭಾಮ್ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ಸಂಜೆ ಆಕೆಯ ಶವ ಪತ್ತೆಯಾಗಿದ್ದು, ಅವರ ಶವವನ್ನು ಕಬ್ಬಿಣದ ಟ್ರಂಕೊಳಗೆ ತುಂಬಲಾಗಿತ್ತು. ಆಕೆಯ ತಲೆಯಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿದ ವ್ಯಕ್ತಿಯನ್ನು ಅದೇ ಗ್ರಾಮದ ನಿವಾಸಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಅವಲಕ್ಕಿ ತೊಳಿದೇ ಬಳಸ್ತಿರಾ: ಹಾಗಿದ್ರೆ ಈ ವೀಡಿಯೋ ನೋಡಲೇ ಬೇಕು
ಪೊಲೀಸರ ಪ್ರಕಾರ, ಪ್ರತಿದಿನ ಸಂಜೆ ವೃದ್ಧ ಮಹಿಳೆಯ ಮನೆಗೆ ಹಾಲು ತಲುಪಿಸುವ ವ್ಯಕ್ತಿಯೊಬ್ಬರು ಬುಧವಾರ ಹಿಂದಿನ ಸಂಜೆ ಅವರ ಮನೆಯ ಬಾಗಿಲಿನಲ್ಲಿ ಇಟ್ಟಿದ ಹಾಲಿನ ಬಾಟಲ್ ಮುಟ್ಟದೇ ಬಿದ್ದಿರುವುದನ್ನು ಗಮನಿಸಿ ನೆರೆಹೊರೆಯ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ನಂತರ ನೆರೆಹೊರೆಯ ಮನೆಯವರು ಬಂದು ವೃದ್ದ ಮಹಿಳೆಗಾಗಿ ಮನೆಯೊಳಗೆ ಹುಡುಕಾಟ ನಡೆಸಿ ಪರಿಶೀಲಿಸಿದಾಗ ಮನೆಯಲ್ಲಿದ್ದ ಕಬ್ಬಿಣದ ಟ್ರಂಕಿನೊಳಗೆ ಅವರ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಮೂರು ಗಂಡು ಮಕ್ಕಳನ್ನು ಕೊಂದು 18 ವರ್ಷ ಜೈಲಿಗೆ ಹೋಗಿ ಬಂದವನಿಂದ ಆಶ್ರಯ ನೀಡಿದ ಮಹಿಳೆಯ ಕೊಲೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅದೇ ಗ್ರಾಮದ ನಿವಾಸಿ ಡೇನಿಯಲ್ ಎಂದು ಗುರುತಿಸಲಾದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ. ಕಳ್ಳತನದ ಉದ್ದೇಶದಿಂದ ಆರೋಪಿ ಮಹಿಳೆಯ ಮನೆಗೆ ನುಗ್ಗಿ ದರೋಡೆ ಪ್ರಯತ್ನದ ಸಮಯದಲ್ಲಿ ಆಕೆಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆಗೆ ಶಿಕ್ಷೆ) ಮತ್ತು 331(3) (ಮನೆಯೊಳಗೆ ನುಗ್ಗುವುದು ಅಥವಾ ಅಪರಾಧ ಮಾಡಲು ಮನೆಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.